ಇದೀಗ ಅಲಿಗಡ್ ವಿವಿ ಸರದಿ

Update: 2018-05-15 11:02 GMT

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವು, ಹೈದರಾಬಾದ್ ವಿಶ್ವವಿದ್ಯಾನಿಲಯವನ್ನು ಸಂಘಪರಿವಾರ ಹೇಗೆ ಆಪೋಷನ ತೆಗೆದುಕೊಂಡಿದೆ ಎನ್ನುವುದು ಜಗಜ್ಜಾಹೀರಾಯಿತು. ಇದರ ಬಳಿಕ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾದದ್ದು ಜೆಎನ್‌ಯು. ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯೆತ್ತುವ ಮೂಲಕ ದೇಶದಲ್ಲಿ ಸುದ್ದಿಯಲ್ಲಿರುವ ವಿಶ್ವವಿದ್ಯಾನಿಲಯ ಜೆಎನ್‌ಯು. ಹಲವು ಚಿಂತಕರು, ಹೋರಾಟಗಾರರು ಈ ವಿಶ್ವವಿದ್ಯಾನಿಲಯದಿಂದ ಹೊರಹೊಮ್ಮಿದ್ದಾರೆ. ಇಂತಹ ವಿಶ್ವವಿದ್ಯಾನಿಲಯದೊಳಗೆ ತೂರಿಕೊಂಡ ಸಂಘಪರಿವಾರದ ಕ್ರಿಮಿಗಳು, ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯೆತ್ತುವ ಇಲ್ಲಿನ ವಿದ್ಯಾರ್ಥಿಗಳಿಗೆ ‘ದೇಶದ್ರೋಹಿ’ ಪಟ್ಟವನ್ನು ಕಟ್ಟಲು ಯತ್ನಿಸಿದವು. ಆದರೆ ಸಂಘಪರಿವಾರದ ಎಲ್ಲ ಹುನ್ನಾರಗಳು ವಿದ್ಯಾರ್ಥಿಗಳು ವಿಫಲಗೊಳಿಸಿದರು. ಇದೀಗ ಸಂಘಪರಿವಾರದ ಕಣ್ಣು ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ಮೇಲೆ ಬಿದ್ದಿದೆ.

ಕಳೆದ ಮೇ 2ರಂದು ಸಂಘಪರಿವಾರದ ಭಾಗವಾಗಿರುವ ಹಿಂದೂ ಯುವ ವಾಹಿನಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ಸದಸ್ಯರು ವಿಶ್ವವಿದ್ಯಾನಿಲಯದ ಆವರಣಕ್ಕೆ ನುಗ್ಗಿ, ವಿವಿಯೊಳಗಿರುವ ಜಿನ್ನಾ ಅವರ ಭಾವಚಿತ್ರವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಲು ಆರಂಭಿಸಿತು. ಮಾರಕಾಯುಧಗಳೊಂದಿಗೆ ಗಲಭೆ ನಡೆಸುವುದಕ್ಕಾಗಿಯೇ ಅವರು ಅಲ್ಲಿಗೆ ಆಗಮಿಸಿದ್ದರು. ಪೊಲೀಸರು ದಾಳಿಕೋರರನ್ನು ಬಂಧಿಸುವ ಬದಲು ದಾಳಿಯ ಬಗ್ಗೆ ದೂರು ದಾಖಲಿಸಲು ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದರು. ಲಾಠಿ ಮತ್ತು ಅಶ್ರುವಾಯು ಪ್ರಯೋಗ ಮಾಡಿದರು. ಜೆಎನ್‌ಯುವಿನಲ್ಲಿ ಹೇಗೆ ಸಂಘಪರಿವಾರ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ವಿದ್ಯಾರ್ಥಿಗಳ ದಮನಕ್ಕೆ ಹವಣಿಸಿತೋ ಅದೇ ಪ್ರಸಂಗ ಇದೀಗ ಅಲಿಗಡ್‌ನಲ್ಲಿ ಮುಂದುವರಿದೆ. ಈ ದೇಶದ ಮುಸ್ಲಿಮರನ್ನು ಪಾಶ್ಚಿಮಾತ್ಯ ಚಿಂತನೆಗಳ ಜೊತೆಗೆ ಸಮನ್ವಯಗೊಳಿಸಿದ್ದು ಅಲಿಗಡ ವಿ.ವಿ. ಸರ್ ಸೈಯದ್ ಅಹ್ಮದ್ ಖಾನ್ ಅವರ ಕನಸಿನ ಕೂಸು ಈ ವಿಶ್ವವಿದ್ಯಾನಿಲಯ. ಆಧುನಿಕ ವಿದ್ಯಾಭ್ಯಾಸದ ಜೊತೆಗೆ ಈ ದೇಶದ ಮುಸ್ಲಿಮರನ್ನು ಬೆಸೆಯಲು ಅಹ್ಮದ್ ಖಾನ್ ಅವರು ನಡೆಸಿದ ಶ್ರಮದ ಫಲ ಇದು. ದೇಶಕ್ಕೆ ಸಹಸ್ರಾರು ವಿದ್ವಾಂಸರನ್ನು, ಚಿಂತಕರನ್ನು ಕೊಟ್ಟ ವಿವಿ ಇದು.

ದೇಶದ ಮೂರನೇ ರಾಷ್ಟ್ರಾಧ್ಯಕ್ಷ ಝಾಕಿರ್ ಹುಸೈನ್, ಸ್ವಾತಂತ್ರ ಹೋರಾಟಗಾರ ಖಾನ್ ಅಬ್ದುಲ್ ಗಫ್ಫಾರ್ ಖಾನ್, ಫ್ರೆಂಚ್ ಗಣಿತಜ್ಞ ಆಂಡ್ರೆ ವೀಲ್, ಅಸ್ಸಾಮ್‌ನ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ ಅನ್ವರಾ ತೈಮೂರ್, ಖ್ಯಾತ ಕ್ರೀಡಾಳುಗಳಾದ ಧ್ಯಾನ್ ಚಂದ್, ಲಾಲಾ ಅಮರನಾಥ್, ಝಫರ್ ಇಕ್ಬಾಲ್ ಮೊದಲಾದವರು ಈ ಅಲಿಗಡ ವಿಶ್ವವಿದ್ಯಾಲಯದಿಂದ ಹೊರಬಂದವರು. ದೇಶದ ಇತಿಹಾಸ ಮತ್ತು ವರ್ತಮಾನದ ಮೇಲೆ ಅಲಿಗಡ ವಿವಿ ಬೀರಿರುವ ಪರಿಣಾಮಗಳು ಅಪಾರ. ಇಂತಹ ವಿಶ್ವವಿದ್ಯಾನಿಲಯದ ಆವರಣದೊಳಗೆ ಇದೀಗ ಸಂಘಪರಿವಾರ ಪ್ರವೇಶಿಸಿದೆ ಮತ್ತು ಮುಸ್ಲಿಮ್ ವಿವಿ ಎನ್ನುವ ಹೆಸರನ್ನು ಹೊಂದಿರುವ ಒಂದೇ ಕಾರಣಕ್ಕಾಗಿ ಅದರ ಮೇಲೆ ದಾಳಿ ನಡೆಸಲು ಹೊರಟಿದೆ. ಅಲಿಗಡ ವಿವಿಯಲ್ಲಿರುವ ಜಿನ್ನಾ ಭಾವಚಿತ್ರವನ್ನು ಬರೀ ನೆಪವಾಗಿ ಬಳಸಿಕೊಳ್ಳುತ್ತಿದೆ. ಯಾಕೆಂದರೆ ಅಲಿಗಡ ವಿವಿಯಲ್ಲಿ ಜಿನ್ನಾ ಭಾವಚಿತ್ರವಿರುವುದು ಇಂದು ನಿನ್ನೆಯಲ್ಲ. 1938ರಿಂದಲೂ ಈ ಭಾವಚಿತ್ರ ಅಲ್ಲಿದೆ. ಬರೇ ಜಿನ್ನಾ ಅವರದು ಮಾತ್ರವಲ್ಲ, ಬೇರೆ ಬೇರೆ ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳನ್ನೂ ಈ ವಿಶ್ವವಿದ್ಯಾನಿಲಯ ಹೊಂದಿದೆ. ಅಲಿಗಡ ಸ್ವಾತಂತ್ರಪೂರ್ವದಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯ. ಅಂದು ಜಿನ್ನಾ ಸ್ವಾತಂತ್ರ ಹೋರಾಟದ ಒಂದು ಭಾಗವಾಗಿದ್ದರು. ಜೊತೆಗೆ ಮುಸ್ಲಿಮ್ ಮುಖಂಡರೂ ಆಗಿದ್ದುದರಿಂದ ಅವರ ಭಾವಚಿತ್ರವನ್ನು ವಿವಿಯಲ್ಲಿ ಹಾಕಿರುವುದು ಸಹಜವಾಗಿತ್ತು. ಸುಮಾರು 75 ವರ್ಷಗಳ ಕಾಲದಿಂದ ಈ ಭಾವಚಿತ್ರ ಅಲಿಗಡ ವಿವಿಯಲ್ಲಿದೆ. ಹೀಗಿರುವಾಗ ಸಂಘಪರಿವಾರಕ್ಕೆ ಏಕಾಏಕಿ ಮೇ 2ರಂದು ಜ್ಞಾನೋದಯವಾಗಿದ್ದು ಹೇಗೆ? ಇಷ್ಟಕ್ಕೂ ಸಂಘಪರಿವಾರ ಜಿನ್ನಾ ಅವರ ಭಾವಚಿತ್ರವನ್ನು ಟೀಕಿಸಲು ಮುಖ್ಯ ಕಾರಣ, ಅವರು ಪಾಕಿಸ್ತಾನದ ವಿಭಜನೆಯ ನೇತೃತ್ವವನ್ನು ವಹಿಸಿದ್ದರು ಎನ್ನುವುದಾಗಿದೆ.

ವಿಭಜನೆಯ ಸಿದ್ಧಾಂತ ಎಲ್ಲಿಂದ ಆರಂಭವಾಯಿತು ಎನ್ನುವುದನ್ನು ಅವಲೋಕಿಸಿದರೆ, ಅದು ಲಾಲಾಲಜಪತರಾಯ್‌ರಲ್ಲಿಗೆ ತಲುಪುತ್ತದೆ. ಸ್ವಾತಂತ್ರ ಪೂರ್ವದಲ್ಲಿ, ಹಿಂದೂಸ್ಥಾನದೊಳಗೆ ಎರಡು ದೇಶಗಳನ್ನು ಗುರುತಿಸಿದವರಲ್ಲಿ ಮುಖ್ಯರಾದವರು ಲಾಲಾಲಜಪತರಾಯರು. ಅಧಿಕೃತವಾಗಿ ಅದನ್ನು ಮುಂದಿಟ್ಟವರು ಹಿಂದೂ ಮಹಾಸಭಾದ ನಾಯಕರಾದ ವಿನಾಯಕ ದಾಮೋದರ್ ಸಾವರ್ಕರ್. ಹಿಂದೂ ಸಭಾ ಪರೋಕ್ಷವಾಗಿ ದೇಶದ ಮುಸ್ಲಿಮರೊಳಗೆ ಈ ಮೂಲಕ ಅತಂತ್ರತೆಯನ್ನು ಬಿತ್ತುತ್ತಾ, ಪ್ರತ್ಯೇಕ ದೇಶವೊಂದು ಮುಸ್ಲಿಮರ ಬೇಡಿಕೆಯೂ ಹೌದು ಎನ್ನುವುದನ್ನು ನಂಬಿಸುವಲ್ಲಿ ಯಶಸ್ವಿಯಾಯಿತು. ಮುಸ್ಲಿಮರೊಳಗಿನ ಮೇಲ್ವರ್ಗ ಪಾಕಿಸ್ತಾನವನ್ನು ಬಯಸಿತ್ತೇ ಹೊರತು, ಈ ದೇಶದ ತಳಸ್ತರದ ಜನರು ಭಾರತದ ಬೇರನ್ನು ಕಡಿದುಕೊಳ್ಳಲು ಸಿದ್ಧರಿರಲಿಲ್ಲ. ಜಿನ್ನಾ ಅವರನ್ನು ರಾಜಕೀಯಕ್ಕೆ ತಂದವರು ದಾದಾಬಾಯಿ ನವರೋಜಿಯವರು. ಜಿನ್ನಾ ತಮ್ಮ ಜೀವಿತಾವಧಿಯ ಬಹುಪಾಲು ಭಾಗ ನಿಷ್ಠಾವಂತ ಕಾಂಗ್ರೆಸಿಗರಾಗಿದ್ದರು. ಅವರಿಗೆ ಗೋಪಾಲ ಕೃಷ್ಣ ಗೋಖಲೆಯವರ ಕುರಿತಂತೆ ಅಪಾರ ಗೌರವವಿತ್ತು. ತಿಲಕರ ಮೇಲೆ ದೇಶದ್ರೋಹಿ ಆರೋಪ ಬಂದಾಗ, ಅವರ ಪರವಾಗಿ ವಕೀಲರಾಗಿ ಹೋರಾಡಿದವರು ಜಿನ್ನಾ ಆಗಿದ್ದಾರೆ. ಮುಸ್ಲಿಮ್ ಲೀಗ್‌ನ ಸ್ಥಾಪಕ ಜಿನ್ನಾ ಆಗಿರಲಿಲ್ಲ. ಅದು ಸ್ಥಾಪನೆಯಾದ ಸುಮಾರು ಆರು ವರ್ಷಗಳ ಬಳಿಕ ಅದರ ಸದಸ್ಯತ್ವವನ್ನು ಜಿನ್ನಾ ಪಡೆದುಕೊಂಡರು. ಮೂರು ವರ್ಷಗಳ ಬಳಿಕ ಅದರ ಅಧ್ಯಕ್ಷರಾದರು.

ಹಿಂದೂ ದೇಶವನ್ನು ಸ್ಥಾಪಿಸುವ ಗುರಿಯೊಂದಿಗೆ ಮುಸ್ಲಿಮರನ್ನು ಈ ದೇಶದಿಂದ ಪ್ರತ್ಯೇಕಿಸುವ ಸಂಚು ರೂಪಿಸಿದ್ದು ಹಿಂದೂ ಮಹಾಸಭಾ. ಅಂತಿಮವಾಗಿ ಜಿನ್ನಾ ಪಾಕಿಸ್ತಾನದ ಸ್ಥಾಪನೆಗೆ ಒಂದು ನೆಪವಾದರು. ಪಾಕಿಸ್ತಾನ ದೇಶವಾಗಿ ರಚನೆಯಾದ ಬಳಿಕವೂ ಅದು ‘ಜಾತ್ಯತೀತ’ವಾಗಿರಬೇಕು ಎಂದು ಜಿನ್ನಾ ಬಯಸಿದ್ದರು. ಲಾಲ್ ಕೃಷ್ಣ ಅಡ್ವಾಣಿಯವರು ತಮ್ಮ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ಪ್ರವಾಸ ಗೈದಾಗ ಇದನ್ನೇ ಇಲ್ಲಿ ಹೇಳಿದ್ದರು ಮತ್ತು ಅದಕ್ಕಾಗಿ ದೇಶದೊಳಗಿರುವ ಸಂಘಪರಿವಾರದ ವೈರ ಕಟ್ಟಿಕೊಂಡರು. ಇಂದಿಗೂ ಬಿಜೆಪಿಯೊಳಗಿನ ಹಲವು ನಾಯಕರಿಗೆ ಜಿನ್ನಾ ಕುರಿತಂತೆ ಸದಭಿಪ್ರಾಯವಿದೆ. ಉತ್ತರ ಪ್ರದೇಶದ ಬಿಜೆಪಿಯ ಜನಪ್ರತಿನಿಧಿಯೊಬ್ಬರು ‘ಜಿನ್ನಾ ಮಹಾನ್ ನಾಯಕ’’ ಎಂದು ಕರೆಯುವ ಮೂಲಕ ಸ್ವತಃ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮುಜುಗರವುಂಟು ಮಾಡಿದ್ದಾರೆ. ಸ್ವಾತಂತ್ರ ಪೂರ್ವದ ಇತಿಹಾಸವಿರುವ ವಿವಿಯೊಂದರಲ್ಲಿ ಜಿನ್ನಾ ಅವರ ಭಾವಚಿತ್ರವಿರುವುದು ತಪ್ಪೇ ಆಗಿದ್ದರೆ, ಈ ದೇಶದ ವಿಭಜನೆಗೆ ಕಾರಣರಾಗಿರುವ ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರವನ್ನು ಸಂಸತ್‌ನಲ್ಲಿಟ್ಟಿರುವುದು ತಪ್ಪೇ ಅಲ್ಲವೇ? ಅಷ್ಟೇ ಏಕೆ? ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಅವರು ಅಸಮಾನತೆಯನ್ನು ಪ್ರತಿಪಾದಿಸಿದ ಕಾರಣಕ್ಕಾಗಿ ಯಾವ ಮನುಸ್ಮತಿಯನ್ನು ಸುಟ್ಟು ಹಾಕಿದರೋ, ಅದೇ ಮನುಮಹರ್ಷಿಯ ಪ್ರತಿಮೆಯನ್ನು ರಾಜಸ್ಥಾನ ಹೈಕೋರ್ಟ್ ಮುಂದೆ ಸ್ಥಾಪಿಸಲಾಗಿದೆ. ಇದನ್ನು ಧ್ವಂಸ ಮಾಡಬೇಡವೇ? ಜೆಎನ್‌ಯುವಿನಂತೆಯೇ ಅಲಿಗಡ ವಿವಿ ಇಂದು ಫ್ಯಾಶಿಸ್ಟ್ ಶಕ್ತಿಗಳಿಗೆ ಸವಾಲಾಗಿ ಬೆಳೆಯುತ್ತಿದೆ. ಇದು ಸಂಘಪರಿವಾರದ ಕೋಪಕ್ಕೆ ಕಾರಣವಾಗಿದೆ. ಆದುದರಿಂದಲೇ, ಅದು ಜಿನ್ನ್ನಾ ಭಾವಚಿತ್ರವನ್ನು ನೆಪವಾಗಿಟ್ಟುಕೊಂಡು ಅಲಿಗಡ ವಿವಿಯ ಘನತೆಗೆ ಕುಂದು ತರಲು ಯತ್ನಿಸುತ್ತಿದೆ. ಸಂಘಪರಿವಾರದ ಈ ಪ್ರಯತ್ನವನ್ನು ದೇಶದ ಎಲ್ಲ ಪ್ರಗತಿಪರ ಸಂಘಟನೆಗಳು ಒಂದಾಗಿ ವಿಫಲಗೊಳಿಸುವುದು ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News