ಕರ್ನಾಟಕ ರಾಜಕೀಯ ಪ್ರಹಸನ: ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ

Update: 2018-05-18 05:06 GMT

ಹೊಸದಿಲ್ಲಿ, ಮೇ 19: ಕರ್ನಾಟಕದಲ್ಲಿ ಬಹುಮತ ಕೊರತೆ ಇದ್ದರೂ, ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರವನ್ನು ಕಾಂಗ್ರೆಸ್- ಜೆಡಿಎಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಪ್ರಕರಣದ ವಿಚಾರಣೆ ಇಂದು ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್ ತೀರ್ಪಿನತ್ತ ನೆಟ್ಟಿದೆ.

ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಿ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಬರೆದ ಪತ್ರದ ಪ್ರತಿಯನ್ನು ಸಲ್ಲಿಸುವಂತೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠ ಸೂಚಿಸಿದ್ದು, ಯಡಿಯೂರಪ್ಪ ಭವಿಷ್ಯ ಈ ಬಗ್ಗೆ ಸುಪ್ರೀಂಕೋರ್ಟ್ ಕೈಗೊಳ್ಳುವ ನಿರ್ಧಾರದ ಮೇಲೆ ನಿಂತಿದೆ..

ಈ ಮಧ್ಯೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, "ಯಡಿಯೂರಪ್ಪ ತಮಗೆ ಬಹುಮತ ಇದೆ ಎಂಬ ಹಕ್ಕು ಪ್ರತಿಪಾದನೆಯನ್ನೂ ಮಾಡಿಲ್ಲ ಎನ್ನುವುದನ್ನು ಈ ಪತ್ರ ಸಾಬೀತುಪಡಿಸಲಿದೆ" ಎಂದು ಹೇಳಿದ್ದಾರೆ. "ಈ ಕಾನೂನು ಹೋರಾಟದಲ್ಲಿ ತಮ್ಮ ಜಯ ನಿಶ್ಚಯ. ಯಡಿಯೂರಪ್ಪ ಏಕ್ ದಿನ್ ಕಾ ಚೀಫ್‌ ಮಿನಿಸ್ಟರ್ ಆಗುವುದು ಖಚಿತ" ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲಾ ಹೇಳಿದ್ದಾರೆ.

ಪಕ್ಷಾಂತರಕ್ಕೆ ಕುಮ್ಮಕ್ಕು ನೀಡದೇ ತಮಗೆ ಬಹುಮತವಿದೆ ಎಂದು ಹಕ್ಕು ಪ್ರತಿಪಾದನೆ ಮಾಡಲು ಕೂಡಾ ಬಿಜೆಪಿಗೆ ಅವಕಾಶವಿಲ್ಲ ಎನ್ನುವುದು ಕಾಂಗ್ರೆಸ್- ಜೆಡಿಎಸ್ ವಾದ. ಇದನ್ನು ಸಂವಿಧಾನದ ಮೇಲಿನ ಎನ್‌ಕೌಂಟರ್ ಎಂದು ಉಭಯ ಪಕ್ಷಗಳು ಕೋರ್ಟ್‌ನಲ್ಲಿ ವಾದಿಸಿವೆ. ಬಿಜೆಪಿ ಒಬ್ಬ ಪಕ್ಷೇತರನ ಬೆಂಬಲದೊಂದಿಗೆ 105 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್- ಜೆಡಿಎಸ್ ಒಟ್ಟಾಗಿ 116 ಸ್ಥಾನಗಳನ್ನು ಹೊಂದಿವೆ.

ಯಾವ ಆಧಾರದಲ್ಲಿ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ ಎನ್ನುವುದು ವಿರೋಧ ಪಕ್ಷಗಳ ಪ್ರಶ್ನೆಯಾಗಿದ್ದು, ಸುಪ್ರೀಂಕೋರ್ಟ್ ತೀರ್ಪು ಇದಕ್ಕೆ ಉತ್ತರವಾಗಬೇಕಿದೆ. ಬಹುಮತ ಇಲ್ಲದಿದ್ದರೂ ಏಕೈಕ ದೊಡ್ಡ ಪಕ್ಷ ಎಂಬ ಕಾರಣಕ್ಕೆ ಬಿಜೆಪಿಗೆ ಅವಕಾಶ ನೀಡಿರುವುದು "ಶಾಸಕರ ಕಳ್ಳಬೇಟೆಗೆ ಲೈಸನ್ಸ್ ನೀಡಿದಂತೆ" ಎಂದು ಸುಪ್ರೀಂಕೋರ್ಟ್‌ನಲ್ಲಿ ಮೈತ್ರಿಕೂಟವನ್ನು ಪ್ರತಿನಿಧಿಸುತ್ತಿರುವ ಅಭಿಷೇಕ್ ಸಂಘ್ವಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News