ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್‍ನಲ್ಲಿಯೇ ಅಪಸ್ವರವಿದೆ : ಕೆ.ಎಸ್ ಈಶ್ವರಪ್ಪ

Update: 2018-05-18 16:57 GMT

ಶಿವಮೊಗ್ಗ, ಮೇ 18: ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ನಾಯಕರ ನಿರ್ಧಾರಕ್ಕೆ, ಆ ಪಕ್ಷದ ಶಾಸಕರೇ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಶಾಸಕ ಕೆ.ಎಸ್.ಈಶ್ವರಪ್ಪರವರು ತಿಳಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಸ್ತುತ ಚುನಾವಣೆಯಲ್ಲಿ 78 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷವು, ಕೇವಲ 38 ಸ್ಥಾನ ಗಳಿಸಿರುವ ಜೆಡಿಎಸ್‍ಗೆ ಅಧಿಕಾರ ನೀಡಲು ಮುಂದಾಗಿದೆ. ಈ ಅಪವಿತ್ರ ಮೈತ್ರಿಗೆ ಕಾಂಗ್ರೆಸ್‍ನ ಹಲವು ಶಾಸಕರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ. 

ರಾಜ್ಯದ ಜನತೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅತ್ಯದಿಕ 104 ಸ್ಥಾನಗಳಲ್ಲಿ ಗೆಲ್ಲಿಸಿದ್ದಾರೆ. ಜನಾಭಿಪ್ರಾಯದಂತೆ ಬಿಜೆಪಿಯು ಸರ್ಕಾರ ರಚನೆ ಮಾಡುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತಯಾಚನೆ ವೇಳೆ ಸ್ಪಷ್ಟ ಬಹುಮತ ಬಿಜೆಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಬಿಜೆಪಿ ವಿಶ್ವಾಸಮತದಲ್ಲಿ ಜಯ ಸಾಧಿಸುವುದು ಖಚಿತವಾಗಿರುವುದರಿಂದ, ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಬಿಜೆಪಿ ಸರ್ಕಾರವು ಎಲ್ಲ ಆಶ್ವಾಸನೆಗಳನ್ನು ಕಾರ್ಯಗತಗೊಳಿಸಲಿದೆ ಎಂದರು. 

ಅಧಿಕಾರದ ಹಪಾಹಪಿಗೆ ಬಿದ್ದಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಜನಾಭಿಪ್ರಾಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿವೆ. ಅತೀ ಕಡಿಮೆ ಸ್ಥಾನ ಪಡೆದಿರುವ ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.  ಕಾಂಗ್ರೆಸ್ ವಿರುದ್ದ ಜನ ತೀರ್ಪು ನೀಡಿದ್ದಾರೆ. ಆ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಆಡಳಿತ ಸ್ಥಾನದಲ್ಲಿ ಕೂರಬೇಕೆಂಬ ಆಸೆ ಪಡುತ್ತಿದೆ. ಇದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಕಾಂಗ್ರೆಸ್ ನಡೆಯಿಂದ ಬೇಸರಗೊಂಡಿರುವ ಆ ಪಕ್ಷದ ಹಲವು ಶಾಸಕರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News