ಇವಿಎಂ ದುರ್ಬಳಕೆಯಿಂದ ನನಗೆ ಸೋಲು: ಮೋಟಮ್ಮ

Update: 2018-05-16 12:28 GMT

ಮೂಡಿಗೆರೆ, ಮೇ 16: ಈ ಬಾರಿಯ ಚುನಾವಣೆಯಲ್ಲಿ ಮ್ಯಾಜಿಕ್ ಫಲಿತಾಂಶ ಬಂದಿದೆ. ತನ್ನ ಸೋಲು ನೈಜ ಸೋಲಲ್ಲ. ಇದು ಕೃತಕ ಸೋಲು. ಇವಿಎಂ ಅನ್ನು ಬಿಜೆಪಿ ತನಗೆ ಬೇಕಾದಂತೆ ದುರ್ಬಳಕೆ ಮಾಡಿದ್ದರಿಂದ ತಾನು ಸೋಲು ಕಾಣಬೇಕಾಯಿತು ಎಂದು ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಮೋಟಮ್ಮ ಹೇಳಿದರು.

ಅವರು ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಮತ ಚಲಾಯಿಸಿದ ಪಟ್ಟಣದ ಮತಗಟ್ಟೆಯಲ್ಲಿ ಇವಿಎಂ ದೋಷದಿಂದ ಅರ್ಧ ಗಂಟೆ ಕಾಯಬೇಕಾಯಿತು. ಕಳಸ, ಆಲ್ದೂರು, ಗೋಣಿಬೀಡು, ಕಸಬ ಸಹಿತ ಎಲ್ಲ ಕಡೆಗಳಲ್ಲಿ ಇವಿಎಂ ದೋಷದಿಂದ ತೊಂದರೆಯಾಗಿತ್ತು. ಮುಸ್ಲಿಮರು ಈ ಬಾರಿ ಶೇ.100 ರಷ್ಟು ಮತವನ್ನು ತಮಗೆ ಚಲಾಯಿಸಿದ್ದಾರೆ. ಮುಸ್ಲಿಮರೆ ಹೆಚ್ಚಾಗಿರುವ ಪ್ರದೇಶದಲ್ಲೂ ಇವಿಎಂ ನಲ್ಲಿ ತನಗೆ ಮತ ಕಡಮೆ ತೋರಿಸಿದ್ದು, ಬಿಜೆಪಿಗೆ ಹೆಚ್ಚು ತೋರಿಸಿದೆ. ಇದು ಇವಿಎಂ ಮೇಲೆ ದುರ್ಬಳಕೆಯ ಸಂಶಯ ಮೂಡುವಂತೆ ಮಾಡಿದೆ. ವಿವಿ ಪ್ಯಾಟ್‍ನ ಮತಗಳನ್ನು ತಮಗೆ ಯಾಕೆ ತೋರಿಸಿಲ್ಲ ಎಂದು ಪ್ರಶ್ನಿಸಿದ ಅವರು, ಇದರ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದು, ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು. 

ಕಾಂಗ್ರೆಸ್ ಈ ಬಾರಿಯ ಚುನಾವಣೆಯನ್ನು ಕ್ಷೇತ್ರದಲ್ಲಿ ಸಮರ್ಥವಾಗಿ ನಿಭಾಯಿಸಿದೆ. ಶಿಸ್ತು ಬದ್ಧವಾಗಿ ಎಲ್ಲಾ ಮುಖಂಡರು ಒಂದೇ ಮನಸ್ಸಿನಿಂದ ಕೆಲಸ ಮಾಡಿದ್ದಾರೆ. ತಾನು ಕ್ಷೇತ್ರದಲ್ಲಿ ಪ್ರಚಾರದ ವೇಳೆ ಸರಕಾರದ ಕಾರ್ಯ ವೈಖರಿ ಬಗ್ಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದರು. ತನ್ನನ್ನು ಚುನಾಯಿಸಿ ವಿಧಾನಸಭೆಗೆ ಕಳುಹಿಸುವುದಾಗಿ ಮತದಾರರು ಮುಗಿಬಿದ್ದು ಹೇಳುತ್ತಿದ್ದರು. ಆದರೂ ತಮ್ಮ ಸೋಲು ನಿರೀಕ್ಷಿಸಿರಲಿಲ್ಲ. ಸೋಲಿನ ಬಗ್ಗೆ ದೃತಿಗೆಡದೇ ಕ್ಷೇತ್ರದ ಜನರ ಏಳಿಗೆಗಾಗಿ ಸದಾ ದುಡಿಯುವುದಾಗಿ ತಿಳಿಸಿದರ ಅವರು, ಸಂವಿಧಾನ ಬದಲಾಯಿಸುವುದಾಗಿ ಬಿಜೆಪಿಯ ಕೇಂದ್ರ ಸಚಿವರೇ ಹೇಳುತ್ತಿದ್ದಾರೆ. ಇದನ್ನು ದಲಿತ ವರ್ಗದ ಯುವಕರು ಅರ್ಥ ಮಾಡಿಕೊಳ್ಳಬೇಕು. ಕೋಮುವಾದಿಗಳ ಜೊತೆ ದಲಿತ ಯುವಕರೆ ಕೈ ಜೋಡಿಸಿದರೆ ವ್ಯವಸ್ಥೆಯೆ ಧೂಳಿಪಟವಾಗಲಿದೆ. ಈಗಾದರೆ ಮುಂದೆ ಚುನಾವಣೆ ಎದುರಿಸುವುದು ಹೇಗೆ ಎಂದು ಪ್ರಶ್ನಿಸಿದರು.

ತನ್ನ ಪರ ಪ್ರಚಾರ ಮಾಡಿದ ಮುಖಂಡರು, ಕಾರ್ಯಕರ್ತರು ಹಾಗೂ ಅತೀ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್ ಮಾತನಾಡಿ, ರಾಜ್ಯದಲ್ಲಿ 78 ಸ್ಥಾನ ಗಳಿಸಿರುವ ಕಾಂಗ್ರೆಸ್, ಶೇ.38 ಮತ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 104 ಸ್ಥಾನ ಪಡೆದ ಬಿಜೆಪಿ ಶೇ.36 ಮತ ಪಡೆದು 2ನೇ ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ ಶೇ.18 ಮತ ಪಡೆದು 3ನೇ ಸ್ಥಾನಕ್ಕೆ ಕುಸಿದಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಗುಪ್ತ ಹೊಂದಾಣಿಕೆ ಮಾಡಿಕೊಂಡಿದೆ. 5 ವರ್ಷ ಶಾಸಕರಾಗಿದ್ದ ಬಿ.ಬಿ.ನಿಂಗಯ್ಯ ಚುನಾವಣೆ ಕಣದಿಂದ ಪಲಾಯನ ಮಾಡಿ, ಬಿಜೆಪಿ ಗೆಲುವಿಗೆ ಸಹಕಾರ ನೀಡಿದ್ದಾರೆಂದು ಆರೋಪಿದರು.

ಆಲ್ದೂರು ಬ್ಲಾಕ್ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಇವಿಎಂ ಗುಣಮಟ್ಟದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿಲ್ಲ. ಇವಿಎಂ ದುರ್ಬಳಕೆ ಮಾಡಿ, ಕಾಂಗ್ರೆಸ್‍ನ್ನು ಸೋಲುವಂತೆ ಬಿಜೆಪಿ ಮಾಡಿದೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಗೆ ಮಾರಕವಾಗಿದೆ. ವಿವಿ ಪ್ಯಾಟ್‍ನಲ್ಲಿ ಕಾಣ ಸಿಗುವ ಮತದಾನದ ಕುರುಹು, ಕ್ಷಣದಲ್ಲೇ ಮಾಯವಾಗಿ ಬಿಡುತ್ತಿತ್ತು. ಇದರ ಬಗ್ಗೆಯೂ ಸಂಶಯವಿದೆ. ವಿವಿ ಪ್ಯಾಟ್‍ನ ಮತದ ವಿವಿರ ಮತದಾರರ ಕೈಗೆ ಸಿಗುವಂತೆ ಮಾಡಬೇಕು. ಬಳಿಕ ಅದನ್ನು ಬೇರೊಂದು ಪಟ್ಟಿಗೆಗೆ ಮತದಾರರೆ ಹಾಕುವಂತಾಗಬೇಕು. ಇಲ್ಲವಾದರೆ ಬಿಜೆಪಿಯ ಕೈಚಳಕ ಇವಿಎಂ ಮೂಲಕ ನಡೆದು, ಮತದಾರರ ಪರಮಾಧಿಕಾರವನ್ನು ಬಿಜೆಪಿ ಸದಾ ಕಸಿದುಕೊಳ್ಳುತ್ತದೆ ಎಂದರು. 

ಗೋಷ್ಠಿಯಲ್ಲಿ ಜಿ.ಪಂ ಸದಸ್ಯ ಪ್ರಭಾಕರ್, ಮಾಜಿ ಸದಸ್ಯೆ ಸವಿತಾ ರಮೇಶ್, ಮುಖಂಡರಾದ ಬಿ.ಎಸ್.ಜಯರಾಂ, ಅಕ್ರಂ ಹಾಜಿ, ಡಿ.ಎಸ್.ರಘು, ಎಂ.ಎಸ್.ಅನಂತ್, ಕುಮಾರ, ಹೊಸಕೆರೆ ರಮೇಶ್, ನದೀಮ್, ಸುಬ್ಬಯ್ಯ, ಮಂಜುನಾಥ್, ಸುಬ್ಬೇಗೌಡ, ಯಲ್ಲಪ್ಪಗೌಡ, ಹಳ್ಳಹಿತ್ಲು ಮಹೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News