ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಗತ್ಯ ಸಿದ್ಧತೆ: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2018-05-16 12:36 GMT

ಚಿಕ್ಕಮಗಳೂರು, ಮೇ 16: ವಿಧಾನ ಪರಿಷತ್‍ನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈರುತ್ಯ ಪದವೀಧರರ ಚುನಾವಣೆ ಸಂಬಂಧ ಮೆ.15ರಂದು ಅಧಿಸೂಚನೆ ಹೊರಡಿಸಲಾಗಿದೆ. ಮೇ 22 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 23 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ25 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂ.8ರಂದು ಮತದಾನ ನಡೆಯಲಿದೆ. ಜೂ.12ರಂದು ಮತದಾನ ನಡೆಯಲಿದ್ದು, ಜೂ.15ರಂದು ಚುನಾವಣಾ ಪ್ರಕ್ರಿಯೆ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.

ಜೂ.8ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯ ವರೆಗೂ ಮತದಾನ ನಡೆಯಲಿದೆ. ಮೇ 15ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ ಎಂದ ಅವರು, ಸರಕಾರಿ ಕಾರ್ಯಕ್ರಮ, ಪ್ಲೆಕ್ಸ್, ಬ್ಯಾನರ್ ಹಾಕುವುದನ್ನು ನಿಷೇಧಿಸಲಾಗಿದೆ ಎಂದರು.

ವಿಧಾನ ಪರಿಷತ್‍ನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ 15 ಮತಗಟ್ಟೆ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 7 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದ ಅವರು ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 8274 ಮತದಾರರನ್ನು ಹೊಂದಿದೆ. ಶಿಕ್ಷಕರ ಕ್ಷೇತ್ರದಲ್ಲಿ 3154 ಮತದಾರರನ್ನು ಒಳಗೊಂಡಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‍ನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ರೊಂದಿಗೆ ಚರ್ಚಿಸಿ ಮತಗಟ್ಟೆಗಳನ್ನು ಅಂತಿಮಗೊಳಿಸಲಾಗಿದೆ. ಮೇ.15ರಿಂದ ಜೂ.15ರವರೆಗೆ ಜಿಲ್ಲಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದರು.

ತಾಲೂಕಿಗೆ ಒಂದರಂತೆ ಎಂಸಿಸಿ ತಂಡ ರಚಿಸಲಾಗಿದೆ. ಆಯಾ ತಾಲೂಕಿನ ತಹಶೀಲ್ದಾರ್, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಉಪನಿರೀಕ್ಷಕರು ಒಳಗೊಂಡಿರುತ್ತದೆ. ನಗರ ಪ್ರದೇಶಗಳಲ್ಲಿ ಆಯುಕ್ತರು, ಅಬಕಾರಿ ಇಲಾಖೆ ಪೊಲೀಸ್ ಉಪನಿರೀಕ್ಷಕರು ಒಳಗೊಂಡಿರುತ್ತಾರೆ ಎಂದರು.

ಜಿಲ್ಲೆಯಲ್ಲಿ ಒಳ ಪ್ರವೇಶಿಸುವ ವಾಹನ ಹಾಗೂ ಹೊರ ಹೊಗುವ ವಾಹನಗಳ ತಪಾಸಣೆಗೆ 6 ಚಕ್ ಪೋಸ್ಟ್ ತೆರೆಯಲಾಗಿದೆ. ತರೀಕೆರೆ ತಾಲೂಕು ಎಂ.ಸಿ.ಹಳ್ಳಿ, ಕಡೂರು ತಾಲೂಕಿನ ತಂಗಲಿ, ಚಿಕ್ಕಮಗಳೂರು ತಾಲೂಕಿನ ಮಾಗಡಿ ಕೈಮರ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಎನ್.ಆರ್.ಪುರ ಮುತ್ತಿನಕೊಪ್ಪ ಭಾಗದಲ್ಲಿ ಚಕ್‍ಪೋಸ್ಟ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. 

ತಾಲೂಕಿಗೆ ಒಂದರಂತೆ ಪ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದ್ದು, ಅದರಲ್ಲಿ ಆಯಾ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಹಾಯಕ ಪೊಲೀಸ್ ಉಪನಿರೀಕ್ಷಕರನ್ನು ಒಳಗೊಂಡಿರುತ್ತಾರೆ ಎಂದರು.

ವಿಧಾನ ಪರಿಷತ್‍ನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಆರು ಜಿಲ್ಲೆ ಒಳಗೊಂಡಿದ್ದು ಮತ ಎಣಿಕೆ ಕಾರ್ಯ ಮೈಸೂರುನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News