ದಾವಣಗೆರೆ: ಶೇ. 75.59 ರಷ್ಟು ಮತದಾನ; ಮತ ಎಣಿಕೆಗೆ ಸಿದ್ಧತೆ
ದಾವಣಗೆರೆ,ಮೇ,13: 2018ರ ವಿಧಾನಸಭಾ ಚುನಾವಣೆ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ, ಹಣೆಬರಹವನ್ನು ಹೊತ್ತ ಎಲೆಕ್ಟ್ರಾನಿಕ್ ಮತಯಂತ್ರಗಳು ದಾವಣಗೆರೆ ವಿಶ್ವವಿದ್ಯಾಲಯದಲ್ಲಿರುವ ಸ್ಟ್ರಾಂಗ್ ರೂಮ್ ಸೇರಿವೆ. ಮೇ 15ಕ್ಕೆ ಫಲಿತಾಂಶ ಹೊರಬೀಳಲಿದೆ.
ಸ್ಟ್ರಾಂಗ್ ರೂಮ್‍ಗೆ ಬಿಗಿ ಬಂದೋಬಸ್ತ್ ಭದ್ರತೆ ಒದಗಿಸಲಾಗಿದೆ. ಭದ್ರತಾ ಪಡೆ ಸ್ಟ್ರಾಂಗ್ ರೂಮ್ ಅನ್ನು ದಿನದ 24 ಗಂಟೆಯೂ ಕಾವಲು ಕಾಯುತ್ತಿವೆ. ಎಲ್ಲಾ 8 ವಿಧಾನಸಭಾ ಕ್ಷೇತ್ರದ ಮತ ಏಣಿಕೆ ಕಾರ್ಯ ದಾವಣಗೆರೆ ವಿವಿಯಲ್ಲಿ ನಡೆಯಲಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇಲ್ಲಿ ಭದ್ರವಾಗಿ ಇಡಲಾಗಿದ್ದು, ಮತಯಂತ್ರಗಳನ್ನು ಭದ್ರವಾಗಿಟ್ಟಿರುವ ದಾವಣಗೆರೆ ವಿವಿಯ ಆವರಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮೇ 15ರಂದು ಮತ ಎಣಿಕೆ ನಡೆಯುವವರೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಭದ್ರತೆ ಒದಗಿಸಲಾಗುತ್ತದೆ. ಮತಯಂತ್ರವಿರುವ ಕೊಠಡಿಯ ಹೊರಭಾಗದಲ್ಲಿ ಸೂಕ್ತ ಭದ್ರತೆ ಒದಗಿಸಲಾಗಿದೆ. ಸ್ಟ್ರಾಂಗ್ ರೂಮ್ ಗಳಿಗೆ ಮತ ಏಣಿಕೆ ನಡೆಯುವವರೆಗೂ ದಿನದ 24 ಗಂಟೆಯೂ ಭದ್ರತೆ ಒದಗಿಸಲಾಗಿದೆ.
ಶೇ. 75.59 ರಷ್ಟು ಮತದಾನ: ದಾವಣಗೆರೆ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನವಾಗಿದ್ದು, ಶೇ. 75.59 ರಷ್ಟು ಮತದಾನವಾಗಿದೆ. ಹೊನ್ನಾಳಿ ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕ ಮತದಾನವಾಗಿದ್ದು, ದಾವಣಗೆರೆ ಉತ್ತರ ಕೇತ್ರ ಕೊನೆಯ ಸ್ಥಾನದಲ್ಲಿದೆ.
ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಶೇ. 75.43 ರಷ್ಟು ಮತದಾನವಾಗಿದೆ. ಜಗಳೂರು ಶೇ. 77.51, ಹೊನ್ನಾಳಿ ಶೇ. 82.80, ಮಾಯಕೊಂಡ ಶೇ. 80.92, ದಾವಣಗೆರೆ ದಕ್ಷಿಣ ಶೇ. 65.62, ಹರಪನಹಳ್ಳಿ ಶೇ. 81.63, ಹರಿಹರ ಶೇ. 77.00, ದಾವಣಗೆರೆ ಉತ್ತರ ಶೇ. 63.87 ರಷ್ಟು ಮತದಾನವಾಗಿದೆ.
ವಿಕಲಚೇತನರಿಂದ ದಾಖಲೆ ಪ್ರಮಾಣದ ಮತದಾನ
ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ವಿಕಲಚೇತನರು ದಾಖಲೆಯ ಶೇ. 96.04 ರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ದಾಖಲೆ ಪ್ರಮಾಣದ ಮತದಾನವಾಗಲು ಕಾರಣರಾದ ವಿಕಲಚೇತನ ಮತದಾರರನ್ನು ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್.ರಮೇಶ್ ಅವರು ಅಭಿನಂದಿಸಿದ್ದಾರೆ.
ವಿಧಾನ ಸಭಾ ಕ್ಷೇತ್ರವಾರು ಮತದಾನವಾಗಿರುವ ವಿವರ: ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ 1673 ವಿಕಲಚೇತನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ದಾವಣಗೆರೆ ಉತ್ತರದಲ್ಲಿ 971, ದಾವಣಗೆರೆ ದಕ್ಷಿಣ-988, ಹರಪನಹಳ್ಳಿ-2282, ಹರಿಹರ-2113, ಹೊನ್ನಾಳಿ-2779, ಜಗಳೂರು-1806 ಹಾಗೂ ಮಾಯಕೊಂಡ-2188 ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 15409 ವಿಕಲಚೇತನ ಮತದಾರರ ಪೈಕಿ, 14800 ವಿಕಲಚೇತನರು ಮತ ಚಲಾಯಿಸುವ ಮೂಲಕ ವಿಕಲಚೇತನರ ಮತದಾರರಲ್ಲಿ ಶೇಖಡಾವಾರು 96.04 ಮತದಾನವಾದಂತಾಗಿದೆ.