×
Ad

ಅಚ್ಚರಿಯ ಫಲಿತಾಂಶ ಪ್ರಕಟವಾದ ಕ್ಷೇತ್ರಗಳು

Update: 2018-05-15 19:34 IST

ಬೆಂಗಳೂರು, ಮೇ 15: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಕೋಲಾರ, ಶ್ರೀನಿವಾಸಪುರ, ಕೊರಟಗೆರೆ, ಮಂಗಳೂರು, ಶಾಂತಿನಗರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ಹೊರ ಬಂದಿದೆ.

ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ವರ್ತೂರು ಪ್ರಕಾಶ್, ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್‌ಗೌಡ ವಿರುದ್ಧ 47,244 ಮತಗಳ ಅಂತರದಿಂದ ಪರಾಭವಗೊಂಡು ತೃತೀಯ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ. ಈ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.

2013ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪರಾಭವಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್(81,598 ಮತಗಳು) ಈ ಬಾರಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಪಿ.ಆರ್.ಸುಧಾಕರ್‌ಲಾಲ್(73,979 ಮತಗಳು) ವಿರುದ್ಧ 7619 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್ ಸತತ ಎರಡನೆ ಬಾರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದ ಮಟ್ಟಿಗೆ ಇತಿಹಾಸ ನಿರ್ಮಿಸಿದ್ದಾರೆ. ಈ ಕ್ಷೇತ್ರದಲ್ಲಿ ಸತತ ಎರಡು ಬಾರಿ ಯಾರೊಬ್ಬರೂ ಗೆಲುವು ಸಾಧಿಸಿದ ಉದಾಹರಣೆಯಿಲ್ಲ. 93,571 ಮತಗಳನ್ನು ಪಡೆದಿರುವ ರಮೇಶ್‌ಕುಮಾರ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ (83019 ಮತಗಳು) ವಿರುದ್ಧ 10,552 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸತತ ಮೂರನೆ ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 1,27,552 ಮತಗಳನ್ನು ಪಡೆದಿರುವ ಶಿವಕುಮಾರ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ನಾರಾಯಣಗೌಡ(47,643 ಮತಗಳು) ವಿರುದ್ಧ ದಾಖಲೆಯ 79,909 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರ ಮಾತ್ರ ಕೈ ವಶವಾಗಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಯು.ಟಿ.ಖಾದರ್ 80,813 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸಂತೋಷ್‌ಕುಮಾರ್ ರೈ ಬೋಳಿಯಾರು ವಿರುದ್ಧ 19,739 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬೆಂಗಳೂರಿನ ಉದ್ಯಮಿಯೊಬ್ಬರ ಮಗನ ಮೇಲೆ ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣ ಸಾಕಷ್ಟು ಚರ್ಚೆಗೊಳಪಟ್ಟಿತ್ತು. ಈ ಬಾರಿಯ ಚುನಾವಣೆಯಲ್ಲಿ ಈ ಘಟನೆಯನ್ನು ಸ್ವತಃ ಪ್ರಧಾನಿ ನರೇಂದ್ರಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೂ, ಜನತೆ ಮತ್ತೊಮ್ಮೆ ಹಾರಿಸ್ ಕೈ ಹಿಡಿದಿದ್ದು, 18,205 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೆ.ವಾಸುದೇವಮೂರ್ತಿ ವಿರುದ್ಧ ಜಯ ಸಾಧಿಸಿದ್ದಾರೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎ.ಮಂಜು ವಿರುದ್ಧ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ 10,653 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮೂರನೆ ಸ್ಥಾನಕ್ಕೆ ದೂಡಲ್ಪಟ್ಟಿದ್ದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ವಿರುದ್ಧ 46,107 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದಿಂದ ಹರತಾಳು ಹಾಲಪ್ಪ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪರನ್ನು 8039 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಹೋದರರ ನಡುವಿನ ಕಾದಾಟದಲ್ಲಿ ಬಿಜೆಪಿಯ ಕುಮಾರ ಬಂಗಾರಪ್ಪ, ಜೆಡಿಎಸ್‌ನ ಮಧು ಬಂಗಾರಪ್ಪ ವಿರುದ್ಧ 13,286 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ 87 ವರ್ಷದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಯಶವಂತರಾವ್ ಜಾಧವ್ ವಿರುದ್ಧ 15,884 ಮತಗಳ ಅಂತರದಿಂದ ಗೆಲುವು ಸಾಧಿಸುವ ಅತ್ಯಂತ ಹಿರಿಯ ಶಾಸಕರಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News