×
Ad

ಡಿಕೆಶಿ-ಎಚ್‌ಡಿಕೆಯ ರಾಜಕೀಯ ತಂತ್ರಗಾರಿಕೆಗೆ ನಾನು ಬಲಿಯಾಗಿದ್ದೇನೆ: ಶಾಸಕ ಸಿ.ಪಿ.ಯೋಗೀಶ್ವರ್

Update: 2018-05-14 19:22 IST

ಬೆಂಗಳೂರು, ಮೇ 14: ಈ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡಿದ ರಾಜಕೀಯ ತಂತ್ರಗಾರಿಕೆಗೆ ನಾನು ಬಲಿಯಾಗಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಸಿ.ಪಿ.ಯೋಗೀಶ್ವರ್ ಆರೋಪಿಸಿದ್ದಾರೆ.

ಸೋಮವಾರ ಚನ್ನಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಸೋಲಿಸಲು ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್, ತಾಲೂಕಿನ ಇತಿಹಾಸದಲ್ಲೆ ಎಂದು ಕಂಡು ಕೇಳರಿಯದಷ್ಟು ಹಣದ ಹೊಳೆಯನ್ನು ಹರಿಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಈ ಕ್ಷೇತ್ರದಲ್ಲಿ ನೆಪ ಮಾತ್ರ. ಆದರೂ, ಅವರ ಸ್ಪರ್ಧೆಯಿಂದ ನನಗೆ ನಷ್ಟವಾಗಿದೆ. ಅವರೊಬ್ಬ ಸುಪಾರಿ ಕಿಲ್ಲರ್, ಡಿ.ಕೆ. ಸಹೋದರರು ಈ ಸುಪಾರಿ ನೀಡಿದ್ದಾರೆ. ಆದರೂ, ಕುಮಾರಸ್ವಾಮಿಯೇ ನನ್ನ ನೇರ ಪ್ರತಿಸ್ಪರ್ಧಿ ಎಂದು ಯೋಗೀಶ್ವರ್ ಹೇಳಿದರು.

ನನ್ನನ್ನು ರಾಜಕೀಯವಾಗಿ ಮುಗಿಸಲು ಶಿವಕುಮಾರ್ ಹಾಗೂ ಕುಮಾರಸ್ವಾಮಿ ಪರಸ್ಪರ ಕೈ ಜೋಡಿಸಿದ್ದಾರೆ. ನಾನು ಬೆಳೆದರೆ ಅವರಿಗೆ ಸವಾಲು ಆಗುತ್ತೇನೆ ಎಂಬ ಭಯದಿಂದ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದಾರೆ. ಈ ಚುನಾವಣೆ ನೇರಾ ನೇರಾ ಇರಲಿಲ್ಲ. ರಾಜ್ಯದ ಇಬ್ಬರು ಪ್ರಭಾವಿ ನಾಯಕರು ಹೆಣೆದ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ ಎಂದು ಅವರು ತಿಳಿಸಿದರು.

ಒಂದು ಕಡೆ ಶಿವಕುಮಾರ್, ರೇವಣ್ಣ, ಮತ್ತೊಂದೆಡೆ ಕುಮಾರಸ್ವಾಮಿ. ಈ ಎರಡು ಶಕ್ತಿಗಳ ವಿರುದ್ಧ ಏಕಕಾಲದಲ್ಲಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾಗಬಹುದು. ಸೋಲು, ಗೆಲುವು ಬಹಳ ಕಡಿಮೆ ಅಂತರದಲ್ಲಿ ಆಗಬಹುದು. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಈ ನಿರ್ಣಯಕ್ಕೆ ಬಂದಿದ್ದೇನೆ ಎಂದು ಯೋಗೀಶ್ವರ್ ಹೇಳಿದರು.

ಡಿಕೆ ಸಹೋದರರ ಹಣ ಪ್ರಭಾವ ಬೀರಿದ್ದರೆ ನನ್ನ ಸೋಲು, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೈ ಹಿಡಿದರೆ ನನ್ನ ಗೆಲುವು ಸಾಧ್ಯವಾಗುತ್ತದೆ. ರಾಜಕೀಯವಾಗಿ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಇಬ್ಬರೂ ನನಗೆ ಸಮಾನ ಶತ್ರುಗಳು. ಡಿಕೆ ಸಹೋದರರು ಮಾಡುವ ಅಕ್ರಮ ವ್ಯವಹಾರಗಳನ್ನು ನಾನು ಟೀಕಿಸುತ್ತೇನೆ. ಕುಮಾರಸ್ವಾಮಿಗೆ ಬೇರೆ ಒಕ್ಕಲಿಗ ನಾಯಕರು ಬೆಳೆಯುವುದು ಇಷ್ಟವಿಲ್ಲ ಎಂದು ಅವರು ದೂರಿದರು.

ಮತದಾನದ ದಿನ ಸಮೀಪಿಸುತ್ತಿದ್ದಂತೆ ಡಿ.ಕೆ.ಶಿವಕುಮಾರ್, ನನ್ನ ಜೊತೆಯಲ್ಲಿದ್ದ ನಾಯಕರನ್ನು ತಮ್ಮತ್ತ ಸೆಳೆದುಕೊಂಡರು. ನನಗೆ ನನ್ನ ಕ್ಷೇತ್ರದ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಚುನಾವಣೆಯ ಫಲಿತಾಂಶ ಏನೆ ಬರಲಿ ನಾನು ಬಿಜೆಪಿಯನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ಹಗಲು ರಾತ್ರಿ ಶ್ರಮಿಸಿ ಪಕ್ಷವನ್ನು ಸಂಘಟಿಸುತ್ತೇನೆ ಎಂದು ಯೋಗೀಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News