ಬಿಜೆಪಿ ಸಂಭ್ರಮಾಚರಣೆ, ಜೆಡಿಎಸ್-ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಮೇ 17: ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತು. ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ತಮ್ಮ ಕ್ಷೇತ್ರಗಳಲ್ಲಿ ಯಡಿಯೂರಪ್ಪಅವರ ಅಧಿಕಾರ ಸ್ವೀಕಾರವನ್ನು ಸ್ವಾಗತಿಸಿ ಜಯಘೋಷ ಮೊಳಗಿಸಿದರು. ಯಡಿಯೂರಪ್ಪ ಹಾಗೂ ಮೋದಿ ಪರವಾಗಿ ಜೈಕಾರ ಹಾಕುತ್ತಾ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸಪಟ್ಟರು. ರಾಜಭವನದ ಬಳಿ ನೆರೆದಿದ್ದ ಅಪಾರ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಿಸಿರುವ ಜೊತೆಗೆ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ಅದೇ ರೀತಿ ಯಡಿಯೂರಪ್ಪಅವರ ಸ್ವಕ್ಷೇತ್ರ ಶಿವಮೊಗ್ಗ ಸೇರಿದಂತೆ ರಾಜ್ಯದ ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಮಂಡ್ಯ, ಮದ್ದೂರು, ಬಂಗಾರಪೇಟೆ, ಭದ್ರಾವತಿ, ಹಾಸನ, ಚಿತ್ರದುರ್ಗ ಮತ್ತಿತರೆಡೆ ಪ್ರಮುಖ ರಸ್ತೆಗಳಲ್ಲಿ ಜಮಾಯಿಸಿದ ಕಾರ್ಯಕರ್ತರು ಬಿಜೆಪಿಯ ಗೆಲುವನ್ನು ಸಂಭ್ರಮಿಸಿದರು.
ಕೆಲವೆಡೆ ಕಾರ್ಯಕರ್ತರು ಬೈಕ್ ರ್ಯಾಲಿ, ಮೆರವಣಿಗೆ ನಡೆಸಿ ಸಡಗರದಿಂದ ಹಬ್ಬದಂತೆ ಆಚರಿಸಿದರೆ ಮತ್ತೆ ಕೆಲವರು ಆತ್ಮೀಯರಿಗೆ ಸಿಹಿ ಹಂಚುವ ಮೂಲಕ ತಮ್ಮ ನಾಯಕನ ಅಧಿಕಾರ ಸ್ವೀಕಾರಕ್ಕೆ ಹರ್ಷ ವ್ಯಕ್ತಪಡಿಸಿದರು.
ಒಂದೆಡೆ ಬಿಜೆಪಿ ಅಧಿಕಾರ ಸ್ವೀಕಾರಕ್ಕೆ ಸಂಭ್ರಮಾಚರಣೆಗಳು ನಡೆಯುತ್ತಿದ್ದರೆ, ಸರಕಾರ ರಚಿಸಲು ಸರಳ ಬಹುಮತ ಹೊಂದಿರುವ ಜೆಡಿಎಸ್, ಕಾಂಗ್ರೆಸ್‌ಗೆ ರಾಜ್ಯಪಾಲರು ಅವಕಾಶ ನೀಡದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದಿಯಾಗಿ ಎಲ್ಲರೂ ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಅದೇ ರೀತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ನಡೆ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಖಂಡಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ನೀಡಬಾರದು. ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಮನವಿಯನ್ನು ರಾಜ್ಯಪಾಲರು ಪುರಸ್ಕರಿಸಬೇಕು ಎಂದು ಒತ್ತಾಯಿಸಿ ಪ್ರಮುಖ ವೃತ್ತಗಳಲ್ಲಿ ಧರಣಿ ನಡೆಸಲಾಯಿತು. ಕೆಲವು ಕಡೆ ಜೆಡಿಎಸ್‌ನ ಕಾರ್ಯಕರ್ತರು, ಅಭಿಮಾನಿಗಳು ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಬಿಜೆಪಿ ಪರವಾದ ನಿಲುವನ್ನು ಖಂಡಿಸಿದರು.