ಪೊಲೀಸ್ ಸಿಬ್ಬಂದಿಯಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಮಡಿಕೇರಿ ಉಪ ತಹಶೀಲ್ದಾರ್

Update: 2018-05-17 17:26 GMT

ಮಡಿಕೇರಿ,ಮೇ.17: ಮಡಿಕೇರಿ ಉಪವಿಭಾಗಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಉಮೇಶ್ ಎಂಬುವವರು ಪೊಲೀಸ್ ಸಿಬ್ಬಂದಿಯೊಬ್ಬರಿಂದ ಐದು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹುದ್ದೆಯಲ್ಲಿರುವ ರಮೇಶ್ ಎಂಬುವವರು ತಮ್ಮ ಸ್ವಾಧೀನದಲ್ಲಿರುವ 6 ಸೆಂಟ್ ಜಾಗಕ್ಕೆ ಆರ್‍ಟಿಸಿ ನೀಡುವಂತೆ ವೀರಾಜಪೇಟೆ ತಹಶೀಲ್ದಾರ್ ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು.ವೀರಾಜಪೇಟೆ ತಹಶೀಲ್ದಾರ್ ಅವರು ಪ್ರಕರಣವನ್ನು ಜಿಲ್ಲಾ ಉಪವಿಭಾಗಾಧಿಕಾರಿಗಳ ಮೂಲಕವೇ ಪರಿಹರಿಸಿಕೊಳ್ಳುವಂತೆ ರಮೇಶ್ ಅವರಿಗೆ ಸೂಚಿಸಿದ್ದರು. ರಮೇಶ್ ಅವರು ಈ ಕುರಿತು ಮಡಿಕೇರಿ ಉಪವಿಭಾಗಾಧಿಕಾರಿಗಳ ಕಚೇರಿಗೆ 2017ರ ಡಿಸೆಂಬರ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಜಾಗದ ಆರ್‍ಟಿಸಿಯ ಕುರಿತು ರಮೇಶ್ ಹಲವು ಬಾರಿ ಉಪತಹಶೀಲ್ದಾರ್ ಉಮೇಶ್ ಅವರನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ದೊರಕಿರಲಿಲ್ಲ. ಈ ಸಂದರ್ಭ ರಮೇಶ್ ತಮ್ಮ ಕೆಲಸವನ್ನು ಬೇಗ ಮಾಡಿಕೊಡುವಂತೆ ಎರಡು ಸಾವಿರ ರೂ.ಗಳನ್ನು ಉಮೇಶ್ ಅವರಿಗೆ ನೀಡಿದ್ದರು ಎನ್ನಲಾಗಿದೆ. ಆದರೆ ಉಪತಹಶೀಲ್ದಾರ್ ಉಮೇಶ್ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. 

ಈ ಬೇಡಿಕೆಯಂತೆ ರೂ.5 ಸಾವಿರ ನೀಡುವುದಾಗಿ ರಮೇಶ್ ಹೇಳಿದ್ದರು. ಹಲವು ಬಾರಿ ಜಾಗದ ದಾಖಲೆಗಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಅಲೆದಾಡಿದ ರಮೇಶ್ ಬಳಿಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಗುರುವಾರ ಸಂಜೆ ಉಪವಿಭಾಗಾಧಿಕಾರಿ ಕಚೇರಿಯ ಉಪತಹಶೀಲ್ದಾರ್ ಉಮೇಶ್ ಅವರು ಪೇದೆ ರಮೇಶ್ ಅವರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಮೇಶ್ ಅವರನ್ನು ತಮ್ಮ ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆಯನ್ನು ಮುಂದುವರೆಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಮುಂದಾಳತ್ವದಲ್ಲಿ ಡಿವೈಎಸ್‍ಪಿ ಉಮೇಶ್ ನಾಯಕ್ ಮಾರ್ಗದರ್ಶನದಲ್ಲಿ ಎಸಿಬಿಯ ವೃತ್ತ ನಿರೀಕ್ಷಕ ಮಹೇಶ್ ಹಾಗೂ ದೊಡ್ಡಸಿದ್ದೇಗೌಡ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭ ಎಸಿಬಿ ಸಿಬ್ಬಂದಿಗಳಾದ ದಿನೇಶ್, ಸಜನ್, ಲೋಹಿತ್, ಪ್ರವೀಣ್, ರಾಜೇಶ್, ಸುರೇಶ್, ದೀಪಿಕಾ, ಅಶ್ವಿನ್ ಕುಮಾರ್ ಪಾಲ್ಗೊಂಡಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News