ಬಿಜೆಪಿ ಅಧಿಕಾರದ ದಾಹಕ್ಕೆ ಏನು ಬೇಕಾದರೂ ಮಾಡುತ್ತೆ: ಎಚ್.ಡಿ.ಕುಮಾರಸ್ವಾಮಿ

Update: 2018-05-16 18:07 GMT

ಬೆಂಗಳೂರು, ಮೇ 16: ಬಿಜೆಪಿ ರಾಜ್ಯಾಧಿಕಾರದ ದಾಹಕ್ಕೆ ಏನು ಬೇಕಾದರು ಮಾಡಲು ಸಿದ್ಧವಾಗಿದೆ. ಹೀಗಾಗಿ ಮುಂಜಾಗ್ರತೆಯಾಗಿ ನಮ್ಮ ಶಾಸಕರನ್ನು ಜೋಪಾನವಾಗಿ ಕಾಯ್ದುಕೊಳ್ಳುವ ಅನಿವಾರ್ಯತೆಯಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಗಳು ಜನತೆಯ ವಿಶ್ವಾಸ ಪಡೆದು, ಅವರಿಂದ ಮತ ಪಡೆಯಲು ಹರ ಸಾಹಸ ಪಟ್ಟಿದ್ದಾರೆ. ಈಗ ಬಿಜೆಪಿ ಹಣದ ವ್ಯಾಮೋಹ ತೋರಿಸಿ ಶಾಸಕರನ್ನು ಖರೀದಿಸಲು ಷಡ್ಯಂತ್ರ ರೂಪಿಸಿದೆ ಎಂದು ತಿಳಿಸಿದರು.

ರಾಜ್ಯಭವನ ದುರುಪಯೋಗ: ರಾಜ್ಯಪಾಲರು ಬಿಜೆಪಿಯ ಬಿ.ಎಸ್.ಯಡಿಯೂರಪ್ಪರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಅನುಮತಿ ಕೊಟ್ಟರೆ, ಅವರು ನ್ಯಾಯಯುತವಾಗಿ ಬಹುಮತವನ್ನು ಸಾಬೀತು ಪಡಿಸಬೇಕಾಗುತ್ತದೆ. ಆದರೆ, 104 ಸ್ಥಾನವನ್ನು ಹೊಂದಿರುವ ಬಿಜೆಪಿ ಬಹುಮತವನ್ನು ಸಾಬೀತು ಪಡಿಸಲು ಸಾಧ್ಯವಿದೆಯೇ? ರಾಜ್ಯಭವನವನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಹೊಂಚು ಹಾಕಿದೆ ಎಂದು ಅವರು ಆರೋಪಿಸಿದರು.

2008ರಲ್ಲಿಯೂ ಬಿಜೆಪಿ ಹಣದ ಆಮಿಷವೊಡ್ಡಿ ಶಾಸಕರನ್ನು ಖರೀದಿಸಿ ರಾಜ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟರು. ಈಗ ಮತ್ತೆ ಹಾಗೆಯೇ ಮಾಡಲು ಹೊರಟಿರುವ ಬಿಜೆಪಿಗೆ ರಾಜ್ಯದ ಜನತೆಯೆ ತಕ್ಕಪಾಠ ಕಲಿಸಲಿದ್ದಾರೆ. ಎಲ್ಲವನ್ನು ಕಾದು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.

ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ
ಎಚ್.ಡಿ.ಕುಮಾರಸ್ವಾಮಿಯನ್ನು ಕೊಂಡುಕೊಳ್ಳಲಾಗುವುದು ಎಂದು ಕೇಂದ್ರದ ಬಿಜೆಪಿ ಸಚಿವ ಜಾವಡೇಕರ್ ಹೇಳಿಕೆ ನೀಡಿದ್ದಾರೆ. ನನ್ನನ್ನು ಕೊಂಡುಕೊಳ್ಳಲು ಯಾರು ಹುಟ್ಟಿಲ್ಲ. ಪ್ರೀತಿ, ವಿಶ್ವಾಸಕ್ಕೆ ಹಾಗೂ ತ್ಯಾಗಕ್ಕೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇನೆ.
-ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News