×
Ad

ಕಡೂರು: ಹಳೇ ದ್ವೇಷದ ಹಿನ್ನೆಲೆ; ವ್ಯಕ್ತಿಯ ಕೊಂದು ಸುಟ್ಟುಹಾಕಿದ ದುಷ್ಕರ್ಮಿಗಳು

Update: 2018-05-14 17:45 IST

ಚಿಕ್ಕಮಗಳೂರು, ಮೇ 14:  ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಇಬ್ಬರು ಸ್ನೇಹಿತರು ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೇ ಶವದ ಗುರುತು ಸಿಗಬಾರದೆಂದು ಸುಟ್ಟು ಹಾಕಿರುವ ಘಟನೆ ಕಡೂರು ತಾಲೂಕಿನ ಬುಕ್ಕಸಾಗರದ ಗ್ರಾಮದಲ್ಲಿ ನಡೆದಿದ್ದು, ಮೃತ ವ್ಯಕ್ತಿಯ ಶವ ಅರೆಬೆಂದ ಸ್ಥಿತಿಯಲ್ಲಿ ಗ್ರಾಮದ ಪಾಳು ಬಿದ್ದಿದ್ದ ಜಮೀನೊಂದರಲ್ಲಿ ಸೋಮವಾರ ಮುಂಜಾನೆ ಪತ್ತೆಯಾಗಿದೆ.

ಬುಕ್ಕಸಾಗರ ಗ್ರಾಮದ ಮಂಜುನಾಥ್ ಮೃತ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ಪ್ರದೀಪ್ ಹಾಗೂ ಆತನ ಸ್ನೇಹಿತ ಹತ್ಯೆ ಮಾಡಿ ಶವವನ್ನು ಸುಟ್ಟ ಆರೋಪಿಗಳಾಗಿದ್ದಾರೆಂದು ತಿಳಿದು ಬಂದಿದೆ. ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಮೃತ ಮಂಜುನಾಥ್ ಕಳೆದ 15 ದಿನಗಳ ಹಿಂದೆ ಬುಕ್ಕ ಸಾಗರ ಗ್ರಾಮದಿಂದ ಕಾಣೆಯಾಗಿದ್ದು, ಆತನ ಕುಟುಂಬದವರು ಮಂಜುನಾಥ್‍ಗಾಗಿ ಎಲ್ಲೆಡೆ ಹುಡುಕಾಟ ನಡೆಸಿ ಆತನ ಸುಳಿವು ಪತ್ತೆಯಾಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರೆಂದು ತಿಳಿದು ಬಂದಿದೆ.

ಮಂಗಳವಾರ ಬೆಳಗ್ಗೆ ಬುಕ್ಕಸಾಗರ ಗ್ರಾಮಸ್ಥರು ಪಾಳು ಬಿದ್ದಿದ್ದ ಜಮೀನಿನತ್ತ ಹೋದಾಗ ಪೊದೆಯೊಂದರ ಬಳಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಕಂಡಿದ್ದಾರೆ. ಕೂಡಲೇ ಗ್ರಾಮದಲ್ಲಿ ಈ ಸುದ್ದಿ ಹರಡಿ ಕಡೂರು ಪೊಲೀಸರಿಗೂ ಸುದ್ದಿ ಮುಟ್ಟಿದೆ. ಸ್ಥಳಕ್ಕೆ ಬಂದ ಪೊಲೀಸರು ಶವ ಪರಿಶೀಲಿಸಿದಾಗ ಅದು 15 ದಿನಗಳ ಹಿಂದೆ ಗ್ರಾಮದಿಂದ ಕಾಣೆಯಾಗಿದ್ದ ಮಂಜುನಾಥ್‍ನ ಶವ ಎಂದು ಗುರುತಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಗ್ರಾಮದಲ್ಲಿ ಮಂಜುನಾಥ್‍ ನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದಾಗ ಅದೇ ಗ್ರಾಮದ ಪ್ರದೀಪ್ ಎಂಬಾತ ಹಳೇ ದ್ವೇಷದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತನೊಂದಿಗೆ ಸೇರಿ ಮಂಜುನಾಥ್‍ನನ್ನ ಕೊಲೆ ಮಾಡಿ ಸುಟ್ಟು ಹಾಕಿರುವುದಾಗಿ ಸತ್ಯ ಬಾಯಿ ಬಿಟ್ಟಿದ್ದಾನೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಕಡೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News