ಕೊಳ್ಳುವವರು ಮತ್ತು ಮಾರಿಕೊಳ್ಳುವವರು

Update: 2018-05-19 04:26 GMT

ರಾಜ್ಯದೊಳಗೆ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ, ಸಣ್ಣ ತೆರೆಯೊಂದು ಸುಪ್ರೀಂಕೋರ್ಟ್ ಆದೇಶದ ಮೂಲಕ ಬಿದ್ದಿದೆ. ಬಹುಮತವಿರುವ ಮೈತ್ರಿ ಪಕ್ಷಗಳನ್ನು ಸರಕಾರ ರಚನೆಗೆ ಆಹ್ವಾನಿಸದೆ, ದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ರಾಜ್ಯಪಾಲರು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಜೊತೆಯಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂಕೋರ್ಟ್, ಶನಿವಾರ ಸಂಜೆಯೊಳಗೆ ಬಹುಮತ ಸಾಬೀತು ಪಡಿಸಲು ಆದೇಶ ನೀಡಿರುವುದು, ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವವರಿಗೆಲ್ಲ ಸಣ್ಣದೊಂದು ಸಮಾಧಾನವನ್ನು ತಂದಿದೆ. ಬಹುಶಃ ಸದ್ಯದ ಸ್ಥಿತಿಯಲ್ಲಿ ಇದಕ್ಕಿಂತ ಒಳ್ಳೆಯ ಆದೇಶವನ್ನು ನಾವು ಸುಪ್ರೀಂಕೋರ್ಟ್‌ನಿಂದ ನಿರೀಕ್ಷಿಸುವಂತೆಯೂ ಇರಲಿಲ್ಲ. ರಾಜ್ಯಪಾಲರ ತೀರ್ಮಾನವನ್ನು ಗೌರವಿಸಿದಂತೆಯೂ ಆಯಿತು, ಇದೇ ಸಂದರ್ಭದಲ್ಲಿ, ಕುದುರೆವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡುವ ಕಾಲಾವಧಿಯನ್ನು ಕಡಿತಗೊಳಿಸಿದಂತೆಯೂ ಆಯಿತು. ತನ್ನ ಬಳಿ ಬಹುಮತವಿದೆ ಎನ್ನುವ ಬಿಜೆಪಿ ಇದೀಗ 48 ಗಂಟೆಯೊಳಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲೇ ಬೇಕಾದಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಬಂದು ನಿಂತಿದೆ.

ಸುಪ್ರೀಂಕೋರ್ಟ್‌ನ ಆದೇಶ ಪರೋಕ್ಷವಾಗಿ ರಾಜ್ಯಪಾಲರಿಗೂ, ಸರಕಾರ ರಚನೆಗೆ ಆತುರತೋರಿದ ಬಿಜೆಪಿಗೂ ಮುಖಭಂಗವಾಗಿದೆ. ದೊಡ್ಡ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸಿರುವುದೇನೋ ಸರಿ, ಆದರೆ ಬಹುಮತ ಸಾಬೀತು ಮಾಡಲು ಬಿಜೆಪಿಗೆ ಎರಡು ವಾರಗಳ ಕಾಲಾವಕಾಶ ನೀಡಿರುವ ಅಗತ್ಯವೇನು? ಎರಡು ವಾರಗಳು ಕರ್ನಾಟಕ ರಾಜ್ಯ ರಾಜಕೀಯವನ್ನು ‘ಕುದುರೆಗಳ ಲಾಯ’ವಾಗಿಸಿ ಗಬ್ಬೆಬ್ಬಿಸುವುದರಲ್ಲಿ ಸಂಶಯವಿದ್ದಿರಲಿಲ್ಲ. 2008ರಲ್ಲಿ ನಡೆದುದಕ್ಕಿಂತಲೂ ಕೆಟ್ಟ ರಾಜಕೀಯ ಈ ಬಾರಿ ನಡೆಯುವ ಸಾಧ್ಯತೆಗಳಿದ್ದವು. ಕೊನೆಗೂ ಸುಪ್ರೀಂಕೋರ್ಟ್‌ನ ಆದೇಶ ಮಾರಾಟಕ್ಕೆ ಸಿದ್ಧವಿರುವ ಕುದುರೆಗಳಿಗೆ ಲಗಾಮು ಹಾಕಿದೆ. ನಿಜಕ್ಕೂ ಬಿಜೆಪಿಗೆ ಬಹುಮತವಿದೆ ಎಂದಾದರೆ, ಆ ಬಹುಮತವನ್ನು ಎರಡು ವಾರಗಳ ಕಾಲ ಕೂಡಿಟ್ಟು ಸಾಬೀತು ಪಡಿಸುವ ಅಗತ್ಯವೂ ಇಲ್ಲ. ಅಧಿಕಾರಕ್ಕೇರಿದ ಬೆನ್ನಿಗೇ, ಬಹುಮತವಿಲ್ಲದ ಸರಕಾರ ಹಲವು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಲವು ನೇಮಕಾತಿಗಳಿಗೂ ಕೈ ಹಾಕಿದೆ. ಸಾಧಾರಣವಾಗಿ ಬಹುಮತವಿರುವ ಪಕ್ಷ, ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಅದನ್ನು ಪ್ರಶ್ನಿಸುವಂತಿಲ್ಲ. ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಯ ಬಳಿ ಬಹುಮತವೇ ಇಲ್ಲದೆ ಇರುವಾಗ ಅವಸರವಸರವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು, ನೇಮಕಗಳನ್ನು ಮಾಡುವುದರ ಹಿಂದೆ ದುರುದ್ದೇಶಗಳಿವೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೀಡಿರುವ ಆದೇಶಗಳು ಈ ಕಾರಣಕ್ಕಾಗಿ ಪ್ರಶ್ನಾರ್ಹವಾಗಿದೆ. ಸುಪ್ರೀಂಕೋರ್ಟ್ ಕೂಡ ಇದನ್ನೇ ಹೇಳಿದೆ. ಬಹುಮತ ಸಾಬೀತು ಮಾಡುವವರೆಗೆ ಯಾವುದೇ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಅದು ಸೂಚನೆ ನೀಡಿದೆ. ಇದೂ ಯಡಿಯೂರಪ್ಪ ಅವರಿಗೆ ಒಂದು ಮುಖಭಂಗವೇ ಆಗಿದೆ. ಇವೆಲ್ಲವುಗಳ ನಡುವೆಯೂ, ಬಿಜೆಪಿ ಮುಖಂಡರು ‘‘ಬಹುಮತ ಸಾಬೀತು ಪಡಿಸುತ್ತೇವೆ’’ ಎಂದು ಹೇಳುತ್ತಲೇ ಇದ್ದಾರೆ.

 ಯಡಿಯೂರಪ್ಪ ಅಧಿಕಾರಕ್ಕೇರಿದ ಬೆನ್ನಿಗೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಶಾಸಕರಿರುವ ಹೊಟೇಲಿಗೆ ನೀಡಿರುವ ಭದ್ರತೆಯನ್ನು ಹಿಂದೆಗೆದರು. ನಾಡಿನ ಪ್ರಜೆಗಳು ಚುನಾಯಿಸಿರುವ ನೂರಕ್ಕೂ ಅಧಿಕ ಶಾಸಕರು ಒಂದೆಡೆ ಸೇರಿದ್ದಾರೆ ಎಂದ ಮೇಲೆ ಅವರಿಗೆ ವಿಶೇಷ ಭದ್ರತೆ ನೀಡುವುದು ಸರಕಾರದ ಕರ್ತವ್ಯವಾಗಿದೆ. ಅಷ್ಟೂ ಶಾಸಕರು ಭದ್ರತೆಯನ್ನು ಪಡೆಯುವುದಕ್ಕೆ ಅರ್ಹರು ಕೂಡ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಇರುವ ಭದ್ರತೆಯನ್ನು ಹಿಂದೆಗೆಯುವ ಉದ್ದೇಶವಾದರೂ ಏನು? ಒಂದು ವೇಳೆ ಅಷ್ಟು ಶಾಸಕರಿಗೆ ಯಾವುದೇ ಜೀವಹಾನಿಯಾದರೆ ಅದರ ಹೊಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊತ್ತುಕೊಳ್ಳಲು ಸಿದ್ಧರಿದ್ದಾರೆಯೇ? ಇದಾದ ಬಳಿಕ ರೆಸಾರ್ಟ್ ಕಡೆಗೆ ಪ್ರಯಾಣ ಹೊರಟ ಶಾಸಕರನ್ನು ತಡೆಯುವ ಪ್ರಯತ್ನವೂ ನಡೆಯಿತು. ನಿಜಕ್ಕೂ ಜೆಡಿಎಸ್-ಕಾಂಗ್ರೆಸ್‌ನೊಳಗೆ ಬಿಜೆಪಿಯನ್ನು ಬೆಂಬಲಿಸುವ ಶಾಸಕರಿದ್ದಾರೆ ಎಂದಾದರೆ, ಅಧಿಕಾರ ದುರ್ಬಳಕೆಗೊಳಿಸಿ ಅವರ ಮೇಲೆ ಒತ್ತಡ ಹೇರುವ ಅಗತ್ಯವಿದೆಯೇ? ಶಾಸಕರ ಮೇಲೆ ಕಾಂಗ್ರೆಸ್ ಪಕ್ಷ ಗೂಂಡಾಗಿರಿ ನಡೆಸುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಶಾಸಕರ ಪರವಾಗಿ ಮಾತನಾಡಲು ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದ್ದು ಯಾರು? ಒಂದು ವೇಳೆ ಬಿಜೆಪಿ ಶಾಸಕರಿಗೇನಾದರೂ ಹೊರಗಿನಿಂದ ಒತ್ತಡಗಳು ಬಂದಿದ್ದರೆ ಖಂಡಿತವಾಗಿಯೂ ಯಡಿಯೂರಪ್ಪ ಆರೋಪ ಮಾಡುವುದರಲ್ಲಿ ಅರ್ಥವಿದೆ ಅಥವಾ ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಒಬ್ಬರು ಈ ಕುರಿತಂತೆ ದೂರನ್ನು ಅಥವಾ ಆರೋಪವನ್ನು ಮಾಡಿದ್ದರೂ ಯಡಿಯೂರಪ್ಪರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಿತ್ತು. ಜೆಡಿಎಸ್, ಕಾಂಗ್ರೆಸ್‌ನ ನಾಯಕರು ತಮ್ಮ ಶಾಸಕರನ್ನು ಮಾರಾಟವಾಗದಂತೆ ನೋಡಿಕೊಳ್ಳುವುದು ಗೂಂಡಾಗಿರಿಯಾದರೆ, ಅವರನ್ನು ಅಪಹರಿಸಲು, ಕೊಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ನಾಯಕರನ್ನು ಏನೆಂದು ಕರೆಯಬೇಕು?

 ಇದೇ ಸಂದರ್ಭದಲ್ಲಿ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಶತಾಯಗತಾಯ ಪರದಾಡುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರುಗಳೂ ಒಂದನ್ನು ನೆನಪಿಟ್ಟುಕೊಳ್ಳಬೇಕು. ಬಿಜೆಪಿಯವರು ಕುದುರೆ ವ್ಯಾಪಾರಕ್ಕಿಳಿದಿರುವುದು ಅನೈತಿಕ ರಾಜಕಾರಣ ನಿಜ. ಹಾಗೆಯೇ, ತಮ್ಮನ್ನು ತಾವು ಕುದುರೆಗಳಾಗಿ ಮಾರ್ಪಡಿಸಿಕೊಂಡು ಮಾರಾಟಕ್ಕಿಡುವುದೂ ಪ್ರಜಾಸತ್ತೆಗೆ ಬಗೆಯುವ ದ್ರೋಹ. ಮಾರಿಕೊಳ್ಳುವವರಿದ್ದಾಗಷ್ಟೇ ಕೊಳ್ಳುವವರು ಹುಟ್ಟಿಕೊಳ್ಳುತ್ತಾರೆ. ಈ ಮಾರಿಕೊಳ್ಳುವ ರಾಜಕಾರಣಕ್ಕಿಂತ ವೇಶ್ಯಾವಾಟಿಕೆಯೇ ವಾಸಿ. ಅವರು ತಮ್ಮ ಹೊಟ್ಟೆಪಾಡಿಗಾಗಿ ದೇಹವನ್ನು ಮಾರುತ್ತಾರೆ. ಅಲ್ಲಿ ಒಂದಿಷ್ಟಾದರೂ ನಿಯತ್ತಿದೆ. ವೇಶ್ಯೆಯರು ಹಣತೆತ್ತ ವಿಟರಿಗೆ ಅವರ ತೀಟೆ ತೀರುವವರೆಗಾದರೂ ಪ್ರಾಮಾಣಿಕರಾಗಿರುತ್ತಾರೆ. ಆದರೆ ಹಣಕ್ಕಾಗಿ ಮಾರಿಕೊಳ್ಳುವ ಜನಪ್ರತಿನಿಧಿಗಳು, ತನಗೆ ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಒಂದು ವಾರ ಕಾಲವೂ ನಿಯತ್ತಾಗಿರಲು ಸಿದ್ಧರಿಲ್ಲ ಎಂದರೆ ಇವರು ವೇಶ್ಯೆಯರಿಗಿಂತ ಕೀಳು ಎಂದಾಯಿತಲ್ಲವೇ? ಒಂದು ವೇಳೆ ಮುಂದಿನ ದಿನಗಳಲ್ಲಿ ಕೊಳ್ಳುವವರು ಮತ್ತು ಮಾರಿಕೊಳ್ಳುವವರು ಯಶಸ್ವಿಯಾದರೆ ಇಡೀ ವಿಧಾನಸೌಧದ ಘನತೆ, ಬೀದಿಗೆ ಬೀಳುತ್ತದೆ. ಇದರಲ್ಲಿ ಸಂಶಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News