×
Ad

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಗೆ ಸಿದ್ಧತೆ

Update: 2018-05-15 18:13 IST

ಬೆಂಗಳೂರು, ಮೇ 15: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಅಚ್ಚರಿಯ ಫಲಿತಾಂಶ ಪ್ರಕಟವಾಗಿದ್ದು, 222 ಕ್ಷೇತ್ರಗಳ ಪೈಕಿ ಬಿಜೆಪಿ 104 ಕ್ಷೇತಗಳಲ್ಲಿ ಗೆಲುವು ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತ 113 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ.

ಕಾಂಗ್ರೆಸ್-78, ಜೆಡಿಎಸ್-38, ಪಕ್ಷೇತರರು-2 ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಮೈತ್ರಿ ಸರಕಾರ ರಚನೆಗೆ ಮುಂದಾಗಿದೆ. ಮಂಗಳವಾರ ಸಂಜೆ ಕಾಂಗ್ರೆಸ್-ಜೆಡಿಎಸ್ ಉಭಯ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಮೈತ್ರಿ ಸರಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದಾರೆ.

ಕರ್ನಾಟಕದಲ್ಲಿ ನಾಲ್ಕನೆ ಬಾರಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಯಾವುದೇ ಪಕ್ಷವು ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ. ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದ ವೇಳೆ 117 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದ ಬಿಜೆಪಿ, ಸ್ಪಷ್ಟ ಬಹುಮತ ಪಡೆದು ಅಧಿಕಾರ ಸೂತ್ರ ಹಿಡಿಯುವ ಸಂಭ್ರಮದಲ್ಲಿತ್ತು. ಆದರೆ, ಮುನ್ನಡೆಯಲ್ಲಿದ್ದ ಸ್ಥಾನಗಳ ಸಂಖ್ಯೆ ಬಹುಮತಕ್ಕೆ ಅಗತ್ಯವಿರುವ 113 ಸ್ಥಾನಕ್ಕಿಂತ ಕೆಳಗಿಳಿದು 104ಕ್ಕೆ ಬಂದು ನಿಂತಿದ್ದರಿಂದ ಬಿಜೆಪಿ ಸರಕಾರ ರಚನೆ ಆಸೆ ಕಮರಿತು.

ಆದರೆ, ಕಾಂಗ್ರೆಸ್-78 ಮತ್ತು ಜೆಡಿಎಸ್-38 ಸ್ಥಾನಗಳಲ್ಲಿ ಜಯಗಳಿಸಿದ್ದು, ಈ ಎರಡೂ ಪಕ್ಷಗಳು ಮೈತ್ರಿ ಸರಕಾರ ರಚನೆಗೆ ಮುಂದಾಗಿದ್ದು ಸರಳ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲವನ್ನು (113) ದಾಟಲಿದೆ. ಈ ಬೆಳವಣಿಗೆಗಳ ಮಧ್ಯೆ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು, ಜೆಡಿಎಸ್‌ಗೆ ಬೆಂಬಲ ಪ್ರಕಟಿಸಿದರು.

ಈ ನಡುವೆ ಅಧಿಕಾರದ ಕನಸಿನಲ್ಲಿದ್ದ ಬಿಜೆಪಿ, ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ‘ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು ಮೊದಲು ಸರಕಾರ ರಚಿಸಲು ಆಹ್ವಾನಿಸಬೇಕು’ ಎಂದು ಮನವಿ ಮಾಡಿದೆ. ಇದೀಗ ಎಲ್ಲರ ಚಿತ್ತ ರಾಜ್ಯಪಾಲರತ್ತ ನೆಟ್ಟಿದೆ.

ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರ ಬಳಸಬೇಕಿದ್ದು, ಅತಿದೊಡ್ಡ ಪಕ್ಷವನ್ನು ಸರಕಾರ ರಚಿಸಲು ಆಹ್ವಾನಿಸಬಹುದು ಅಥವಾ ಚುನಾವಣಾ ಫಲಿತಾಂಶದ ಬಳಿಕ ನಂತರ ಮೈತ್ರಿ ಮಾಡಿಕೊಂಡು ಅಗತ್ಯ ಸಂಖ್ಯಾಬಲ ತೋರಿಸುವ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಾಲಾವಕಾಶ ಕೋರಿಕೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಅಶೋಕ್, ಶೋಭಾ ಕರಂದ್ಲಾಜೆ ಸೇರಿದಂತೆ ಮುಖಂಡರ ನಿಯೋಗ, ರಾಜ್ಯಪಾಲರನ್ನು ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದು ಸರಕಾರ ರಚನೆಗೆ ಕಾಲಾವಕಾಶ ಕೋರಿದ್ದಾರೆ ಎಂದು ಗೊತ್ತಾಗಿದೆ.

ಈ ಮಧ್ಯೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೊಂದಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಉಭಯ ನಾಯಕರು ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಫಲಿತಾಂಶದ ನಂತರ ಎಚ್.ಡಿ.ಕುಮಾರಸ್ವಾಮಿ, ದೇವೇಗೌಡರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು. 

‘ರಾಜ್ಯದ ಜನತೆ ನೀಡಿರುವ ತೀರ್ಪಿಗೆ ತಲೆ ಬಾಗುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷ ರಾಜ್ಯದಲ್ಲಿ ಸರಕಾರ ರಚಿಸುವಷ್ಟು ಬಹುಮತ ಬಂದಿಲ್ಲ. ಹೀಗಾಗಿ ಕಾಂಗ್ರೆಸ್, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಜನತಾ ದಳ (ಜೆಡಿಎಸ್)ಕ್ಕೆ ಸರಕಾರ ರಚಿಸಲು ಸಂಪೂರ್ಣ ಬೆಂಬಲ ನೀಡಲು ಸಿದ್ದವಿದೆ’
-ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News