×
Ad

ವೈದ್ಯರ ಚೀಟಿಯಿಲ್ಲದೆ ಕ್ಷಯ ರೋಗದ ಔಷಧಿ ನೀಡುವ ಮೆಡಿಕಲ್ ಸ್ಟೋರ್ ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ: ತುಮಕೂರು ಡಿ.ಸಿ

Update: 2018-05-18 22:57 IST

ತುಮಕೂರು,ಮೇ.18: ವೈದ್ಯರ ಸಲಹಾ ಚೀಟಿಯಿಲ್ಲದೆ ಕ್ಷಯ ರೋಗಿಗಳಿಗೆ ಔಷಧಿ ನೀಡುವ ಮೆಡಿಕಲ್ ಸ್ಟೋರ್(ಔಷಧಿ ಕೇಂದ್ರ)ಗಳನ್ನು ಮುಚ್ಚಿಸಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಕ್ಷಯ ರೋಗ, ಅಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮ, ಕೆಪಿಎಂಇ, ಡೆಂಗ್ಯು ಮತ್ತು ಚಿಕುನ್‍ ಗುನ್ಯ ನಿಯಂತ್ರಣ, ತಂಬಾಕು ನಿಯಂತ್ರಣ ಕುರಿತಂತೆ ಸಭೆ ನಡೆಸಿ ಮಾತನಾಡುತಿದ್ದ ಅವರು, ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳು ಪ್ರತೀ ಬಾರಿ ಔಷಧಿ ಕೊಳ್ಳುವಾಗಲೂ ವೈದ್ಯರ ಸಲಹಾ ಚೀಟಿ ತೋರಿಸಿದರೆ ಮಾತ್ರ ಔಷಧಿ ಕೇಂದ್ರಗಳಲ್ಲಿ ಔಷಧಿ ವಿತರಿಸಬೇಕು. ಔಷಧಿ ಕೇಂದ್ರದವರು ತಾವೇ ವೈದ್ಯರಂತೆ ವರ್ತಿಸುತ್ತಿರುವುದು ಕಂಡುಬಂದಿದ್ದು,  ಇಂತಹ ಔಷಧಿ ಕೇಂದ್ರಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದೆಂದರು.

ರಾಷ್ಟ್ರದಲ್ಲಿ 2025ರ ವೇಳೆಗೆ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬೇಕಾಗಿರುವುದರಿಂದ ಜಿಲ್ಲೆಯ ಎಲ್ಲ ಸರಕಾರಿ, ಖಾಸಗಿ ಆಸ್ಪತ್ರೆಗಳು ಸಹಕರಿಸಬೇಕು. ಖಾಸಗಿ ವೈದ್ಯರು ತಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳ ಮಾಹಿತಿಯನ್ನು ಪ್ರತಿ ತಿಂಗಳು ಕ್ಷಯ ರೋಗ ನಿಯಂತ್ರಣ ಕೇಂದ್ರಕ್ಕೆ ನೀಡಬೇಕು. ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ರೋಗಿಯ ಮೇಲೆ ನಿಗಾ ಇಟ್ಟಿರಬೇಕು. ಶಂಕಿತ ಕ್ಷಯ ರೋಗಿಗಳನ್ನು ಜಿಲ್ಲೆಯಲ್ಲಿರುವ ನಿಗದಿತ ಕಫ ಪರೀಕ್ಷಾ ಕೇಂದ್ರ ಮತ್ತು ಸಿಬಿನ್ಯಾಟ್ ಕೇಂದ್ರಗಳಿಗೆ ಪರೀಕ್ಷೆಗಾಗಿ ಕಳುಹಿಸಬೇಕೆಂದು ಸೂಚಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸುತ್ತಿರುವುದು ವಿಪರ್ಯಾಸ. ತಮ್ಮಲ್ಲಿ ಚಿಕಿತ್ಸೆ ಲಭ್ಯವಿಲ್ಲದ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಬೇಕೆಂದರಲ್ಲದೆ, ಪ್ರಸ್ತುತ ಬೇಸಿಗೆ ಕಾಲವಿರುವುದರಿಂದ ಡೆಂಗ್ಯು ಮತ್ತು ಚಿಕುನ್‍ಗುನ್ಯ ನಿಯಂತ್ರಣದಲ್ಲಿದೆ. ಆದರೆ ಮಳೆಗಾಲ ಪ್ರಾರಂಭಿಸುವುದಕ್ಕೆ ಮುನ್ನ ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪಾವಗಡ ತಾಲೂಕಿನ ತಿರುಮಣಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕಿನಲ್ಲಿ 2017 ರಿಂದ ಈವರೆಗೆ 155 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, ಈ ನಿಟ್ಟಿನಲ್ಲಿ  ಜಿಲ್ಲೆಯಲ್ಲಿ 2020ರ ವೇಳೆಗೆ ಶೂನ್ಯ ಮಲೇರಿಯಾ ಪ್ರಕರಣ ಸಾಧಿಸುವ ಗುರಿ ಹೊಂದಿರುವುದರಿಂದ ಸಮರೋಪಾದಿಯಲ್ಲಿ ನಿಯಂತ್ರಣ ಕಾರ್ಯಕ್ರಮ ಕೈಗೊಳ್ಳಬೇಕು. ಸೋಲಾರ್ ಪಾರ್ಕಿನಲ್ಲಿ ದುಡಿಯಲು ವಲಸೆ ಬಂದ ಕಾರ್ಮಿಕರನ್ನು ತಕ್ಷಣವೇ ಆರೋಗ್ಯ ತಪಾಸಣೆಗೊಳಪಡಿಸಿ ಹೆಲ್ತ್ ಕಾರ್ಡ್ ನೀಡಬೇಕು. ವಲಸೆ ಕಾರ್ಮಿಕರಿಗೆ ವ್ಯವಸ್ಥಿತ ಮೂಲಭೂತ ಸೌಕರ್ಯ, ಶುದ್ಧ ಕುಡಿಯುವ ನೀರು, ವಾಸಿಸಲು ಮನೆ, ಆರೋಗ್ಯ ತುರ್ತು ಚಿಕಿತ್ಸಾ ವಾಹನ ಒದಗಿಸುವುದು ಸೋಲಾರ್ ಪಾರ್ಕ್ ಸಂಸ್ಥೆಯ ಜವಾಬ್ದಾರಿಯಾಗಿದ್ದು, ಇನ್ನು 10 ದಿನಗಳೊಳಗಾಗಿ ಅಗತ್ಯ ಸೌಕರ್ಯ ಕಲ್ಪಿಸಬೇಕೆಂದು ಸಂಸ್ಥೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕೋಟ್ಪಾ(ತಂಬಾಕು ನಿಯಂತ್ರಣ) ಕಾಯ್ದೆಯಡಿ ದಾಳಿ ನಡೆಸಲು ಆರೋಗ್ಯ ಇಲಾಖೆಯೊಂದಿಗೆ ಸಂಬಂಧಿಸಿದ ಇಲಾಖೆಗಳು ಸಹಕರಿಸಬೇಕು. ಸಹಕರಿಸದ ಇಲಾಖೆಗಳಿಗೆ ನೋಟೀಸ್ ನೀಡಲಾಗುವುದು. ಜಿಲ್ಲೆಯಲ್ಲಿರುವ ಹೆಚ್‍ಐವಿ ಪೀಡಿತರಲ್ಲಿ ಅರ್ಹ 7 ಜನರಿಗೆ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗುವುದೆಂದರಲ್ಲದೆ ನಿವೇಶನ ಹೊಂದಿದ ಲಿಂಗತ್ವ ಅಲ್ಪಸಂಖ್ಯಾತರಿಗೂ ವಸತಿ ಮಂಜೂರು ಮಾಡುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ವಿ.ರಂಗಸ್ವಾಮಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸನತ್ ಮಾತನಾಡಿ ಸಭೆಗೆ ಮಾಹಿತಿ ನೀಡಿದರು.

ಪಾವಗಡದ ಜಪಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಪಾಲಿಕೆ ಆಯುಕ್ತ ಕೆ.ಮಂಜುನಾಥಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಡಾ. ಪ್ರಶಾಂತ್, ಡಾ.ಕೇಶವ್ ರಾಜ್, ಶೀದೇವಿ ಹಾಗೂ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯಗಳ ಪ್ರತಿನಿಧಿಗಳು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News