ಮಂಡ್ಯ: ರಾಜ್ಯಪಾಲರ ನಡೆ ಖಂಡಿಸಿ ಜೆಡಿಎಸ್-ಕಾಂಗ್ರೆಸ್ ಪ್ರತಿಭಟನೆ

Update: 2018-05-17 18:02 GMT

ಮಂಡ್ಯ, ಮೇ 17: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಗೆ ಅವಕಾಶ ನೀಡದ ರಾಜ್ಯಪಾಲರ ಕ್ರಮ ಖಂಡಿಸಿ ಜಿಲ್ಲೆಯ ವಿವಿಧೆಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯ ನಗರ, ಮದ್ದೂರು, ಪಾಂಡವಪುರ, ಕೆ.ಆರ್.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಕೊಪ್ಪ ಸೇರಿದಂತೆ ವಿಧೆಡೆ ಪ್ರತಿಭಟನೆ ನಡೆಸಿ ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಂಜಯ ವೃತ್ತದಲ್ಲಿ ಸಮಾವೇಶಗೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯಪಾಲರು ಸ್ಪಷ್ಟ ಬಹುಮತವಿಲ್ಲದ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆಗೆ ಅಗತ್ಯ ಸಂಖ್ಯೆ ಶಾಸಕರಿದ್ದಾರೆ. ಸಂವಿಧಾನ ಮತ್ತು ಪರಂಪರೆ ಪ್ರಕಾರ ಸ್ಪಷ್ಟ ಬಹುಮತವಿರುವವರಿಗೆ ಸರಕಾರ ರಚಿಸಲು ಅವಕಾಶ ನೀಡಬೇಕು. ಆದರೆ, ಇದನ್ನು ಉಲ್ಲಂಘಿಸಲಾಗಿದೆ ಎಂದು ದೂರಿದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಚನೆಗೆ ಅವಕಾಶ ನೀಡಿ, ಬಹುಮತ ಸಾಬೀತುಪಡಿಸಲು 15 ದಿವಸ ಕಾಲಾವಕಾಶ ನೀಡುವ ಮೂಲಕ ಶಾಸಕರ ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರು ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ಆಪಾದಿಸಿದರು.

ಇದೇ ವೇಳೆ ಉದ್ರಿಕ್ತ ಪ್ರತಿಭಟನಾಕಾರರು ರಸ್ತೆತಡೆಗೆ ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಎಂ.ಜೆ.ಚಿಕ್ಕಣ್ಣ, ಕೆ.ಎಸ್.ವಿಜಯಾನಂದ, ಎಚ್.ಎನ್.ಯೋಗೇಶ್, ಅಶೋಕ್ ಜಯರಾಂ, ಗೌರೀಶ್, ಅರುಣ್‍ಕುಮಾರ್, ಎಸ್.ಡಿ.ಜಯರಾಂ, ಜಬೀವುಲ್ಲಾ, ರವಿಶಂಕರ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News