ದಾವಣಗೆರೆ: ಚುನಾವಣಾ ಪ್ರಚಾರ, ಅವಿಶ್ರಾಂತ ತಿರುಗಾಟಗಳ ನಂತರ ಅಭ್ಯರ್ಥಿಗಳ ರಿಲ್ಯಾಕ್ಸ್ ಮೂಡ್‍

Update: 2018-05-13 17:12 GMT

ದಾವಣಗೆರೆ,ಮೇ.13: 2018ರ ವಿಧಾನಸಭಾ ಚುನಾವಣೆ ನಡೆದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಇತ್ತ ಚುನಾವಣೆ ಮುಗಿಸಿದ ಎಲ್ಲಾ ಪಕ್ಷಗಳು ಅಭ್ಯರ್ಥಿಗಳು ಇಷ್ಟು ದಿನದ ಚುನಾವಣೆ ಪ್ರಚಾರ, ಅವಿಶ್ರಾಂತ ತಿರುಗಾಟಗಳ ಜಂಜಾಟ ಮರೆತು ಭಾನುವಾರ ರಿಲ್ಯಾಕ್ಸ್ ಮೂಡ್‍ನಲ್ಲಿದ್ದರು.

ಕೆಲ ಅಭ್ಯರ್ಥಿಗಳು ಮನೆಗಳಲ್ಲಿ ಕುಟುಂಬಸ್ಥರೊಂದಿಗೆ ಸಮಯ ಕಳೆದರೆ, ಕೆಲವರು ಟಿವಿ ನೋಡಿದರು. ಮತ್ತೆ ಕೆಲವರು ಕಾರ್ಯಕರ್ತರೊಂದಿಗೆ ಮತದಾನ, ಸೋಲು ಗೆಲವಿನ ಕುರಿತು ಆಪ್ತರೊಂದಿಗೆ, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ. ರವೀಂದ್ರನಾಥ್ ಬೆಳಗ್ಗೆಯಿಂದಲೇ ಕುಟುಂಬಸ್ಥರೊಂದಿಗೆ ಹರಟೆ ಹೊಡೆಯುತ್ತಾ, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಮಧ್ಯಾಹ್ನದವರೆಗೂ ಸಮಯ ಕಳೆದು, ಸಂಜೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣೆ ಕುರಿತು ಚರ್ಚೆ ನಡೆಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರು ಬೆಳಗ್ಗೆ ಮದುವೆ ಕಾರ್ಯವೊಂದಕ್ಕೆ ತೆರಳಿ ನಂತರ ಮನೆಯಲ್ಲಿಯೇ ಸಮಯ ಕಳೆದರು. ಭೇಟಿಗೆ ಬಂದ ಕೆಲವು ಕಾರ್ಯಕರ್ತರೊಂದಿಗೆ ಚುನಾವಣೆ ಆಗುಹೋಗುಗಳ ಕುರಿತು ಮಾತುಕತೆ ನಡೆಸಿದರೆ, ಪುತ್ರ, ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಸಹ ಕುಟುಂಬಸ್ಥರೊಂದಿಗೆ ಸಮಯ ಕಳೆದರು.

ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಯಶವಂತರಾವ್ ಮನೆಯಲ್ಲಿಯೇ ಕುಟುಂಬಸ್ಥರೊಂದಿಗೆ ದಿನಕಳೆದು, ಕೆಲ ಹೊತ್ತು ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣಾ ಆಗುಹೋಗುಗಳ ಕುರಿತು ಚರ್ಚೆ ನಡೆಸುತ್ತಾ ಸಮಯ ಕಳೆದರು.

ಹರಿಹರದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಶಿವಶಂಕರ್ ತಮ್ಮ ದಾವಣಗೆರೆ ನಿವಾಸದಲ್ಲಿ ದಿನಕಳೆದ್ದಲ್ಲದೇ, ಕೆಲ ಸಮಯ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮತದಾನ, ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಮಪ್ಪ, ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್ ಸಹ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಚನ್ನಗಿರಿ ಕ್ಷೇತ್ರದ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ದಾವಣಗೆರೆಯಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ಇಡೀ ದಿನ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ದಿನ ಕಳೆದರು. ಜೆಡಿಎಸ್ ಅಭ್ಯರ್ಥಿ ಹೊದಿಗೆರೆ ರಮೇಶ್, ಬಿಜೆಪಿ ಮಾಡಾಳ್ ವಿರೂಪಾಕ್ಷಪ್ಪ ಕಾರ್ಯಕರ್ತರೊಂದಿಗೆ ದಿನಪೂರ್ತಿ ಕಳೆದರು.
ಹೊನ್ನಾಳಿಯಲ್ಲಿ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯ ಕೆಲವೊತ್ತು ವಿಶ್ರಾಂತಿ ಪಡೆದು, ನಂತರ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ಮುಳುಗಿದ್ದರು. ಹಾಗೂ ಮತದಾರರಿಗೆ ಅಭಿನಂದನೆ ಸಹ ತಿಳಿಸಿದರು. ಅದೇರೀತಿ, ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಸಹ ಕುಟುಂಬಸ್ಥರೊಂದಿಗೆ ಕೆಲವೊತ್ತು ಕಾಲಕಳೆದು ತದನಂತರ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಪಿ. ರವೀಂದ್ರ ಪರವೂರಿಗೆ ತೆರಳಿದ್ದರು. ಜೆಡಿಎಸ್ ಅಭ್ಯರ್ಥಿ ಕೊಟ್ರೇಶ್ ಸ್ವಗ್ರಾಮ ಅರಸೀಕೆರೆಯಲ್ಲಿ ದಿನಕಳೆದರು. ಬಿಜೆಪಿಯ ಕರುಣಾಕರರೆಡ್ಡಿ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ನಂತರ ಮನೆಯಲ್ಲಿ ಸಮಯ ಕಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News