ಕರ್ನಾಟಕ ವಿಶ್ವಾಸ ಮತ : ಬಿ ಎಸ್ ವೈ ಭವಿಷ್ಯ ನಿರ್ಧರಿಸಲಿದ್ದಾರೆ ಕಾಂಗ್ರೆಸ್-ಜೆಡಿಎಸ್ ನ ಈ 10 ಶಾಸಕರು

Update: 2018-05-19 07:14 GMT

ಬೆಂಗಳೂರು, ಮೇ 19: ಯಡಿಯೂರಪ್ಪ ಸರಕಾರದ ಭವಿಷ್ಯ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತದ ಮೂಲಕ ನಿರ್ಣಯವಾಗಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಪಾಳಯಗಳೆರಡೂ ತಮಗೆ ಬಹುಮತ ದೊರೆಯುವುದೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿವೆ. ಮೂರೂ ಪಕ್ಷಗಳು ತಮ್ಮ ಶಾಸಕರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಸರ್ವ ರೀತಿಯಲ್ಲಿಯೂ ಪ್ರಯತ್ನಿಸುತ್ತಿವೆ.

ಬಿಜೆಪಿ ಕುದುರೆ ವ್ಯಾಪಾರಕ್ಕೆ ಕೈ ಹಾಕಿದೆ ಎಂಬ ಆರೋಪದ ನಡುವೆಯೂ ಜೆಡಿಎಸ್ ಕೂಡ ಬಿಜೆಪಿ ಪಾಳಯದ ಒಕ್ಕಲಿಗ ಶಾಸಕರ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ಬೆಳವಣಿಗೆಗಳ ನಡುವೆ ಸುಮಾರು ಹತ್ತು ಮಂದಿ ಶಾಸಕರು ಇನ್ನೊಂದು ಪಕ್ಷದತ್ತ ವಾಲುವ ಸಾಧ್ಯತೆಯಿದೆಯೆನ್ನಲಾಗಿದ್ದು ಎಲ್ಲರ ಚಿತ್ತ ಇವರ ಮೇಲಿದೆ.

ಆನಂದ್ ಸಿಂಗ್ : ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಆನಂದ್ ಸಿಂಗ್ ಕಾಂಗ್ರೆಸ್ ಪಾಳಯವು ಈಗಲ್ ಟನ್ ರಿಸಾರ್ಟ್ ನಲ್ಲಿ ಬೀಡು ಬಿಟ್ಟಿದ್ದದಾಗಲೂ ಅಲ್ಲಿರಲಿಲ್ಲ. ವಿಧಾನಸೌಧದೆದುರು ಪ್ರತಿಭಟನೆ ನಡೆದಾಗಲೂ ಅವರು ಗೈರಾಗಿದ್ದರೂ ಕಾಂಗ್ರೆಸ್ ಮಾತ್ರ ಅವರು ತಮ್ಮ ಜತೆಗೇ ಇದ್ದಾರೆ ಎಂದು ವಾದಿಸಿತ್ತು. ಎರಡು ತಿಂಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಪಕ್ಷದ ಟಿಕೆಟ್ ನಿಂದ ಅವರು ಚುನಾವಣೆ ಸ್ಪರ್ಧಿಸಿ ಗೆದ್ದಿದ್ದಾರೆ.

2. ಬಿ ನಾಗೇಂದ್ರ : ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾಗಿರುವ ಇವರು ರೆಡ್ಡಿ ಸೋದರರಿಗೆ ಆಪ್ತರು ಎಂದು ಹೇಳಲಾಗಿದ್ದು ಅಕ್ರಮ ಗಣಿಗಾರಿಕೆ ಹಗರಣದಲ್ಲೂ ಇವರ ಹೆಸರು ಕೇಳಿ ಬಂದಿತ್ತು. 2008ರಲ್ಲಿ ಕೂಡ್ಲಿಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಅವರು 2013ರಲ್ಲಿ ಪಕ್ಷೇತರರಾಗಿ ಜಯ ಸಾಧಿಸಿದ್ದರು. ಈ ಬಾರಿ ಅವರು ಇನ್ನೊಬ್ಬ ರೆಡ್ಡಿ ಸಮೀಪವರ್ತಿ ಸಣ್ಣ ಫಕೀರಪ್ಪ ವಿರುದ್ಧ 2,679 ಮತಗಳ ಅಂತರದಿಂದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಜಯ ಸಾಧಿಸಿದ್ದರು. ಆನಂದ್ ಸಿಂಗ್ ಜತೆ ಅವರು ಕೂಡ ಎರಡು ತಿಂಗಳ ಹಿಂದೆ ಕಾಂಗ್ರೆಸ್ ಸೇರಿದ್ದರು.

3. ಪ್ರತಾಪ್ ಗೌಡ ಪಾಟೀಲ್, ಮಸ್ಕಿ : 2008ರಲ್ಲಿ ಬಿಜೆಪಿ ಜತೆಗಿದ್ದ ಪಾಟೀಲ್ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಆನಂದ್ ಸಿಂಗ್ ಅವರಂತೆಯೇ ಇವರು ಕೂಡ ಪಕ್ಷದ ಸಂಪರ್ಕಕ್ಕೆ ಸಿಕ್ಕಿಲ್ಲ. ಕೇವಲ 213 ಮತಗಳ ಅಂತರದಿಂದ ಅವರು ಈ ಬಾರಿ ಗೆದ್ದಿದ್ದರು. ಅವರು ಕೂಡ ಬಿಜೆಪಿ ನಾಯಕರೊಂದಿಗೆ ಸ್ನೇಹ ಹೊಂದಿದ್ದಾರೆ.

4. ರಾಜಶೇಖರ ಪಾಟೀಲ್ : ಹುಮ್ನಾಬಾದ್ ಕ್ಷೇತ್ರದಿಂದ ಆಯ್ಕೆಯಾಗಿರುವ ಇವರು ಮೂಲತಃ ಉದ್ಯಮಿಯಾಗಿದ್ದು ಕಾಂಗ್ರೆಸ್ ಇವರ ಮೇಲೆ ತೀವ್ರ ನಿಗಾ ಇಟ್ಟಿದೆ. ಇವರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರೂ ಆರೆಸ್ಸೆಸ್ ಹಾಗೂ ಬಿಜೆಪಿ ಇವರ ಮೇಲೆ ಕಣ್ಣಿಟ್ಟಿದೆ. ಆರೋಗ್ಯ ಕಾರಣಗಳನ್ನು ನೀಡಿ ಈಗಲ್ ಟನ್ ರಿಸಾರ್ಟ್ ನಿಂದ ಅವರು ಮೊದಲು ಹೊರ ನಡೆದಿದ್ದರು.

5. ಶಿವಾನಂದ ಪಾಟೀಲ್ : ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿಜೆಪಿ ಜತೆ ಸಂಪರ್ಕ ಹೊಂದಿದ್ದಾರೆನ್ನಲಾಗಿದ್ದು, ಬಿಜೆಪಿ ಮತ್ತದರ ನಾಯಕರನ್ನು ಈ ಹಿಂದೆ ಹಲವು ಬಾರಿ ಹೊಗಳಿದ್ದಾರೆ. ಮೋದಿಯ ಅಭಿಮಾನಿಯೆಂದೂ ಇವರು ಗುರುತಿಸಲ್ಪಟ್ಟಿದ್ದಾರೆ.

6. ವೆಂಕಟರಾವ್ ನಾಡಗೌಡ, ಸಿಂಧನೂರ್ : ಜೆಡಿಎಸ್ ಶಾಸಕರಾಗಿರುವ ಇವರು ಪಕ್ಷದ ಶಾಸಕಾಂಗ ಸಭೆಗೆ ಗೈರಾಗಿದ್ದರು. ಎಚ್ ಡಿ ಕುಮಾರಸ್ವಾಮಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಪಕ್ಷದಲ್ಲಿಯೇ ಇರುವಂತೆ ಕೇಳಿಕೊಂಡಿದ್ದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಇವರು ಸಂತುಷ್ಟರಾಗಿಲ್ಲವೆಂದು ತಿಳಿದು ಬಂದಿದೆ.

7. ಶಿವರಾಮ್ ಹೆಬ್ಬಾರ್ : ಯಲ್ಲಾಪುರ ಶಾಸಕರಾಗಿರುವ ಇವರು ಹಿರಿಯ ಬಿಜೆಪಿ ನಾಯಕರುಗಳಾದ ಯಡ್ಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ಸಮೀಪವರ್ತಿ ಹಾಗೂ  ಆದಿತ್ಯನಾಥ್ ಅವರ ಅಭಿಮಾನಿ ಎಂದು ಹೇಳಲಾಗಿದೆ.

8. ಎಂ ವೈ ಪಾಟೀಲ್ : ಅಫ್ಝಲಪುರ್ ಕ್ಷೇತ್ರದಿಂದ ಆಯ್ಕೆಯಾಗಿರುವ ಪಾಟೀಲ್ ಬಿಜೆಪಿ ಟಿಕೆಟ್ ನಿರಾಕರಿಸಲ್ಪಟ್ಟಿದ್ದಾಗ ಕಾಂಗ್ರೆಸ್ ಸೇರಿದವರು. ಬಿಜೆಪಿ ಇವರಿಗೆ ಗಾಳ ಹಾಕಿರಬಹುದೆಂದು ಹೇಳಲಾಗಿದೆ.

9. ವೆಂಕಟರಮಣಪ್ಪ : ಪಾವಗಢದ ಶಾಸಕರಾಗಿರುವ ಇವರು ಕೂಡ ಯಡ್ಡಿಯೂರಪ್ಪ ಸಹವರ್ತಿ ಎನ್ನಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರೂ ಅವರು ಯಾವ ಕಡೆ ವಾಲಲಿದ್ದಾರೆಂಬುದು ಅನಿಶ್ಚಿತ.

10. ಜೆ ಎನ್ ಗಣೇಶ್ ಕಂಪ್ಲಿ : ಜನಾರ್ದನ ರೆಡ್ಡಿ ಪಾಳಯದ ವ್ಯಕ್ತಿ ಎಂದು ಹೇಳಲಾಗಿರುವ ಇವರು ಕೂಡ ಆನಂದ್ ಸಿಂಗ್ ಜತೆ ಸಂಪರ್ಕದಲ್ಲಿದ್ದಾರೆಂದು ಹೇಳಲಾಗಿದೆ. ಆದರೂ ಈತ ವಿಶ್ವಾಸಮತ ಸಂದರ್ಭ ಕಾಂಗ್ರೆಸ್ ಪಕ್ಷದ ಪರ ಮತ ನೀಡಲಿದ್ದಾರೆಂಬ ನಿರೀಕ್ಷೆ ಕಾಂಗ್ರೆಸ್ ಪಕ್ಷದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News