ಗೆಲುವು ಕಂಡ ಪಕ್ಷಾಂತರಿಗಳು ಯಾರ‍್ಯಾರು ?
ಬೆಂಗಳೂರು, ಮೇ 15: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ 7 ಮಂದಿ ಶಾಸಕರ ಪೈಕಿ ನಾಲ್ವರು ಪರಾಭವಗೊಂಡಿದ್ದರೆ, ಮೂವರು ಗೆಲುವು ದಾಖಲಿಸಿದ್ದಾರೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಝಮೀರ್ ಅಹ್ಮದ್ ಖಾನ್, ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಅಖಂಡ ಶ್ರೀನಿವಾಸಮೂರ್ತಿ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಭೀಮಾನಾಯ್ಕ ಗೆಲುವಿನ ನಗೆ ಬೀರಿದ್ದಾರೆ.
ಆದರೆ, ನಾಗಮಂಗಲ ಕ್ಷೇತ್ರದಲ್ಲಿ ಎನ್.ಚಲುವರಾಯಸ್ವಾಮಿ, ಗಂಗಾವತಿ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ, ಮಾಗಡಿ ಕ್ಷೇತ್ರದಲ್ಲಿ ಎಚ್.ಸಿ.ಬಾಲಕೃಷ್ಣ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಮೇಶಬಾಬು ಬಂಡಿಸಿದ್ದೇಗೌಡ ಪರಾಭವಗೊಂಡಿದ್ದಾರೆ.
ಅದೇ ರೀತಿ ಅಫ್ಝಲ್‌ಪುರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಾಲಿ ಶಾಸಕ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಎಂ.ವೈ.ಪಾಟೀಲ್ ಗೆಲುವು ಸಾಧಿಸಿದ್ದಾರೆ. ಕನ್ನಡ ಮಕ್ಕಳ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಸೋಲಿನ ರುಚಿ ಅನುಭವಿಸಿದ್ದಾರೆ.
ಕೆಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಬಿ.ಆರ್.ಪಾಟೀಲ್, ಕಾಂಗ್ರೆಸ್ ಸೇರ್ಪಡೆಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಬಿಜೆಪಿಯ ಸುಭಾಷ್ ಗುತ್ತೇದಾರ್ ವಿರುದ್ಧ 697 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದ ಶಾಸಕ ಎ.ಎಸ್.ಪಾಟೀಲ್(ನಡಹಳ್ಳಿ)ಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಘೋಷಿಸಲಾಗಿತ್ತು. ಆದರೂ, ಅಚ್ಚರಿಯ ಬೆಳವಣಿಗೆಯಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿ ಅದೃಷ್ಟ ಪರೀಕ್ಷೆಗೆ ಇಳಿದು ಗೆಲುವು ಸಾಧಿಸಿದ್ದಾರೆ.