ಶಿವಮೊಗ್ಗ: ರಸ್ತೆ ಅಪಘಾತಕ್ಕೆ ಇಬ್ಬರು ಮೃತ್ಯು
ಶಿವಮೊಗ್ಗ, ಮೇ 16: ಶಿವಮೊಗ್ಗ ನಗರದಲ್ಲಿ ನಡೆದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ರಾತ್ರಿ ಬೈಕ್‍ನಲ್ಲಿ ಮನೆಗೆ ಹಿಂದಿರುಗತ್ತಿದ್ದ ಇಬ್ಬರು ವ್ಯಕ್ತಿಗಳು, ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಬಸ್‍ನಿಲ್ದಾಣ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಬೈಕ್ ಚಾಲಕ ಮೈಸವಳ್ಳಿ ತಾಂಡಾದ ನಿವಾಸಿ ಶಿವಶಂಕರಪ್ಪ (60) ಹಾಗೂ ದೇನ್ಯನಾಯ್ಕ್ (56) ಮೃತಪಟ್ಟವರೆಂದು ಗುರುತಿಸಲಾಗಿದೆ. ದೇನ್ಯನಾಯ್ಕ್ ರವರ ತಲೆಯ ಮೇಲೆಯೇ ಬಸ್ ಚಕ್ರ ಹರಿದು ಹೋದ ಪರಿಣಾಮ ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಶಂಕರಪ್ಪರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ವಿಧಾನಸಭೆ ಚುನಾವಣಾ ಫಲಿತಾಂಶ ತಿಳಿದುಕೊಳ್ಳುವ ಉದ್ದೇಶದಿಂದ ಶಿವಶಂಕರಪ್ಪ ಹಾಗೂ ದೇನ್ಯನಾಯ್ಕ್ ರವರು ನಗರದ ಸಹ್ಯಾದ್ರಿ ಕಾಲೇಜು ಬಳಿ ಆಗಮಿಸಿದ್ದರು. ತದನಂತರ ಸಂಜೆ ಒಂದೇ ಬೈಕ್‍ನಲ್ಲಿ ಇವರು ತಮ್ಮ ಮನೆಗಳಿಗೆ ಹಿಂದಿರುಗುವ ವೇಳೆ, ಖಾಸಗಿ ಬಸ್ ಢಿಕ್ಕಿ ಹೊಡೆದಿತ್ತು. ಬಸ್ ಚಾಲಕನ ಅತೀವೇಗ, ಅಜಾಗರೂಕ ಚಾಲನೆಯಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.