ಬಿಜೆಪಿ ಸರಕಾರ ರಚಿಸುವ ಜನಾದೇಶ ಒಪ್ಪುವವರು ಕಾಂಗ್ರೆಸ್-ಜೆಡಿಎಸ್‌ನಲ್ಲಿದ್ದಾರೆ: ಯಡಿಯೂರಪ್ಪ
ಬೆಂಗಳೂರು, ಮೇ 17: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅನೈತಿಕವಾಗಿ ಚುನಾವಣೆ ನಂತರ ಒಪ್ಪಂದ ಮಾಡಿಕೊಂಡು ಅಧಿಕಾರ ಕಬಳಿಸಲು ಪ್ರಯತ್ನ ನಡೆಸುತ್ತಿವೆ. ಆದರೆ ಜನ ಬೆಂಬಲ ನನ್ನ ಹಾಗೂ ಪಕ್ಷದ ಪರ ಇದೆ. ನೂರಕ್ಕೆ ನೂರರಷ್ಟು ಯಶಸ್ಸಿನ ವಿಶ್ವಾಸವಿದೆ. ಬಿಜೆಪಿ ಪಕ್ಷದ ಸರಕಾರ ರಚಿಸಬೇಕೆಂಬ ಜನಾದೇಶ ಒಪ್ಪುವ ಕಾಂಗ್ರೆಸ್- ಜೆಡಿಎಸ್ ಶಾಸಕರು ಇದ್ದಾರೆ. ವಿಶ್ವಾಸಮತದ ವೇಳೆ ಅವರು ಆತ್ಮಸಾಕ್ಷಿ ಹಾಗೂ ಜನತೆಯ ತೀರ್ಪಿಗೆ ಅನುಗುಣವಾಗಿ ಮತ ಚಲಾಯಿಸುವ ವಿಶ್ವಾಸವಿದೆ ಎಂದು ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
‘‘ರಾಜ್ಯದ ಆರೂವರೆ ಕೋಟಿ ಜನತೆಗೆ ಕೃತಜ್ಞತೆ ಸಲ್ಲಿಸುವೆ. ಜನರ ಆರ್ಶಿರ್ವಾದದಿಂದ 3ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಸುಪ್ರೀಂಕೋರ್ಟ್‌ನಲ್ಲಿ ವಿಷಯ ಇರುವ ವಿಶ್ವಾಸಮತದ ಬಗ್ಗೆ ಚರ್ಚೆ ಅನಾವಶ್ಯಕ. ಮತ್ತೊಮ್ಮೆ ಜನತೆಗೆ ಕಾರ್ಯಕರ್ತರಿಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾಗೆ ನನ್ನ ಹೃದಯಪುರ್ವಕ ಕೃತಜ್ಷತೆ ಸಲ್ಲಿಸುವೆ’’ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ನ, ಸಹಕಾರ ಸಂಘಗಳ 1 ಲಕ್ಷ ರೂ. ವರೆಗಿನ ಸಾಲ ಮನ್ನಾ, ನೇಕಾರರ 1 ಲಕ್ಷ ರೂ. ಸಾಲ ಮನ್ನಾ ಭರವಸೆ ಈಡೇರಿಸುತ್ತೇನೆ. ಈ ಬಗ್ಗೆ ಇಂದು ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದ್ದು ನಾಳೆ ದಾಖಲೆಗಳ ಪರಿಶೀಲನೆ ನಡೆಸುತ್ತೇನೆ’’ ಎಂದು ಯಡಿಯೂರಪ್ಪ ಹೇಳಿದ್ದಾರೆ.