ರಾಜ್ಯಪಾಲರಿಂದ ಕಾನೂನು ಪ್ರಕಾರ ನಿರ್ಣಯ: ಪರಮೇಶ್ವರ್
ಬೆಂಗಳೂರು, ಮೇ 16: ಜೆಡಿಎಸ್ ನೇತೃತ್ವದಲ್ಲಿ ಸರಕಾರ ರಚನೆಗೆ ಸಂಪೂರ್ಣ ಬೆಂಬಲ ನೀಡುವ ಸಂಬಂಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ಹಾಗೂ ಶಾಸಕರ ಸಹಿಯುಳ್ಳ ಬೆಂಬಲ ಪತ್ರವನ್ನು ರಾಜ್ಯಪಾಲ ವಜುಭಾಯಿ ವಾಲಾಗೆ ಹಸ್ತಾಂತರಿಸಲಾಗಿದೆ.
ಬುಧವಾರ ಸಂಜೆ 5 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದ ನಿಯೋಗವು 117 ಶಾಸಕರ ಸಹಿಯುಳ್ಳ ಬೆಂಬಲ ಪತ್ರವನ್ನು ನೀಡಿತು.
ನಂತರ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಪಾಲರನ್ನು ಎರಡು ಪಕ್ಷದ ಮುಖಂಡರು ಭೇಟಿ ಮಾಡಿ, ಇವತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೆಡಿಎಸ್‌ಗೆ ಸರಕಾರ ರಚನೆ ಮಾಡಲು ಸಂಪೂರ್ಣ ಬೆಂಬಲ ನೀಡಲು ಕೈಗೊಂಡಿರುವ ನಿರ್ಣಯದ ಪತ್ರವನ್ನು ನೀಡಲಾಗಿದೆ ಎಂದರು.
ರಾಜ್ಯಪಾಲರು ಕಾನೂನಿನ ಪ್ರಕಾರ, ಸುಪ್ರೀಂಕೋರ್ಟ್‌ನ ಆದೇಶಗಳು, ಸಂವಿಧಾನದ ಅನ್ವಯ ಹಾಗೂ ಗೋವಾ, ವಿರೆರಾಂ, ನಾಗಾಲ್ಯಾಂಡ್, ಮಣಿಪುರ ರಾಜ್ಯಗಳಲ್ಲಿ ಇಂತಹ ಸನ್ನಿವೇಶದಲ್ಲಿ ಕೈಗೊಂಡಿರುವ ತೀರ್ಮಾನಗಳ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳು, ನಮಗಿರುವ 117 ಶಾಸಕರ ಸಂಖ್ಯಾಬಲದ ಸಹಿಯನ್ನು ಒಳಗೊಂಡ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟಿದ್ದೇವೆ ಎಂದರು.
ಇತ್ತೀಚಿನ ಕೆಲ ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಅತೀ ದೊಡ್ಡ ಪಕ್ಷವನ್ನು ಆಹ್ವಾನಿಸದೆ, ಮೈತ್ರಿಕೂಟವನ್ನು ಸರಕಾರ ರಚನೆಗೆ ಆಹ್ವಾನಿಸಿರುವ ಪ್ರಸಂಗಗಳು, ಗೋವಾ ರಾಜ್ಯದಲ್ಲಿ ನಡೆದ ಪ್ರಕ್ರಿಯೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ನಿನ್ನೆ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್, ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಮುಖಂಡರು ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದರು.
ನಮ್ಮ ಎರಡು ಪಕ್ಷಗಳ ಮಾಹಿತಿ, ಸುಪ್ರೀಂಕೋರ್ಟ್‌ನ ತೀರ್ಮಾನಗಳ ಅನ್ವಯ ತಜ್ಞರ ಜೊತೆ ಚರ್ಚಿಸಿ, ನಮಗೆ ಸಂದೇಶವನ್ನು ಕಳುಹಿಸಿಕೊಡುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಮುಂದಿನ ನಡೆಯನ್ನು ಅವರೇ ತೀರ್ಮಾನ ಮಾಡಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.
ಶಾಸಕರ ಪರೇಡ್: ಶಾಸಕರನ್ನು ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‌ಗೆ ಶಾಸಕರನ್ನು ಸ್ಥಳಾಂತರಿಸುವ ಮುನ್ನ, ರಾಜಭವನದಲ್ಲಿ ರಾಜ್ಯಪಾಲರ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಪರೇಡ್ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ತಲಾ 10 ಶಾಸಕರಿಗೆ ಮಾತ್ರ ರಾಜಭವನ ಪ್ರವೇಶಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಶಾಸಕರ ಪರೇಡ್ ನಡೆಸುವ ಪ್ರಕ್ರಿಯೆಯನ್ನು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್‌ಗುಂಡೂರಾವ್, ಶಾಸಕರಾದ ಎಚ್.ಡಿ.ರೇವಣ್ಣ, ರೋಷನ್‌ಬೇಗ್, ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.