ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿ
ಬೆಂಗಳೂರು, ಮೇ.15: ಕರ್ನಾಟಕ ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಸ್ಥಾನ ಗಳಿಕೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರಕಾರ ರಚನೆಗೆ ಬೆರಳೆಣಿಕೆಯ ಸ್ಥಾನಗಳ ಕೊರತೆ ಎದುರಾಗುವ ಸಾಧ್ಯತೆ ಕಂಡು ಬಂದಿದೆ.
ಒಟ್ಟು 222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 77 ಮತ್ತು ಜೆಡಿಎಸ್ 40 ಮತ್ತು ಇತರ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ
ಬಹುಮತದ ನಿರೀಕ್ಷೆಯಲ್ಲಿದ್ದ ಕಾಂಗ್ರೇಸ್ ಹಿನ್ನಡೆ ಅನುಭವಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಘಟಾನುಘಟಿ ಸಚಿವರುಗಳು ಸೋಲು ಅನುಭವಿಸಿದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಬಾದಾಮಿಯಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಆದರೆ ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದಾರೆ.
ವರುಣಾದಲ್ಲಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ 50 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಸಚಿವರಾದ ಬಿ.ರಮಾನಾಥ್ ರೈ, ಅಭಯ್ ಚಂದ್ರ ಜೈನ್, ಕಾಗೋಡು ತಿಮ್ಮಪ್ಪ,ಉಮಾಶ್ರೀ, ಸಂತೋಷ್ ಲಾಡ್, ಸ್ವೀಕರ್ ಕೆ.ಬಿ.ಕೋಳಿವಾಡ್ ಮತ್ತಿತರರು ಸೋಲು ಅನುಭವಿಸಿದ್ದಾರೆ.
ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿದ್ದ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಜಯ ಗಳಿಸಿದ್ದಾರೆ. ಬಿಜೆಪಿಯ ಮುಖ್ಯ ಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಲ್ಲಿ ಜಯ ಗಳಿಸಿದ್ದಾರೆ.