×
Ad

ರಾಯಚೂರು: ಕಲುಷಿತ ನೀರು ಕುಡಿದು 47 ಕುರಿಗಳ ಸಾವು

Update: 2018-05-18 20:10 IST
ಸಾಂದರ್ಭಿಕ ಚಿತ್ರ

ರಾಯಚೂರು, ಮೇ 18: ಅಕ್ಕಿ ಗಿರಣಿಯಿಂದ ಹೊರಬರುವ ಕಲುಷಿತ ನೀರು ಕುಡಿದು 47 ಕುರಿಗಳು ಮೃತಪಟ್ಟಿದೆ ಎನ್ನಲಾದ ಘಟನೆ ರಾಯಚೂರು ತಾಲೂಕಿನ ಚಿಕ್ಕಸಗೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಸಗೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಮುಂಚಿಕೊಂಡ ರೈಸ್ ಮಿಲ್‌ನಿಂದ ಕಲುಷಿತ ನೀರು ಹೊರಗೆ ಬಿಟ್ಟಿದ್ದು, ಕುರಿಗಳು ಮೇಯಲು ಬಂದಾಗ ಈ ನೀರು ಕುಡಿದು ಸಾವನ್ನಪ್ಪಿವೆ ಎನ್ನಲಾಗಿದೆ.

ಕುರಿಗಳು ಚಿಕ್ಕಸಗೂರಿನ ಮಲ್ಲೇಶ್ ಎಂಬುವರಿಗೆ ಸೇರಿದ್ದು, ಲಕ್ಷಾಂತರ ರೂ.ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ. ಈ ಹಿಂದೆಯೂ ಸುತ್ತಮುತ್ತಲಿನ ಗ್ರಾಮದ ಹಲವು ಜಾನುವಾರುಗಳು ರೈಸ್‌ಮಿಲ್‌ನಿಂದ ಬರುವ ನೀರನ್ನು ಕುಡಿದು ಮೃತಪಟ್ಟಿದ್ದವು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೀರನ್ನು ಹೊರ ಬಿಡುವ ಮೊದಲು ಶುದ್ಧೀಕರಿಸಿ ಬಿಡಬೇಕು. ಆದರೆ, ಯಾವುದೇ ನಿಯಮಗಳನ್ನು ರೈಸ್ ಮಿಲ್‌ನವರು ಪಾಲಿಸದೆ ನೇರವಾಗಿ ಕಲುಷಿತ ನೀರನ್ನು ಕಾಲುವೆಗೆ ಬಿಟ್ಟಿದ್ದಾರೆ. ಈ ನೀರು ಕೃಷ್ಣಾ ನದಿ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ನದಿ ನೀರನ್ನು ಕುಡಿದರೆ ಜಾನುವಾರುಗಳಷ್ಟೇ ಅಲ್ಲ ಜನರು ಬಲಿಯಾಗಬೇಕಾಗುತ್ತದೆ. ಕೂಡಲೇ ಪರಿಸರ ಮಾಲಿನ್ಯ ಇಲಾಖೆಯವರು ಎಚ್ಚೆತ್ತುಕೊಂಡು ಕಲುಷಿತ ನೀರು ಹೊರಬಿಡದಂತೆ ರೈಸ್ ಮಿಲ್ ಮಾಲಕರಿಗೆ ಎಚ್ಚರಿಕೆ ಕೊಡಬೇಕು ಹಾಗೂ ಮಿಲ್ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

ಕುರಿಗಳು ಮೃತಪಟ್ಟಿರುವ ಪ್ರಕರಣ ಸಂಬಂಧ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News