ಸಂವಿಧಾನಕ್ಕೆ ಅಪಚಾರ ಬೇಡ

Update: 2018-05-17 04:48 GMT

ಸುಪ್ರೀಂಕೋರ್ಟ್‌ನ ಕೆಲ ನ್ಯಾಯಾಧೀಶರು ಇತ್ತೀಚೆಗೆ ಹೇಳಿದ್ದರು, ‘‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನತಂತ್ರಕ್ಕೆ ಗಂಡಾಂತರ ಎದುರಾಗುತ್ತಲೇ ಇದೆ. ಸಂವಿಧಾನೇತರ ಅಧಿಕಾರ ಕೇಂದ್ರಗಳು ಸಂವಿಧಾನಾತ್ಮಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲು ಹುನ್ನಾರ ನಡೆಸುತ್ತಲೇ ಇವೆ.’’ ಇದಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆಯೇ ಒಂದು ಉದಾಹರಣೆ. ಚುನಾವಣೆ ಸಂದರ್ಭದಲ್ಲಿ ಐಟಿ ಇಲಾಖೆಯನ್ನು ಬಳಸಿಕೊಂಡು ಮಾಡಿದ ದಾಳಿಗಳು ರಾಜಕೀಯ ಉದ್ದೇಶದಿಂದ ಕೂಡಿದ್ದವು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಷ್ಟೆಲ್ಲಾ ಮಾಡಿದ ನಂತರವೂ ಬಿಜೆಪಿ ಚುನಾವಣೆಯಲ್ಲಿ ಬಹುಮತ ಗಳಿಸಲಿಲ್ಲ. ಕೇವಲ 104 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಏಕೈಕ ದೊಡ್ಡ ಪಕ್ಷದ ನಾಯಕ ಯಡಿಯೂರಪ್ಪರನ್ನು ರಾಜ್ಯಪಾಲ ವಜೂಭಾಯಿವಾಲಾ ಸರಕಾರ ರಚಿಸಲು ಆಹ್ವಾನಿಸ ಹೊರಟಿರುವುದು ಕೂಡ ಪ್ರಜಾಪ್ರಭುತ್ವವಾದಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಶಾಸನ ಸಭೆಯಲ್ಲಿ ಬಹುಮತ ಇಲ್ಲದಾಗ ಏಕೈಕ ದೊಡ್ಡ ಪಕ್ಷದ ನಾಯಕನನ್ನು ಸರಕಾರ ನಡೆಸಲು ಆಹ್ವಾನಿಸಿ ಬಹುಮತ ಸಾಬೀತುಪಡಿಸಲು ಒಂದು ವಾರದ ಕಾಲಾವಧಿ ನೀಡುವುದು ಕುದುರೆ ವ್ಯಾಪಾರಕ್ಕೆ ಅಂದರೆ ಶಾಸಕರ ಖರೀದಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ತಮ್ಮ ಪಕ್ಷದ ಕೆಲವು ಶಾಸಕರಿಗೆ ತಲಾ 100ಕೋಟಿ ರೂ. ಆಮಿಷ ಒಡ್ಡಿ ಹಾಗೂ ಸಚಿವ ಸ್ಥಾನ ನೀಡುವ ಆಸೆ ಹುಟ್ಟಿಸಿ ಪಕ್ಷಾಂತರ ನಡೆಸಲು ಯತ್ನ ನಡೆದಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಆರೋಪಿಸಿದ್ದಾರೆ.

 ವಿಧಾನಸಭಾ ಚುನಾವಣೆಯಲ್ಲಿ ಜನತೆ ನೀಡಿದ ಆದೇಶಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪರನ್ನು ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದಾರೆ ಎಂದು ಒಂದು ಮೂಲಗಳು ಹೇಳುತ್ತಿವೆ. ಯಡಿಯೂರಪ್ಪ ಗುರುವಾರ ಪ್ರಮಾಣವಚನ ಸ್ವೀಕರಿಸುತ್ತಾರೆಂದೂ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ನಿಜವೇ ಆಗಿದ್ದರೆ ಜನತಂತ್ರದ, ಶಿಷ್ಟಾಚಾರದ ಕಗ್ಗೊಲೆಯಾಗಿದೆ. ಯಡಿಯೂರಪ್ಪರನ್ನು ಸರಕಾರ ರಚಿಸಲು ಯಾವ ಆಧಾರದಲ್ಲಿ ಆಹ್ವಾನಿಸಿದರು? ಕೇವಲ 104 ಸದಸ್ಯ ಬಲ ಹೊಂದಿರುವ ಪಕ್ಷಕ್ಕೆ ಸರಕಾರ ರಚಿಸಲು ಆಹ್ವಾನ ನೀಡಿರುವುದು ಅನೇಕರ ಆಕ್ಷೇಪಕ್ಕೆ ಕಾರಣವಾಗಿದೆ.

ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿರುವುದರಿಂದ ಸರಕಾರ ರಚಿಸಲು ಆಹ್ವಾನಿಸಿರುವುದಾಗಿ ರಾಜ್ಯಪಾಲರು ಹೇಳಬಹುದು. ಆದರೆ ಇದೇ ಮಾನದಂಡ ಗೋವಾದಲ್ಲಿ ಏಕೆ ಅನುಸರಿಸಲಿಲ್ಲ? ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ ಸರಕಾರ ರಚಿಸಲು ಕಾಂಗ್ರೆಸ್‌ಗೆ ಅಲ್ಲಿನ ರಾಜ್ಯಪಾಲರು ಅವಕಾಶ ನೀಡಲಿಲ್ಲ. 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ 17 ಸದಸ್ಯ ಬಲ ಹೊಂದಿದ ಕಾಂಗ್ರೆಸ್‌ಗೆ ಅವಕಾಶ ನಿರಾಕರಿಸಲಾಯಿತು. ಅದರ ಬದಲಾಗಿ ಬಿಜೆಪಿಗೆ ಇತರ ಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸಲು ಅವಕಾಶ ಮಾಡಿಕೊಡಲಾಯಿತು. ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋದಾಗ ಸುಪ್ರೀಂ ಕೋರ್ಟ್ ಕೂಡ ಗೋವಾದ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿಯಿತು. ಸದನದಲ್ಲಿ ಯಾರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತದೋ ಅವರಿಗೆ ಸರಕಾರ ರಚಿಸಲು ಅವಕಾಶ ನೀಡುವುದು ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್‌ಗೆ ಅವಕಾಶ ನಿರಾಕರಿಸಲಾಯಿತು.

ಅಲ್ಲೂ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ ಬಿಜೆಪಿಗೆ ಇತರ ಪಕ್ಷಗಳೊಂದಿಗೆ ಸೇರಿ ಸರಕಾರ ನಡೆಸಲು ಅವಕಾಶ ನೀಡಲಾಯಿತು. ಇತ್ತೀಚೆಗೆ ನಡೆದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ 21 ಸ್ಥಾನ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಆದರೂ ಅದಕ್ಕೆ ಅವಕಾಶ ನಿರಾಕರಿಸಿ, ಸದನದಲ್ಲಿ ಬಹುಮತ ಹೊಂದಿದ ಬಿಜೆಪಿ ಮೈತ್ರಿಕೂಟಕ್ಕೆ ಅವಕಾಶ ನೀಡಲಾಯಿತು. ಇದನ್ನು ಸಮರ್ಥಿಸಿದ ಕೇಂದ್ರದ ಕಾನೂನು ಸಚಿವ ಜೇಟ್ಲಿಯವರು, ಸದನದಲ್ಲಿ ಬಹುಮತ ಹೊಂದಿದ ಮೈತ್ರಿಕೂಟದ ಸರಕಾರಕ್ಕೆ ರಾಜ್ಯಪಾಲರು ಮಾನ್ಯತೆ ನೀಡುವುದು ಸಂವಿಧಾನಾತ್ಮಕವಾಗಿ ಸರಿ ಎಂದು ಹೇಳಿದರು. ನಾಗಾಲ್ಯಾಂಡ್‌ನಲ್ಲಿ ಕೂಡ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅದಕ್ಕೆ ಸರಕಾರ ನಡೆಸಲು ಅವಕಾಶ ನೀಡಲಿಲ್ಲ. ಈ ಮಾನದಂಡವನ್ನು ಕರ್ನಾಟಕದಲ್ಲಿ ಅನುಸರಿಸಲು ರಾಜ್ಯಪಾಲರಿಗೆ ಯಾಕೆ ಕಷ್ಟವಾಗುತ್ತಿದೆ ಎಂಬುದಕ್ಕೆ ಉತ್ತರ ಬೇಕಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ 117 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದೆ. ಈ ಮೈತ್ರಿಕೂಟಕ್ಕೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಅವಕಾಶ ನೀಡಬೇಕಾಗಿದೆ. ಆದರೆ ಈ ಅವಕಾಶವನ್ನು ನಿರಾಕರಿಸಿ ಒಮ್ಮತವಿಲ್ಲದ ಬಿಜೆಪಿಗೆ ಸರಕಾರ ನಡೆಸಲು ಅವಕಾಶ ನೀಡುವ ಹುನ್ನಾರ ನಡೆಯುತ್ತಿದೆ.

ನಮ್ಮ ದೇಶದಲ್ಲಿ ಸಂವಿಧಾನದ ಚೌಕಟ್ಟಿನಲ್ಲಿಯೇ ಚುನಾಯಿತ ಸರಕಾರಗಳ ರಚನೆಯಾಗಬೇಕಾಗುತ್ತದೆ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ನಡೆದ ವಿದ್ಯಮಾನಗಳು ಆತಂಕಕಾರಿಯಾಗಿದೆ. ಪ್ರಧಾನಿ ಸ್ಥಾನದಲ್ಲಿ ಕುಳಿತ ವ್ಯಕ್ತಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಕರ್ನಾಟಕದಲ್ಲಿ ಸರಕಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾರೆ. ಪ್ರಧಾನಮಂತ್ರಿಯೇ ಈ ರೀತಿ ಹೇಳುವುದರಿಂದ ರಾಜ್ಯಪಾಲರ ಮೇಲೆ ನೇರವಾಗಿ ಪ್ರಭಾವ ಬೀರಿದಂತಾಗುತ್ತದೆ. ರಾಜ್ಯಪಾಲರು ಬಹುಮತ ಇಲ್ಲದ ಪಕ್ಷದ ನಾಯಕನನ್ನು ಆಹ್ವಾನಿಸುತ್ತಾರೆ. ಬಹುಮತವಿಲ್ಲದ ಪಕ್ಷದ ನಾಯಕ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಈ ಎಲ್ಲವೂ ಸಂವಿಧಾನಾತ್ಮಕ ಆಡಳಿತಕ್ಕೆ ಶೋಭೆ ತರುವ ಸಂಗತಿಗಳಲ್ಲ. ಬಹುಮತವಿಲ್ಲದ ಪಕ್ಷದ ನಾಯಕನನ್ನು ಸರಕಾರ ರಚಿಸಲು ಆಹ್ವಾನಿಸುವ ರಾಜ್ಯಪಾಲರಿಗೆ ಆತ ಬಹುಮತ ಹೇಗೆ ಸಾಬೀತುಪಡಿಸುತ್ತಾನೆ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಯಾಕೆಂದರೆ ಕರ್ನಾಟಕದಲ್ಲಿ ಏಕೈಕ ಪಕ್ಷೇತರ ಶಾಸಕ ಚುನಾಯಿತರಾಗಿದ್ದಾರೆ. ಆತ ಬೆಂಬಲ ನೀಡಿದರೂ ಬಹುಮತ ಸಾಧಿಸಲು ಆಗುವುದಿಲ್ಲ. ಬಹುಮತಗಳಿಸಬೇಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಚುನಾಯಿತರಾದ ಶಾಸಕರನ್ನು ಖರೀದಿ ಮಾಡಬೇಕು. ಖರೀದಿ ವ್ಯವಹಾರಕ್ಕೆ ರಾಜ್ಯಪಾಲರು ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ವ್ಯವಹಾರ ಕುದುರಿಸಲೆಂದೇ ಗುರುವಾರ ಬೆಂಗಳೂರಿಗೆ ಬಂದಿದ್ದಾರೆಂದು ಹೇಳಲಾಗುತ್ತದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನತೆ ಯಾವುದೇ ಪಕ್ಷಕ್ಕೆ ಬಹುಮತ ನೀಡಲಿಲ್ಲ ಎಂಬುದು ನಿಜ. ಆದರೆ, ಶೇ.64ರಷ್ಟು ಜನರ ಒಲವು ಜಾತ್ಯತೀತ ಪಕ್ಷಗಳ ಪರವಾಗಿ ಇತ್ತೆಂಬುದು ನಿಜ. 104 ಸ್ಥಾನ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಪಡೆದ ಮತಗಳ ಪ್ರಮಾಣ ಶೇ 36.2 ಮಾತ್ರ. ಆದರೆ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳು ಪಡೆದಂತಹ ಮತಗಳ ಪ್ರಮಾಣ ಶೇ.64ರಷ್ಟು. ಇದರಿಂದಾಗಿ ರಾಜ್ಯದ ಜನರ ಒಲವು ಯಾವ ಕಡೆ ಇದೆ ಎಂಬುದು ಗೊತ್ತಾಗುತ್ತದೆ. ರಾಜ್ಯದ ಬಹುತೇಕ ಜನ ಕೋಮುವಾದಿ ಪಕ್ಷವನ್ನು ತಿರಸ್ಕರಿಸಿ, ಜಾತ್ಯತೀತ ಪಕ್ಷಗಳ ಪರವಾಗಿ ಒಲವು ತೋರಿಸಿದ್ದಾರೆ. ಈ ಜಾತ್ಯತೀತ ಪಕ್ಷಗಳು ಒಂದಾಗಿ ಸರಕಾರ ರಚಿಸಲು ಮುಂದಾಗಿವೆ. ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರು ಯಾವುದೇ ಒತ್ತಡಕ್ಕೆ ಮಣಿಯದೆ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ರಾಜ್ಯಪಾಲ ವಜೂಭಾಯಿ ವಾಲಾ ಸಂಘ ಪರಿವಾರದ ಹಿನ್ನೆಲೆ ಹೊಂದಿದ್ದಾರೆ ಹಾಗೂ ಗುಜರಾತ್‌ನಲ್ಲಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿದ್ದರು.

ಅವರ ಪೂರ್ವಾಶ್ರಮದ ಹಿನ್ನೆಲೆ ಏನೇ ಇರಲಿ, ರಾಜ್ಯಪಾಲರ ಸ್ಥಾನದಲ್ಲಿದ್ದು ಅವರು ಅದರ ಘನತೆಗೆ ತಕ್ಕಂತೆ ವರ್ತಿಸಬೇಕು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದೆಂಬುದಾಗಿ ಅನೇಕ ಉದಾಹರಣೆಗಳನ್ನು ನೀಡಬಹುದು. 1998ರಲ್ಲಿ ಕೇಂದ್ರದಲ್ಲಿ ಇಂತಹ ಸನ್ನಿವೇಶ ನಿರ್ಮಾಣವಾಗಿದ್ದಾಗ ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಸಾಧಿಸಲು ಅವಕಾಶ ನೀಡಿದ್ದರು. ಆಗ ಬಿಜೆಪಿ ಇದನ್ನು ಒಪ್ಪಿಕೊಂಡಿತ್ತು. ಇದೇ ತತ್ವದ ಆಧಾರದ ಮೇಲೆ ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಜೆಡಿಎಸ್ ನೇತೃತ್ವದ ಸರಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬೇಕು. ಈಗಲೂ ಕಾಲ ಮಿಂಚಿಲ್ಲ. ರಾಜ್ಯಪಾಲರು ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ ಗೋವಾ ಮತ್ತು ಮಣಿಪುರ ರಾಜ್ಯಪಾಲರು ಕೈಗೊಂಡ ತೀರ್ಮಾನದಂತೆ ಬಹುಮತ ಹೊಂದಿದ ಮೈತ್ರಿಕೂಟ ಸರಕಾರಕ್ಕೆ ಅವಕಾಶ ನೀಡಬೇಕು. ಇಲ್ಲದೇ ಇದ್ದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News