ಗೆದ್ದು ಸೋತ ಬಿಜೆಪಿ, ಮುಗ್ಗರಿಸಿದ ಸಿಎಂ, ಸಚಿವರು

Update: 2018-05-15 14:57 GMT

ಬೆಂಗಳೂರು, ಮೇ 15: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ-103 ಸ್ಥಾನಗಳನ್ನು ಗಳಿಸುವ ಮೂಲಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್-78, ಜೆಡಿಎಸ್-38, ಬಿಎಸ್ಪಿ-1 ಹಾಗೂ ಪಕ್ಷೇತರರು- 2 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿದ್ದಾಗ 117 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಸರಳ ಬಹುಮತಕ್ಕೆ ಅಗತ್ಯ ಇರುವ 113 ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಗೆ ಕಸರತ್ತು ನಡೆಸಿವೆ.

ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು ಕಂಡಿದ್ದರೆ, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದಾರೆ.

ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ವಿರುದ್ಧ 20 ಸಾವಿರಕ್ಕೂ ಅಧಿಕ ಮತಗಳ ಭಾರೀ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಮೊಳಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರದಲ್ಲಿ ಅಖಾಡಕ್ಕಿಳಿದಿದ್ದ ಬಿ.ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ವಿಜಯ ದಾಖಲಿಸಿದ್ದು, ಬಾದಾಮಿಯಲ್ಲಿ ಸೋಲು ಕಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಹೋದ್ಯೋಗಿಗಳ ಪೈಕಿ ಕಾಗೋಡು ತಿಮ್ಮಪ್ಪ, ಉಮಾಶ್ರೀ, ಆಂಜನೇಯ, ಜಯಚಂದ್ರ, ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ ಸೇರಿ 17ಮಂದಿ ಸಚಿವರು ಸೋಲು ಕಂಡಿದ್ದು, ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಅತ್ಯಂತ ಹೆಚ್ಚು ಕ್ಷೇತ್ರಗಳನ್ನು ಒಳಗೊಂಡ ಬೆಂಗಳೂರು ನಗರದ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್-13, ಬಿಜೆಪಿ-11 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಗಳಿಸಿದೆ. ಅದೇ ರೀತಿಯಲ್ಲಿ ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಕಾಂಗ್ರೆಸ್-8, ಬಿಜೆಪಿ-10 ಸ್ಥಾನಗಳಲ್ಲಿ ಜಯದ ನಗೆ ಬೀರಿದೆ.

ದಕ್ಷಿಣ ಕನ್ನಡ ಜಿಲ್ಲೆ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅದೇ ರೀತಿ ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಬಿಜೆಪಿ ಭರ್ಜರಿ ದಿಗ್ವಿಜಯ ಸಾಧಿಸಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

ಮಿಶ್ರಫಲ: ಬಾದಾಮಿ ಮತ್ತು ವರುಣಾ ಕ್ಷೇತ್ರದಿಂದ ಕ್ರಮವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ.ಯತೀಂದ್ರ ಗೆಲುವು ಸಾಧಿಸಿದ್ದಾರೆ. ಆದರೆ, ಶಿರಾ ಕ್ಷೇತ್ರದಲ್ಲಿ ಟಿ.ಬಿ. ಜಯಚಂದ್ರ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಅವರ ಪುತ್ರ ಸಂತೋಷ್ ಜಯಚಂದ್ರ ಸೋಲು ಕಂಡಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ ಗೆಲುವು ಸಾಧಿಸಿದ್ದು, ಅವರ ಪುತ್ರ ಪ್ರಿಯಕೃಷ್ಣ ಗೋವಿಂದರಾಜನಗರದಲ್ಲಿ ಸೋಲುಂಡಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವು ಕಂಡಿದ್ದು, ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆ ಉತ್ತರದಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಜಯಭೇರಿ ಬಾರಿಸಿದ್ದು, ಅವರ ಪುತ್ರ ಗೋಪಾಲ ಕಾರಜೋಳ ನಾಗಠಾಣ ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದಾರೆ.

ಪಕ್ಷಾಂತರಿಗಳಿಗೂ ಮಿಶ್ರ ಫಲ ಸಿಕ್ಕಿದ್ದು, ಆ ಪೈಕಿ ಕೆಲವರು ಜಯ ಗಳಿಸಿದ್ದರೆ, ಮತ್ತೆ ಕೆಲವರು ಸೋಲನ್ನು ಅನುಭವಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಕೆ.ಆರ್.ರಮೇಶ್ ಕುಮಾರ್, ಎಚ್.ಕೆ.ಪಾಟೀಲ್, ಯಡಿಯೂರಪ್ಪ, ಎನ್.ಎ. ಹಾರೀಸ್, ಕೆ.ಜೆ.ಜಾರ್ಜ್, ಪ್ರಿಯಾಂಕ ಖರ್ಗೆ ಸೇರಿ ಹಲವು ಘಟಾನುಘಟಿಗಳು ಜಯಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News