ಕೈಗೆ ಬಂದ ತುತ್ತು ಬಾಯಿಗೆ ಬರದ ಸಂಕಟದಲ್ಲಿ ಬಿಜೆಪಿ

Update: 2018-05-16 04:29 GMT

ಎಲ್ಲ ಸಮೀಕ್ಷೆಗಳನ್ನು ಬುಡಮೇಲುಗೊಳಿಸುವಂತಹ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿಯ ಭಾಷಣ, ಸಿದ್ದರಾಮಯ್ಯರ ಜನಪ್ರಿಯತೆ ಇವೆಲ್ಲವುಗಳ ನಡುವೆಯೂ ಮತದಾರರು ಈ ಬಾರಿ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟವಾಗಿ ಬಿಟ್ಟುಕೊಟ್ಟಿರಲಿಲ್ಲ. ಆದಿತ್ಯನಾಥ್, ನರೇಂದ್ರ ಮೋದಿ, ಅಮಿತ್ ಶಾರಂತಹ ಉತ್ತರಭಾರತದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬಂದು ಭಾಷಣಗಳ ಸುರಿಮಳೆಗೈದರೂ, ಆ ಮಳೆ ಜನರ ಎದೆಯ ಮೇಲೆ ಬಿದ್ದು ಫಲಕೊಟ್ಟಿರಲಿಲ್ಲ. ಅನಂತಕುಮಾರ್ ಹೆಗಡೆ, ಪ್ರತಾಪ ಸಿಂಹ, ಶೋಭಾ ಕರಂದ್ಲಾಜೆಯಂತಹ ರಾಜ್ಯ ನಾಯಕರು ಕೋಮು ಹೆಸರಿನಲ್ಲಿ ದ್ವೇಷವನ್ನು ಹರಡಲು ಸಾಕಷ್ಟು ಹವಣಿಸಿದರಾದರೂ, ಅವರ ನಿರೀಕ್ಷೆ ಈಡೇರಲಿಲ್ಲ. ಮತದಾರರು ನಿರ್ಧಾರವನ್ನು ಮುಕ್ತವಾಗಿಟ್ಟಿದ್ದರು. ಬಂಟ್ವಾಳದಂತಹ ಕ್ಷೇತ್ರದಲ್ಲಿ ಸಂಘಪರಿವಾರ ತನ್ನ ದ್ವೇಷ ಕಾಯಕದಲ್ಲಿ ಯಶಸ್ವಿಯಾಯಿತಾದರೂ, ಅಲ್ಲೂ ಅದು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸುವಷ್ಟಿರಲಿಲ್ಲ.

ಬಹುತೇಕ ರಾಜಕೀಯ ಪಂಡಿತರು, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಮೂಡಿ ಬರಬಹುದು ಎಂದು ಅಂದಾಜಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಬಹುಮತ ಸಾಧಿಸಿ ಸರಕಾರ ರಚನೆ ಮಾಡುವ ಬಗ್ಗೆಯೂ ಕೆಲವರು ಊಹಾಪೋಹ ಹಬ್ಬಿಸಿದ್ದರು. ಇದೀಗ ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಗೆ ಪೂರಕವಾದ ಫಲಿತಾಂಶವೊಂದು ಹೊರಬಿದ್ದಿದೆ. ಜೆಡಿಎಸ್ ನಿರ್ಣಾಯಕ ಎನಿಸಿಕೊಂಡಿದೆ. ಕಾಂಗ್ರೆಸ್ ಸರಕಾರ ತನ್ನ ಸ್ಥಾನವನ್ನು 78ಕ್ಕೆ ಇಳಿಸಿಕೊಂಡಿದ್ದರೆ, ಬಿಜೆಪಿ 104ಕ್ಕೆ ಏರಿಸಿಕೊಂಡಿದೆ. ಜೆಡಿಎಸ್ 38 ಸ್ಥಾನಗಳನ್ನು ತನ್ನದಾಗಿಸಿದೆ. ಆದರೆ ಶೇಕಡವಾರು ಮತಗಳನ್ನು ಲೆಕ್ಕ ಹಾಕಿದರೆ ಈ ಬಾರಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷವೇ ತನ್ನದಾಗಿಸಿಕೊಂಡಿದೆ. ಇಷ್ಟಿದ್ದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ಪಾಲಿಗೆ ಇದೊಂದು ಆಘಾತಕಾರಿ ಫಲಿತಾಂಶ. ಪಕ್ಷದೊಳಗಿನ ಆಂತರಿಕ ಭಿನ್ನಮತಗಳನ್ನೆಲ್ಲ ಮೀರಿ ಬಿಜೆಪಿ 104 ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವುದು ಬಹುದೊಡ್ಡ ಸಾಧನೆ. ಇವುಗಳ ನಡುವೆ ಜೆಡಿಎಸ್ ತನಗೆಷ್ಟು ಸ್ಥಾನ ಬೇಕೋ ಅಷ್ಟನ್ನು ಗಳಿಸಿಕೊಂಡು ಅಧಿಕಾರವನ್ನೇರು ಹಾದಿಯನ್ನು ಸುಗಮ ಮಾಡಿಕೊಂಡಿದೆ.

ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಸಾಮಾನ್ಯರು ತಿರಸ್ಕರಿಸುವಷ್ಟು ಕೆಟ್ಟದ್ದೇನೂ ಆಗಿದ್ದಿರಲಿಲ್ಲ. ಈ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಹೋಲಿಸಿದರೆ, ಕಾಂಗ್ರೆಸ್ ಅವಧಿಯಲ್ಲಿ ಸರಕಾರ ಜನಸಾಮಾನ್ಯರ ಸಮಸ್ಯೆಗೆ ಹೆಚ್ಚು ಸ್ಪಂದಿಸಿದೆ. ಪಕ್ಷದೊಳಗಿನ ಭಿನ್ನಮತ ಎದ್ದು ಕಾಣುವಂತಿರಲಿಲ್ಲ. ಸರಕಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ಹಿಡಿತ ಸಾಧಿಸಿದ್ದರು. ಗುರುತಿಸಬಹುದಾದ ಭ್ರಷ್ಟಾಚಾರ ಈ ಅವಧಿಯಲ್ಲಿ ನಡೆದಿರಲಿಲ್ಲ. ಹೀಗಿದ್ದರೂ, ಜನರು ಆಡಳಿತ ವಿರೋಧಿ ನಿರ್ಧಾರ ಪ್ರಕಟಪಡಿಸುವುದು ಅಸಹಜವೇನೂ ಅಲ್ಲ. ಆದರೆ ಬಿಜೆಪಿಯೊಳಗಿರುವ ನಾಯಕರು ಜನರ ನಿರೀಕ್ಷೆಗೆ ಪೂರಕವಾಗಿ ಇರಲಿಲ್ಲ. ಅದೇ ಹಳೆಯ ಮುಖಗಳು. ಇವುಗಳ ನಡುವೆ ಮೋದಿ ಮತ್ತು ಅಮಿತ್ ಶಾ ರಾಜ್ಯಾದ್ಯಂತ ಓಡಾಡಿದರು. ಜನರು ಸಣ್ಣದೊಂದು ಸಮೂಹ ಸನ್ನಿಗೆ ಒಳಗಾದರು. ವೀರಶೈವ ಮತಗಳು ಈ ಬಾರಿ ಒಂದಾಗಿ ಕಾಂಗ್ರೆಸ್ ವಿರುದ್ಧ ಚಲಾವಣೆಯಾದವು. ಲಿಂಗಾಯತ ಸ್ವತಂತ್ರ ಧರ್ಮ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ನೆರವನ್ನು ನೀಡಲಿಲ್ಲ. ಸಿದ್ದರಾಮಯ್ಯರ ವಿರುದ್ಧ ಒಕ್ಕಲಿಗರನ್ನು ಎತ್ತಿಕಟ್ಟುವಲ್ಲಿ ಜೆಡಿಎಸ್ ಯಶಸ್ವಿಯಾಗಿತ್ತು. ಮೇಲ್ವರ್ಗದ ಮತಗಳು ಸಿದ್ದರಾಮಯ್ಯರಿಗೆ ವಿರುದ್ಧವಾಗಿ ಚಲಾವಣೆಯಾದವು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಕೊಂಡ ಕೆಲವು ಯಡವಟ್ಟುಗಳೂ ಚುನಾವಣೆಯ ಮೇಲೆ ಪರಿಣಾಮ ಬೀರಿತು. ತನ್ನ ಮಗನಿಗೆ ವರುಣಾದಲ್ಲಿ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ನಡೆಸಿದ ಪ್ರಯತ್ನ ಪಕ್ಷದೊಳಗೆ ಸಣ್ಣ ತಳಮಳಕ್ಕೆ ಕಾರಣವಾಯಿತು. ವರುಣಾ ಕ್ಷೇತ್ರದ ವಿಷಯದಲ್ಲಿ, ‘ಪುತ್ರ ರಾಜಕಾರಣ’ದಲ್ಲಿ ತಾನೂ ಹಿಂದೆ ಬಿದ್ದಿಲ್ಲ ಎನ್ನುವುದನ್ನು ಅವರು ಸಾಬೀತು ಮಾಡಿದರು. ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿ ಭಿನ್ನಮತ ಇಲ್ಲದೇ ಇದ್ದಿದ್ದರೂ, ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸುವುದು ಕಾಂಗ್ರೆಸ್‌ನೊಳಗಿನ ಮುಖಂಡರ ಅಗತ್ಯವಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಸೋಲಿಗೆ ಜೆಡಿಎಸ್‌ನ ಪಾತ್ರ ಎಷ್ಟಿದೆಯೋ, ಅಷ್ಟೇ ಕಾಂಗ್ರೆಸ್‌ನೊಳಗಿನ ನಾಯಕರ ಪಾತ್ರವೂ ಇದೆ. ಬಹುಶಃ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದೇ ಇದ್ದಿದ್ದರೆ, ಅವರ ರಾಜಕೀಯ ಭವಿಷ್ಯ ಈ ಚುನಾವಣೆಯ ಫಲಿತಾಂಶದ ಜೊತೆಗೆ ಸಂಪೂರ್ಣ ಮುಗಿದು ಬಿಡುತ್ತಿತ್ತು. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದಾರಾದರೂ, ಗೆದ್ದ ಅಂತರ ಗಮನಿಸಿದರೆ ಅದು ಸಿದ್ದರಾಮಯ್ಯ ಸರಕಾರದ ಜನಪ್ರಿಯ ಯೋಜನೆಗಳನ್ನು ವ್ಯಂಗ್ಯ ಮಾಡುವಂತಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದನ್ನು ಅದರ ವಿರೋಧಿಗಳು ಎರಡು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಯಥೇಚ್ಛವಾಗಿ ಹಣವನ್ನು ಸುರಿದಿದೆ. ಕೇಂದ್ರದಿಂದಲೂ ಹಣ ಧಾರಾಳವಾಗಿ ರಾಜ್ಯಕ್ಕೆ ಹರಿದಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನುವ ಕಾರಣದಿಂದ ಇಲ್ಲಿ ಮುಖ ಉಳಿಸಿಕೊಳ್ಳುವುದು ಕೇಂದ್ರದ ನಾಯಕರ ಅಗತ್ಯವೂ ಆಗಿತ್ತು. ಕಾಂಗ್ರೆಸ್‌ನಲ್ಲಿ ಹಣದ ಕುಳಗಳು ಸಾಕಷ್ಟು ಇದ್ದಾರಾದರೂ, ಐಟಿ ಅಧಿಕಾರಿಗಳ ಮೂಲಕ ಅವರ ಕೈಗಳನ್ನು ಕಟ್ಟಿ ಹಾಕಿತ್ತು. ಹಣದ ಮೂಲಕ ಪ್ರಜಾಸತ್ತೆಯನ್ನು ಕೊಳ್ಳುವ ತಂತ್ರದಲ್ಲಿ ಬಿಜೆಪಿಯ ಕೈ ಮೇಲಾಯಿತು. ಇದರ ಜೊತೆ ಜೊತೆಗೇ ಇವಿಎಂ ಕುರಿತಂತೆಯೂ ಕಾಂಗ್ರೆಸ್‌ನ ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗೆಲುವಿನ ಅಂತರ ಅವರಲ್ಲಿ ಈ ಅನುಮಾನವನ್ನು ಹುಟ್ಟಿಸಿದೆ. ಫಲಿತಾಂಶ ಘೋಷಣೆಯಾದ ಬಳಿಕ ಇವಿಎಂನ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದರೆ ‘ಕುಣಿಯಲಾರದವಳು ನೆಲ ಡೊಂಕು ಎಂದಂತೆ’ ಎಂಬ ಟೀಕೆಗೆ ಒಳಗಾಗಬೇಕಾಗುತ್ತದೆ. ಇವಿಎಂನ ಕುರಿತಂತೆ ಅನುಮಾನವಿದ್ದಿದ್ದರೆ ಚುನಾವಣೆಗೆ ಮುನ್ನವೇ ಅದನ್ನು ಇತ್ಯರ್ಥ ಪಡಿಸಿಕೊಳ್ಳುವುದು ಕಾಂಗ್ರೆಸ್‌ನ ನಾಯಕರ ಕರ್ತವ್ಯವಾಗಿತ್ತು. ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಇವಿಎಂ ಬಗ್ಗೆ ತಮ್ಮ ಅನುಮಾನಗಳನ್ನು ಎಲ್ಲ ಜಾತ್ಯತೀತ ಪಕ್ಷಗಳು ಜೊತೆಯಾಗಿ ಆಯೋಗದ ಮುಂದಿಟ್ಟು ಪರಿಹರಿಸಬೇಕಾಗಿದೆ.

ಈ ಚುನಾವಣೆಯಂತೂ ಮುಗಿದ ಅಧ್ಯಾಯ. ಸೋಲಿನ ಮಧ್ಯೆಯೂ ಫಲಿತಾಂಶವನ್ನು ತನಗೆ ಪೂರಕವಾಗಿ ತಿರುಗಿಸಲು ಕಾಂಗ್ರೆಸ್ ಯಶಸ್ವಿಯಾಗಿದೆ. ಫಲಿತಾಂಶ ಘೋಷಣೆಯಾದ ಬೆನ್ನಿಗೇ ಅದು, ಜೆಡಿಎಸ್ ಸರಕಾರಕ್ಕೆ ತನ್ನ ಬೆಂಬಲವನ್ನು ಘೋಷಿಸಿತು. ತನಗಿಂತ ಅರ್ಧ ಬಲವೂ ಇಲ್ಲದ ಜೆಡಿಎಸ್‌ಗೆ ಬೆಂಬಲ ನೀಡಿದ್ದೇ ಅಲ್ಲದೆ, ನಿಶ್ಶರ್ಥವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಅವಕಾಶ ನೀಡಿರುವ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್‌ನ ಪ್ರಬುದ್ಧತೆಯನ್ನು ಇದು ತೋರಿಸುತ್ತದೆ. ಈ ಬಗ್ಗೆ ನಿರ್ಧಾರ ತಳೆಯಲು ಒಂದಿಷ್ಟು ತಡ ಮಾಡಿದ್ದರೂ ಅದರ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಳ್ಳುತ್ತಿತ್ತು. ಇದರಿಂದ ಕಾಂಗ್ರೆಸ್‌ನೊಳಗಿರುವ ನಾಯಕರಿಗೂ ಲಾಭವಿದೆ. ಮುಖ್ಯವಾಗಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳಿವೆ. ಕಾಂಗ್ರೆಸ್‌ನ ಹಳಬರಿಗೆ ತಲೆನೋವಾಗಿರುವ ಸಿದ್ದರಾಮಯ್ಯರನ್ನು ಈ ನೆಪದಲ್ಲಿ ಸಂಪೂರ್ಣ ಬದಿಗೆ ಸರಿಸಿದಂತಾಯಿತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ, ಸಿದ್ದರಾಮಯ್ಯರಿಗೆ ಮುಜುಗರ ಮಾಡಿದ ಖುಷಿ ದೇವೇಗೌಡರು ಮತ್ತು ಮಕ್ಕಳದು. ಹೀಗೆ ಈ ಮೈತ್ರಿಯಲ್ಲಿ ಹಲವರು ತಮ್ಮ ತಮ್ಮ ಹಣ್ಣುಗಳನ್ನು ಬೀಳಿಸಿಕೊಂಡಿದ್ದಾರೆ. ಯಾವ ಕಾರಣವೇ ಇರಲಿ, ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಮತ್ತೆ ಅಧಿಕಾರಕ್ಕೇರದಂತೆ ನೋಡಿಕೊಂಡರಲ್ಲ, ಅದಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರನ್ನು ಅಭಿನಂದಿಸಬೇಕು. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಬಿಜೆಪಿಯ ಎಲ್ಲ ತಂತ್ರಗಳು ಈ ಮೂಲಕ ಕೊನೆಯ ಕ್ಷಣದಲ್ಲಿ ವಿಫಲಗೊಂಡಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News