ಚಿಕ್ಕಮಗಳೂರು: ನಾಲ್ಕು ಕ್ಷೇತ್ರಗಳಲ್ಲಿ ಕಮಲಕ್ಕೆ ಜನಮನ್ನಣೆ
ಚಿಕ್ಕಮಗಳೂರು, ಮೇ 15: ರಾಜ್ಯದಾದ್ಯಂತ ಸಾರ್ವಜನಿಕರು ತೀವ್ರ ಕುತೂಹಲದಿಂದ ಕಾಯುತ್ತಿದ್ದ ರಾಜ್ಯ ವಿಧಾನಸಭೆ ಚುನಾವಣೆ ಪಲಿತಾಂಶ ಹೊರಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಗೆಲುವಿನ ಲೆಕ್ಕಾಚಾರ ತಲೆಕೆಳಗಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಮುನ್ನಡೆಯಲ್ಲಿ ಜಯಗಳಿಸಿದ್ದರೆ, ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಮತಗಳ ಅಂತರದಿಂದ ಪ್ರಯಾಸದ ಗೆಲುವು ಕಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 2013ರ ಚುನಾವಣೆಯಲ್ಲಿ ಎರಡು ಜೆಡಿಎಸ್, ಒಂದು ಕಾಂಗ್ರೆಸ್, ಎರಡು ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದರು. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಎರಡು ಹೆಚ್ಚುವರಿ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯುವ ಮೂಲಕ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಅಸ್ತಿತ್ವಕ್ಕೆ ಬಂದಂತಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ಕಂಡಿದ್ದ ಡಿ.ಎನ್.ಜೀವರಾಜ್‍ರನ್ನು ಈ ಬಾರಿ ಮತದಾರರು ಕೈ ಬಿಟ್ಟಿದ್ದು, ಕಾಂಗ್ರೆಸ್‍ನ ಟಿ.ಡಿ.ರಾಜೇಗೌಡ ಅವರ ಕೈ ಹಿಡಿದಿದ್ದಾರೆ.
ಇದರಿಂದಾಗಿ ಕಾಂಗ್ರೆಸ್ ಈ ಹಿಂದಿನಂತೆಯೇ ಜಿಲ್ಲೆಯಲ್ಲಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದ್ದು, 2013ರಲ್ಲಿ ತರೀಕೆರೆಯಲ್ಲಿ ಗೆಲುವು ಕಂಡಿದ್ದ ಕೈ ಅಭ್ಯರ್ಥಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಸ್ವತಂತ್ರವಾಗಿ ಸ್ಪರ್ಧೆಗಳಿದು ಹಾಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಅವರ ಸೋಲಿಗೆ ಕಾರಣರಾಗಿದ್ದಾರೆ. ಇನ್ನು 2013ರ ಚುನಾವಣೆಯಲ್ಲಿ ಜಿಲ್ಲೆಯ ಕಡೂರು, ಮೂಡಿಗೆರೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಕಂಡಿದ್ದು, ಈ ಬಾರಿ ಜೆಡಿಎಸ್ ಎರಡೂ ಕ್ಷೇತ್ರಗಳಲ್ಲೂ ಧೂಳಿಪಟವಾಗಿದೆ. ಸರಳ ಸಜ್ಜನಿಕೆಗೆ ಹೆಸರಾಗಿದ್ದ ಜೆಡಿಎಸ್‍ನ ವೈ.ಎಸ್.ವಿ ದತ್ತ ಕಡೂರು ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದಾರೆ.
ಚಿಕ್ಕಮಗಳೂರು ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಅವರನ್ನು 25,716 ಮತಗಳ ಅಂತರದಿಂದ ಮಣಿಸಿ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಪುನರಾಯ್ಕೆಯಾಗಿದ್ದಾರೆ. ಜೆಡಿಎಸ್‍ನ ಭದ್ರ ಕೋಟೆ ಎಂದೇ ಪರಿಗಣಿಸಲಾಗಿದ್ದ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಹಾಲಿ ಶಾಸಕ ವೈ.ಎಸ್.ವಿ.ದತ್ತ ಅವರನ್ನು 15,372 ಮತಗಳಿಂದ ಮಣಿಸಿದ್ದಾರೆ. ಕಾಂಗ್ರೆಸ್‍ನ ಆನಂದ್ ಮೂರನೆ ಸ್ಥಾನಕ್ಕೆ ಸರಿಯುವ ಮೂಲಕ ಹೀನಾಯ ಸೋಲು ಕಂಡಿದ್ದಾರೆ.
ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಗೆಲುವಿನ ಅಲೆ ಮೂಡಿಸಿದ್ದ ಮಾಜಿ ಸಚಿವೆ ಮೋಟಮ್ಮ ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರಿಂದ 12,716 ಮತಗಳ ಭಾರೀ ಅಂತರಿಂದ ಅನಿರೀಕ್ಷಿತ ಸೋಲು ಕಂಡಿದ್ದಾರೆ. ತರೀಕೆರೆ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಡಿ.ಎಸ್.ಸುರೇಶ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‍ನ ಎಸ್.ಎಂ.ನಾಗರಾಜ್ ಅವರನ್ನು 11,687 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇನ್ನು ಶೃಂಗೇರಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಮಾಜಿ ಸಚಿವ, ಹಾಲಿ ಶಾಸಕ ಡಿ.ಎನ್.ಜೀವರಾಜ್ ಅವರು ಕಾಂಗ್ರೆಸ್‍ನ ಟಿ.ಡಿ.ರಾಜೇಗೌಡ ಅವರಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿ ಅಂತಿಮವಾಗಿ ಜೀವರಾಜ್ ಕೇವಲ 1574 ಮತಗಳಿಂದ ಸೋಲು ಕಂಡಿದ್ದು, ಕಳೆದ ಬಾರಿ ಇದೇ ಜೀವರಾಜ್ ಅವರಿಂದ ಇಷ್ಟೇ ಮತಗಳ ಅಂತರದಿಂದ ಸೋಲು ಕಂಡಿದ್ದ ರಾಜೇಗೌಡ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ.