ಕಾಂಗ್ರೆಸ್‍ನಿಂದ ಹಣ ಪಡೆದಿರುವ ಆರೋಪ ನಿರಾಧಾರ: ಶಾಸಕ ಬಿ.ಬಿ.ನಿಂಗಯ್ಯ
ಚಿಕ್ಕಮಗಳೂರು, ಮೇ 14: ಮೂಡಿಗೆರೆ ಮೀಸಲು ಕ್ಷೇತ್ರದ ತನ್ನ 5 ವರ್ಷಗಳ ಶಾಸಕ ಸ್ಥಾನದ ಅವಧಿ ಮುಕ್ತಾಯವಾಗಿದೆ. ಈ ಅವಧಿಯಲ್ಲಿ ತಾನು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿರುವ ಸಮಾಧಾನವಿದೆ. ಜೊತೆಗೆ ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಪಕ್ಷದಿಂದ ಬಿಡುಗಡೆಯಾದ ಪ್ರಣಾಳಿಕೆಯಿಂದಾಗಿ ಕ್ಷೇತ್ರದಲ್ಲಿ ಚುನಾವಣೆ ಬಳಿಕ ತನ್ನ ಪರವಾಗಿ ವ್ಯಾಪಕ ಅಲೆ ಎದ್ದಿದೆ. ಆದರೂ ಚುನಾವಣಾ ಸಂದರ್ಭ ವಿರೋಧಿ ಪಕ್ಷಗಳ ಹಣ ಹೆಂಡ ಆಮಿಷದ ಮೂಲಕ ಮತದಾರರನ್ನು ಸೆಳೆದಿರುವುದು ಬೇಸರ ತಂದಿದೆ ಎಂದು ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ವಿಷಾದಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೂ ಮುನ್ನ ತನ್ನ ವಿಜಯದ ಬಗ್ಗೆ ಎಲ್ಲೆಡೆ ಜನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಚಲಿತರಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ತನ್ನ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಿದ್ದಾರೆ. ಹತಾಶೆಯಿಂದಾಗಿ ಚುನಾವಣೆ ಗೆಲ್ಲಲು ಎರಡೂ ಪಕ್ಷಗಳು ಹಣ ಹೆಂಡ ಹಂಚಿ ಚುನಾವಣೆ ಗೆಲ್ಲಲು ಹುನ್ನಾರ ನಡೆಸಿವೆ. ಆದರೆ ಈ ಆಮಿಷಗಳಿಗೆ ಮತದಾರರು ಕಿವಿಗೊಡದಿದ್ದಾಗ ಬಿ.ಬಿ.ನಿಂಗಯ್ಯ ಕಾಂಗ್ರೆಸ್ ಪಕ್ಷದವರಿಂದ ಹಣ ಪಡೆದಿದ್ದಾರೆಂದು ಕಾಂಗ್ರೆಸ್ ಪಕ್ಷದವರೇ ಚುನಾವಣೆ ಹಿಂದಿನ ದಿನ ಗುಲ್ಲೆಬ್ಬಿಸಿದ್ದಾರೆ. ಈ ಮೂಲಕ ಮತದಾರರ ಮನಸ್ಸನ್ನು ಬದಲಿಸುವ ಹುನ್ನಾರಕ್ಕೆ ಕಾಂಗ್ರೆಸ್ ಮುಖಂಡರು ಕೈ ಹಾಕಿದ್ದರು. ಆದರೆ ಈ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ. ಗೆಲ್ಲುವ ಅವಕಾಶ ಇರುವ ಸಂದರ್ಭದಲ್ಲಿ ತನ್ನ ಸೋಲನ್ನು ತಾನೇ ಹೇಗೆ ಬಯಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ತನ್ನ ರಾಜಕೀಯ ಜೀವನದ ಉದ್ದಕ್ಕೂ ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ರಾಜಕೀಯಕ್ಕಾಗಿ ಬೇರೆಯವರಿಂದ ಹಣ ಪಡೆಯುವ ಉದ್ದೇಶ, ದುರ್ಬುದ್ಧಿ ತನಗಿಲ್ಲ ಎಂದ ಅವರು, ಚುನಾವಣೆಯಲ್ಲಿ ಸೋಲುವ ಸಲುವಾಗಿ ಹಣ ಪಡೆಯುತ್ತೇನೆಂಬುದು ಮೂರ್ಖತನದ ಆರೋಪ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ತನ್ನ ಸೋಲಿಗಾಗಿ ಮಾಡಿದ ಒಳ ಸಂಚು ಕೆಲಸ ಮಾಡಿಲ್ಲ. ಕ್ಷೇತ್ರದ ಜನತೆ ತನ್ನ ಅಭಿವೃದ್ಧಿ ಯೋಜನೆಗಳ ಬಗ್ಗೆ ಹಾಗೂ ಜೆಡಿಎಸ್ ಪಕ್ಷದ ಪ್ರಣಾಳಿಕೆ ಮತ್ತು ವರಿಷ್ಠರಲ್ಲಿನ ರಾಜ್ಯದ ಅಭಿವೃದ್ಧಿಯತ್ತ ಹೊಂದಿರುವ ಬದ್ಧತೆ ಮೆಚ್ಚಿ ತನಗೆ ಮತ ನೀಡಿದ್ದಾರೆ. ಹಾಗಾಗಿ ಈ ಬಾರಿಯೂ ನಾನೇ ಗೆಲ್ಲುತ್ತೇನೆ. ಜೆಡಿಎಸ್ ಪಕ್ಷ ರಾಜ್ಯಾಧಿಕಾರ ಪಡೆಯಲಿದೆ. ಕುಮಾರಸ್ವಾಮಿ ಸಿಎಂ ಆಗಲಿದ್ದಾರೆಂಬುದು ಮಂಗಳವಾರ ಸ್ಪಷ್ಟವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪ, ಎಚ್.ಎಚ್.ದೇವರಾಜ್, ಲಕ್ಷ್ಮಣ್, ಹೊಲಗದ್ದೆ ಗಿರೀಶ್ ಉಪಸ್ಥಿತರಿದ್ದರು.