×
Ad

ಮಾಜಿ ಸಚಿವ ಕೆ.ಎಚ್. ಹನುಮೇಗೌಡ ನಿಧನ: ಸಾರಾಪುರದಲ್ಲಿ ಅಂತ್ಯಸಂಸ್ಕಾರ

Update: 2018-05-14 15:17 IST

ಹಾಸನ, ಮೇ 14: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಮಾಜಿ ಸಚಿವ ಕೆ.ಎಚ್. ಹನುಮೇಗೌಡ (89) ರವಿವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.

ನಗರದ ಕುವೆಂಪುನಗರ, ಅರವಿಂದ ಶಾಲೆ ಬಳಿ ವಾಸವಾಗಿದ್ದ ಹನುಮೇಗೌಡರು ಕೆಲ ತಿಂಗಳಿನಿಂದ ಆರೋಗ್ಯ ಹದಗೆಟಿತ್ತು. ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಸಂಜೆ 6 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಬಿಜೆಪಿ ಅಭ್ಯರ್ಥಿ ಪ್ರೀತಮ್ ಜೆ. ಗೌಡ, ಜೆಡಿಎಸ್ ಮುಖಂಡ ಕೆ.ಎಂ. ರಾಜೇಗೌಡ ಸೇರಿದಂತೆ ವಿವಿಧ ಪಕ್ಷದ ನಾಯಕರು ಆಗಮಿಸಿ ಅಂತಿಮ ದರ್ಶನ ಪಡೆದರು. ಮದ್ಯಾಹ್ನ 12 ಗಂಟೆಗೆ ಮೃತ ದೇಹವನ್ನು ಮನೆಯಿಂದ ತುರ್ತು ವಾಹನಕ್ಕೆ ಇಡಲಾಯಿತು. ನಂತರ ತಾಲೂಕಿನ ಕೆ. ಬ್ಯಾಡರಹಳ್ಳಿಯ ಬಳಿ ಇರುವ ತಮ್ಮ ಸ್ವಗೃಹ ಸಾರಾಪುರ ತೋಟಕ್ಕೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು. ಅವರಿಗೆ ಮೂವರು ಪತ್ರರು ಹಾಗೂ ಇಬ್ಬರೂ ಪುತ್ರಿಯರು ಇದ್ದಾರೆ.

1972 ರಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಶಾಸಕರಾಗಿ ಗುರುತಿಸಿಕೊಂಡಿದ್ದರು. ಹಾಸನ ಕ್ಷೇತ್ರದಲ್ಲೆ ನಾಲ್ಕು ಬಾರಿ ಶಾಸಕನಾಗಿ ಮತ್ತು ಸಚಿವರಾಗಿ ರಾಜ್ಯ ಸರಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಪ್ತ ಜನತಾ ಪಕ್ಷದಿಂದ ಎ.ಸಿ. ಮುನಿವೆಂಕಟೇಗೌಡ ಎದುರು ಸ್ಪರ್ದೆ ಮಾಡಿದ ಹನುಮೇಗೌಡರು ಗೆಲುವು ಸಾಧಿಸಿದ್ದರು. ದೇವೇಗೌಡರ ವಿರುದ್ಧ ರಾಜಕೀಯ ಮಾಡಿ ಬೆಳೆದವರು. 1994 ರಲ್ಲಿ ವೀರಪ್ಪ ಮೊಯ್ಲಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ವೇಳೆ ಸಚಿವರಾಗಿ 5 ತಿಂಗಳ ಕಾಲ ಸೇವೆ ಸಲ್ಲಿಸಿದ್ದಾರೆ.  ಮಾಜಿ ಸಚಿವ ದಿವಂಗತ ಶ್ರೀಕಂಠಯ್ಯ ಹಾಗೂ ಜಿ. ಪುಟ್ಟಸ್ವಾಮಿ ಅವರ ವಿರೋಧಿಯಾಗಿ ಬಿಜೆಪಿ ಪಕ್ಷಕ್ಕೆ ಪಾದರ್ಪಣೆ ಮಾಡಿ, 1999 ರಲ್ಲಿ ಬಿಜೆಪಿಯಿಂದಲೇ ಶಾಸಕರಾಗಿ ಆಯ್ಕೆಗೊಂಡರು. ಬಿಜೆಪಿ ತೊರೆದು ನಂತರ ಬಿಎಸ್‌ಪಿ ಪಕ್ಷಕ್ಕೆ ಸೇರಿ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ನಂತರದಲ್ಲಿ 1996 ಮತ್ತು 2009 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದರೂ ಜಯಗಳಿಸಲಿಲ್ಲ.

ದಾಸರಕೊಪ್ಪಲು ಭಾಗದಲ್ಲಿ ಕೆಎಸ್‌ಬಿ ಬಡಾವಣೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡ ಜಾಗವನ್ನು ಬಿಡಿಸಲು ಹೋರಾಟ ಮಾಡಿ ಗಮನ ಸೆಳೆದಿದ್ದರು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದು ಭೂಮಿಯನ್ನು ಡಿನೋಟಿಪಿಕೇಷನ್ ಮಾಡಿಸುವಲ್ಲಿ ಸಫಲರಾಗಿ ದ್ದರು. ನಂತರದ ದಿನಗಳಲ್ಲಿ ರಾಜಕೀಯದಿಂದ ದೂರ ಇದ್ದರು. ನೇರ ನುಡಿ ಇರುವ ಹನುಮೇಗೌಡರು ಯಾವ ಸಂದರ್ಭದಲ್ಲೂ ಹೆದರುತ್ತಿರಲಿಲ್ಲ. ತಮ್ಮ ಗಟ್ಟಿತನವನ್ನು ಕೊನೆ ಉಸಿರು ಇರುವವರೆಗೂ ಅವರಲ್ಲಿ ಇತ್ತು.

ಅಂತಿಮ ದರ್ಶನ ಪಡೆದ ಎಚ್.ಡಿ. ದೇವೇಗೌಡ

ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಕೆ.ಎಚ್. ಹನುಮೇಗೌಡ (89) ಅವರ ಅಂತಿಮ ದರ್ಶನವನ್ನು ಸೋಮವಾರ ಬೆಳಗ್ಗೆ ಪಡೆದರು.

ನಗರದ ಕುವೆಂಪು ನಗರ, ಅರವಿಂದ ಶಾಲೆ ಬಳಿ ವಾಸವಾಗಿರುವ ಹನುಮೇಗೌಡರ ನಿವಾಸಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪುಷ್ಪವನ್ನು ಅರ್ಪಿಸಿದರು. ನಂತರ ಕೆಲ ಸಮಯ ಮೃತ ದೇಹದ ಮುಂದೆಯೇ ಕುಳಿತರು. ಹನುಮೇಗೌಡರ ಬಗ್ಗೆ ಕೆಲ ಸಮಯ ಆಪ್ತರ ಜೊತೆ ಚರ್ಚೆ ನಡೆಸಿದರು. ಮನೆಯಿಂದ ಹೊರ ಬಂದ ದೇವೇಗೌಡರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, 1972 ರಲ್ಲಿ ರಾಜಕೀಯ ಪ್ರವೇಶ ಮಾಡಿದ ಹನುಮೇಗೌಡರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಹಾಸನ ಕ್ಷೇತ್ರದಲ್ಲೆ ನಾಲ್ಕು ಬಾರಿ ಶಾಸಕನಾಗಿ ಮತ್ತು ಸಚಿವರಾಗಿ ರಾಜ್ಯ ಸರಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ರಾಜಕಾರಣಿಯಾಗಿರುವ ಇವರು ನೇರ ನುಡಿ ಮಾತನಾಡುವ ಗುಣ ಬೆಳೆಸಿಕೊಂಡಿದ್ದರು ಎಂದು ಹೇಳಿದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News