ಎಸ್‍ಟಿಜೆ ಕಾಲೇಜಿನಲ್ಲಿ ಮತ ಎಣಿಕೆಗೆ ಅಗತ್ಯ ಸಿದ್ಧತೆ: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2018-05-14 11:28 GMT

ಚಿಕ್ಕಮಗಳೂರು, ಮೇ 14: ಜಿಲ್ಲೆಯಾದ್ಯಂತ ಮೇ 12ರಂದು ನಡೆದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಮೇ 15ರಂದು ನಗರದ ಶ್ರೀತರಳಬಾಳು ಜಗದ್ಗುರು ಮಹಿಳಾ ಕಾಲೇಜಿನಲ್ಲಿ ನಡೆಯಲಿದೆ. ಮತದಾರರು ದಾಖಲಿಸಿರುವ ಮತಯಂತ್ರಗಳನ್ನು ಕಾಲೇಜಿನ 10 ಸ್ಟ್ರಾಂಗ್ ರೂಮ್‍ಗಳಲ್ಲಿ ಭಾರೀ ಭದ್ರತೆಯಲ್ಲಿ ಶೇಖರಿಸಿಡಲಾಗಿದ್ದು, ಮತ ಎಣಿಕೆಗಾಗಿ ಅಗತ್ಯ ಇರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 15ರಂದು ಬೆಳಗ್ಗೆ 7.30 ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸರಕಾರಿ ಅಧಿಕಾರಿಗಳು, ನೌಕರರು ಚಲಾಯಿಸಿದ ಪೋಸ್ಟಲ್ ಬ್ಯಾಲೆಟ್ ಪೇಪರ್ ಮತಗಳ ಎಣಿಕೆ ನಡೆಯಲಿದೆ. ಬಳಿಕ ಬೆಳಗ್ಗೆ 8ಕ್ಕೆ ಇವಿಎಂ ಮತಗಳಲ್ಲಿ ದಾಖಲಾದ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದ ಅವರು, ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಜಿಲ್ಲೆಯ 7514 ಸರಕಾರಿ ಅಧಿಕಾರಿಗಳು ಹಾಗೂ ನೌಕರರ ಪೋಸ್ಟಲ್ ಮತಗಳ ಪೈಕಿ 3225 ಅಂಚೆ ಮತಗಳು ಸ್ವೀಕೃತವಾಗಿದ್ದು, ಉಳಿದವುಗಳನ್ನು ಅಂಚೆ ಇಲಾಖಾಧಿಕಾರಿಗಳು ಸಂಜೆಯೊಳಗೆ, ಇಲ್ಲವೆ ಮಂಗಳವಾರ ಮತ ಎಣಿಕೆಗೂ ಮುನ್ನ ತಲುಪಿಸಲು ಸೂಚಿಸಲಾಗಿದೆ. ನಿಗದಿತ ಸಮಯಕ್ಕೆ ಅಂಚೆ ಮತಗಳನ್ನು ತಲುಪಿಸದಿದ್ದಲ್ಲಿ ಅವುಗಳನ್ನು ತಿರಸ್ಕೃತ ಮತಗಳೆಂದು ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಎಸ್‍ಟಿಜೆ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ತರೀಕೆರೆ, ಕಡೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳ ಮತ ಎಣಿಕೆ ಕಾರ್ಯ ತಲಾ ಒಂದೊಂದು ಪ್ರತ್ಯೇಕ ಕೊಠಡಿಗಳಲ್ಲಿ ಮಾಡಲಾಗುವುದು. ಪ್ರತೀ ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯಕ್ಕಾಗಿ 14+1ರಂತೆ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತೀ ಮತ ಎಣಿಕೆ ಕೊಠಡಿಗಳಲ್ಲಿ 14 ಸೂಪರ್ ವೈಸರ್ ಗಳು, 14 ಸಹಾಯಕರು, 14 ಮೈಕ್ರೋ ಅಬ್ಸರ್ವರ್ ಗಳು ಕಾರ್ಯ ನಿರ್ವಹಿಸಲಿದ್ದಾರೆ. ತರೀಕೆರೆ, ಮೂಡಿಗೆರೆ ಕ್ಷೇತ್ರಗಳ ಮತ ಎಣಿಕೆ ತಲಾ 17 ಸುತ್ತಿನಲ್ಲಿ ನಡೆಯಲಿದ್ದು, ಕಡೂರು 18 ಸುತ್ತು ಹಾಗೂ ಶೃಂಗೇರಿ ಕ್ಷೇತ್ರದ ಮತ ಎಣಿಕೆ ಕಾರ್ಯ19 ಸುತ್ತುಗಳಲ್ಲಿ ನಡೆಯಲಿದೆ. ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆಯಲಿದ್ದು, ಎರಡೂ ಕೊಠಡಿಗಳಲ್ಲಿ ತಲಾ 7+1 ಟೇಬಲ್ ಅಳವಡಿಸಲಾಗಿದೆ. ಎರಡೂ ಕೊಠಡಿಗಳಲ್ಲಿ ತಲಾ 7 ಸೂಪರ್ ವೈಸರ್, 7 ಸಹಾಯಕರು ಹಾಗೂ ತಲಾ 7 ರಂತೆ ಮೈಕ್ರೋ ಅಬ್ಸರ್ವರ್ ಗಳು ಕೆಲಸ ನಿರ್ವಹಿಸಲಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಕಾರ್ಯ 36 ಸುತ್ತುಗಳಲ್ಲಿ ನಡೆಯಲಿದೆ ಎಂದ ಅವರು, ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಮೇ 12ರಂದು ನಡೆದ ಸಾರ್ವತ್ರಿಕ ಮತದಾನ ಪ್ರಕ್ರಿಯೆ ಜಿಲ್ಲೆಯಾದ್ಯಂತ ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ನಕ್ಸಲ್ ಪೀಡಿತ ಪ್ರದೇಶದ 34 ಮತಗಟ್ಟೆಗಳಲ್ಲಿ ಶೇ.84.30ರಷ್ಟು ಮತದಾನವಾಗುವ ಮೂಲಕ ಈ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚು ಮತದಾನವಾಗಿದೆ. ಇದಕ್ಕೆ ಜಿಪಂ ಸಿಇಒ ನೇತೃತ್ವದ ಚುನಾವಣಾಧಿಕಾರಿಗಳ ತಂಡ ಮತದಾನಕ್ಕೂ ಮುನ್ನ ನಡೆಸಿದ ಮತದಾನ ಜಾಗೃತಿ ಕಾರ್ಯಕ್ರಮಗಳೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲೆಯ 20 ಪಿಂಕ್ ಮತಗಟ್ಟೆಗಳಲ್ಲಿ ಶೇ.68.33ರಷ್ಟು ಮತದಾನವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅಣ್ಣಾಮಲೈ, ಎಡಿಸಿ ಕುಮಾರ್ ಉಪಸ್ಥಿತರಿದ್ದರು.

ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ:
ಮೇ 15 ರಂದು ನಗರದ ಬೇಲೂರು ರಸ್ತೆಯಲ್ಲಿರುವ ಎಸ್‍ಟಿಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯವುದರಿಂದ ಮಧ್ಯಾಹ್ನದವರೆಗೆ ಆಜಾದ್ ಪಾರ್ಕ್ ಮಾರ್ಗವಾಗಿ ಬೇಲೂರು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಬೇಲೂರು ಕಡೆಯಿಂದ ಬರುವ, ಚಿಕ್ಕಮಗಳೂರಿನಿಂದ ಅತ್ತ ತೆರಳುವ ವಾಹನಗಳ ಎಐಟಿ ಕಾಲೇಜು ವೃತ್ತದ ಮಾರ್ಗವಾಗಿ ಸಂಚರಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಚಾಲಕರು ಇದಕ್ಕೆ ಸಹಕರಿಸಬೇಕು.
- ಶ್ರೀರಂಗಯ್ಯ, ಚುನಾವಣಾಧಿಕಾರಿ, ಜಿಲ್ಲಾಧಿಕಾರಿ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News