×
Ad

ಚಿಕ್ಕಮಗಳೂರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ನಿಶ್ಚಿತ: ಭೋಜೇಗೌಡ

Update: 2018-05-14 16:54 IST

ಚಿಕ್ಕಮಗಳೂರು,ಮೇ.14:  ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನೂರಕ್ಕೆ ನೂರು ಶತಸಿದ್ಧ. ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಜೆಡಿಎಸ್ ರಾಜ್ಯ ಮುಖಂಡ ಎಸ್. ಎಲ್.ಬೋಜೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಐದು ವರ್ಷಗಳ  ದುರಾಡಳಿತ ಹಾಗೂ ಕ್ಷೇತ್ರದಲ್ಲಿ ಶಾಸಕ ಸಿ.ಟಿ.ರವಿ ಅವರ 15 ವರ್ಷಗಳ ಆಡಳಿತ ವೈಫಲ್ಯ, ಜನವಿರೋಧಿ ಅಲೆ ಜನತೆಗೆ ಮುಟ್ಟಿಸುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ನೀಡಿರುವ ಪ್ರಣಾಳಿಕೆ ಜನರಲ್ಲಿ ನಂಬಿಕೆ ಮೂಡಿಸಿದೆ. ಜನೋಪಯೋಗಿ ಕಾರ್ಯಕ್ರಮ ಮತಗಳಾಗಿ ಪರಿವರ್ತನೆಯಾಗಿವೆ. ಜಿಲ್ಲೆಯ ಸರಕಾರಿ ಅಧಿಕಾರಿ ವರ್ಗ ಜೆಡಿಎಸ್ ಪರ ಮತ ಚಲಾಯಿಸಿದ್ದಾರೆ. ಜಿಲ್ಲೆಯ ಐದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಎಸ್.ಎಲ್. ಧಮೇಗೌಡ ಮಾತನಾಡಿ, ಎಸ್.ಬಿದರೆ, ಸಿಂದಗೆರೆ, ಪಿಳ್ಳೇನಹಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಉತ್ತಮ ಜನಾಭಿಪ್ರಾಯ ಜೆಡಿಎಸ್‍ಗೆ ವ್ಯಕ್ತವಾಗಿದೆ. ಈ ಭಾಗದಲ್ಲಿ 10 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆ ಜೆಡಿಎಸ್ ಅಭ್ಯರ್ಥಿ ಪಡೆದುಕೊಳ್ಳಲಿದ್ದಾರೆ. ಪಟ್ಟಣ ಪ್ರದೇಶದಲ್ಲಿಯೂ ಉತ್ತಮ ಅಭಿಪ್ರಾಯವಿದೆ ಎಂದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡದಿರುವುದು ಜೆಡಿಎಸ್‍ಗೆ ಲಾಭದಾಯಕವಾಗಿದೆ. ಐದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಗೆಲುವು ಶತಸಿದ್ದ ಎಂದರು. 

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್ ಮಾತನಾಡಿ, ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರ ಬೀಳಲಿದೆ. ಜೆಡಿಎಸ್ ಪಕ್ಷದ ಪ್ರಣಾಳಿಕೆ ನಮಗೆ ಶ್ರೀರಕ್ಷೆಯಾಗಿದೆ. ಹಣ- ಹೆಂಡದಿಂದ ಚುನಾವಣೆ ಗೆಲ್ಲಬಹುದು ಎಂಬ ರಾಷ್ಟ್ರೀಯ ಪಕ್ಷಗಳ ಊಹೆ ಹುಸಿಯಾಗಲಿದೆ. ನೂರಕ್ಕೆ ನೂರು ಜೆಡಿಎಸ್ ಅಭ್ಯರ್ಥಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಸಿ.ಟಿ.ರವಿ 15 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಮಾಡದಿರುವ ಜನವಿರೋಧಿ ಅಲೆಯ ಲಾಭ ಜೆಡಿಎಸ್‍ಗೆ ಆಗಿದೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನಡೆಸದಿರುವುದು ಜೆಡಿಎಸ್‍ಗೆ ಲಾಭ ತಂದು ಕೊಟ್ಟಿದೆ ಎಂದರು. ಮತದಾರರು ಜೆಡಿಎಸ್ ಪರ ಇದ್ದಾರೆ. ಜೆಡಿಎಸ್ ಪಕ್ಷ ನೀಡಿರುವ ಪ್ರಣಾಳಿಕೆ ರಾಷ್ಟ್ರೀಯ ಪಕ್ಷಗಳು ನೀಡಿಲ್ಲ. ರಾಜ್ಯದ ಸಮಸ್ಯೆ, ಜಿಲ್ಲೆಯ ಸಮಸ್ಯೆ ಬಗ್ಗೆ ರಾಷ್ಟ್ರೀಯ ಪಕ್ಷಗಳು ಗಮನಹರಿಸಿಲ್ಲ ಎಂದ ಅವರು ಹೆಚ್. ಡಿ. ಕುಮಾರಸ್ವಾಮಿ ಅಧಿಕಾರ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿರುವುದು ಜನರ ಹೃದಯ ಮುಟ್ಟಿದೆ ಎಂದರು.

ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್ ಮಾತನಾಡಿ, ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದರು. ಬಿಜೆಪಿ 15 ವರ್ಷ ಆಡಳಿತಕ್ಕೆ ತೆರೆ ಬಿಳಲಿದೆ. ಎಲ್ಲಾ ಸಮುದಾಯದವರು ಜೆಡಿಎಸ್ ಬೆಂಬಲಿಸಿದ್ದಾರೆ. ಐದು ಸಾವಿರ ಮತಗಳ ಮೇಲ್ಪಟ್ಟು ಗೆಲುವು ಸಾಧಿಸುತ್ತೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಹೊಲದಗದ್ದೆ ಗಿರೀಶ್, ಜಯರಾಜ್ ಅರಸ್, ಭೈರೇಗೌಡ ಉಪಸ್ಥಿತರಿದ್ದರು.

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೇ.21ರಂದು ನಾಮಪತ್ರ ಸಲ್ಲಿಸುವುದಾಗಿ ಎಸ್.ಎಲ್. ಬೋಜೇಗೌಡ ತಿಳಿಸಿದರು. ನಾಮಪತ್ರ ಸಲ್ಲಿಕೆಗೆ ಮೇ.22 ಕೊನೆಯ ದಿನವಾಗಿದ್ದು, ಜೂನ್.8ರಂದು ಮತದಾನ ನಡೆಯಲಿದೆ. ಶಿಕ್ಷಕರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

'ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನತೆಯ ನಾಡಿ ಮಿಡಿತ ಅರಿಯುವಲ್ಲಿ ಮೂರು ಪಕ್ಷಗಳು ವಿಫಲವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು".
-ಎಸ್. ಎಲ್. ಬೋಜೇಗೌಡ. ಜೆಡಿಎಸ್ ರಾಜ್ಯ ಮುಖಂಡ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News