ನಿಂತುಕೊಂಡು ನೀರು ಕುಡಿದರೆ ಏನಾಗುತ್ತದೆ.....?

Update: 2018-05-19 13:04 GMT

ಈ ವಿಶ್ವದಲ್ಲಿ ಮಾನವನ ಉಗಮವಾದಾಗಿನಿಂದಲೂ ನೀರು ನಮ್ಮ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಹೆಚ್ಚುಕಡಿಮೆ ಯಾವದೇ ಪರಿಸ್ಥಿತಿಯಲ್ಲೂ ನೀರು ನಮ್ಮ ಶರೀರಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಹೀಗಾಗಿ ಅದನ್ನು ಜೀವಜಲವೆಂದೇ ಕರೆಯಲಾಗುತ್ತದೆ.

ನಮ್ಮ ಶರೀರದ ಹೆಚ್ಚುಕಡಿಮೆ ಶೇ.75ರಷ್ಟು ಭಾಗವು ನೀರಿನಿಂದಲೇ ಕೂಡಿದೆ. ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಲು ನಾವು ಪ್ರತಿನಿತ್ಯ ಕನಿಷ್ಠ ಎಂಟು ಗ್ಲಾಸ್ ನೀರು ಕುಡಿಯಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ನಮ್ಮ ಶರೀರದ ಸಹಜ ಕಾರ್ಯ ನಿರ್ವಹಣೆಗೆ ನೀರು ಅಗತ್ಯವಾಗಿದೆ ಮತ್ತು ಅದು ಅಗಣಿತ ಲಾಭಗಳನ್ನು ನೀಡುತ್ತದೆ.

ನೀರು ಎಷ್ಟಾದರೂ ನೀರೇ, ಅದರಲ್ಲಿ ಕುಳಿತುಕೊಂಡು ಅಥವಾ ನಿಂತುಕೊಂಡು ಕುಡಿಯುವುದು ಯಾವ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಹಲವರು ಪ್ರಶ್ನಿಸಬಹುದು. ಆದರೆ ನೀವು ನೀರನ್ನು ಕುಡಿಯುವ ಭಂಗಿಯು ಹಲವಾರು ವ್ಯತ್ಯಾಸಗಳನ್ನುಂಟು ಮಾಡುತ್ತದೆ ಎನ್ನುವುದು ಅಪ್ಪಟ ಸತ್ಯವಾಗಿದೆ. ನಾವು ನಮ್ಮ ಹೆತ್ತವರಿಂದ,ಅಜ್ಜ-ಅಜ್ಜಿಯಿಂದ ನಿಂತುಕೊಂಡು ನೀರು ಕುಡಿಯಬಾರದು ಎಂಬ ಮಾತನ್ನು ಸಾವಿರಸಲ ಕೇಳಿಕೊಂಡೇ ದೊಡ್ಡವರಾಗಿದ್ದೇವೆ. ಆದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಿದ್ದು ಕಡಿಮೆ. ಅದು ಎಷ್ಟಾದರೂ ನೀರು,ಯಾವ ಭಂಗಿಯಲ್ಲಿ ಕುಡಿದರೇನು ಎಂದು ಪರಿಗಣಿಸುತ್ತಲೇ ಬಂದಿದ್ದೇವೆ. ಆದರೆ ವಿಜ್ಞಾನ ನಮ್ಮ ಹೆತ್ತವರು,ಅಜ್ಜ-ಅಜ್ಜಿಯ ಪರವಾಗಿದೆ.

 ನಾವು ನಿಂತುಕೊಂಡು ನೀರು ಕುಡಿದಾಗ ಅದು ನೇರವಾಗಿ ಅನ್ನನಾಳದ ಕೆಳಭಾಗವನ್ನು ತಲುಪುತ್ತದೆ ಮತ್ತು ಅನ್ನನಾಳವನ್ನು ಹೊಟ್ಟೆಯೊಂದಿಗೆ ಸಂಪರ್ಕಿಸುವ ಸಂಕೋಚಕ ಸ್ನಾಯು ಸ್ಫಿಂಕ್ಟರ್‌ಗೆ ಹಾನಿಯನ್ನುಂಟು ಮಾಡುತ್ತದೆ. ಈ ಸ್ಫಿಂಕ್ಟರ್ ಆಕುಂಚನಗೊಳ್ಳುವ ಹೊತ್ತಿಗೆ ಅದಾಗಲೇ ಹಾನಿಯಾಗಿರುತ್ತದೆ. ಇದು ಸಾಮಾನ್ಯವಾಗಿ ಆ್ಯಸಿಡಿಟಿ ಎಂದು ಕರೆಯುವ ಗ್ಯಾಸ್ಟ್ರೋ ಎಸೋಫೇಜಿಯಲ್ ರಿಫ್ಲಕ್ಸ್ ರೋಗ(ಜಿಇಆರ್‌ಡಿ)ಕ್ಕೆ ಕಾರಣವಾಗುತ್ತದೆ. ಆಯುರ್ವೇದದಲ್ಲಿ ಇದನ್ನು ಆಮ್ಲ ಪಿತ್ತ ಎಂದು ಹೇಳಲಾಗುತ್ತದೆ. ನಿಂತುಕೊಂಡು ನೀರು ಕುಡಿಯುವುದು ಇತರ ಕೆಲವು ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಅಜೀರ್ಣ:

ನಾವು ಕುಳಿತುಕೊಂಡು ನೀರು ಕುಡಿಯುವಾಗ ನಮ್ಮ ಮಾಂಸಖಂಡಗಳು ಮತ್ತು ನರಮಂಡಲ ನಿಂತುಕೊಂಡಾಗ ಇರುವುದಕ್ಕಿಂತ ಹೆಚ್ಚಿನ ವಿಶ್ರಾಂತ ಸ್ಥಿತಿಯಲ್ಲಿರುತ್ತವೆ. ಇದರಿಂದಾಗಿ ನಾವು ಸೇವಿಸಿರುವ ಆಹಾರದೊಂದಿಗೆ ನೀರನ್ನು ಜೀರ್ಣಿಸುವಂತೆ ನಮ್ಮ ಶರೀರಕ್ಕೆ ನರಮಂಡಲವು ಚುರುಕಾಗಿ ಮಾಹಿತಿಯನ್ನು ರವಾನಿಸಲು ಸಾಧ್ಯವಾಗುತ್ತದೆ. ಆದರೆ ನಿಂತುಕೊಂಡು ನೀರು ಸೇವಿಸಿದಾಗ ಅದು ಅಜೀರ್ಣಕ್ಕೆ ಕಾರಣವಾಗುತ್ತದೆ.

ಮೂತ್ರಪಿಂಡಗಳಿಗೆ ಹಾನಿ:

ನಾವು ನಿಂತುಕೊಂಡು ನೀರನ್ನು ಸೇವಿಸಿದಾಗ ಅದನ್ನು ಮೂತ್ರಪಿಂಡಗಳು ಸರಿಯಾಗಿ ಸೋಸುವುದಿಲ್ಲ. ಹೀಗಾದಾಗ ತ್ಯಾಜ್ಯಗಳು ಮೂತ್ರಕೋಶಕ್ಕೆ ಸಾಗಿ ರಕ್ತದೊಂದಿಗೆ ಸೇರಿಕೊಳ್ಳುತ್ತವೆ ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟಾಗುತ್ತದೆ. ಇದು ಮುಂದುವರಿದರೆ ಮೂತ್ರಪಿಂಡಗಳು ವಿಫಲಗೊಂಡು ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ.

ಸಂಧಿವಾತ:

ತಪ್ಪು ಭಂಗಿಯಲ್ಲಿ ನೀರು ಸೇವಿಸುವುದರಿಂದ ಆಗುವ ಹಾನಿಗಳಲ್ಲಿ ಸಂಧಿವಾತವು ಒಂದಾಗಿದೆ. ನಾವು ನಿಂತುಕೊಂಡು ನೀರು ಕುಡಿದಾಗ ಶರೀರದಲ್ಲಿಯ ಇತರ ದ್ರವಗಳ ಸಮತೋಲನಕ್ಕೆ ವ್ಯತ್ಯಯವುಂಟಾಗುತ್ತದೆ ಮತ್ತು ಕೀಲುಗಳಿಗೆ ಅಗತ್ಯವಾದ ದ್ರವಗಳ ಕೊರತೆಯಾಗುತ್ತದೆ. ಇದರಿಂದ ಸಂದುಗಳಲ್ಲಿ ಅತಿಯಾದ ದ್ರವ ಸಂಗ್ರಹಗೊಂಡು ಸಂಧಿವಾತವನ್ನುಂಟು ಮಾಡುತ್ತದೆ. ಇದು ತಕ್ಷಣವೇ ಸಂಭವಿಸಬಹುದು ಅಥವಾ ಸಾಮಾನ್ಯವಾಗಿ ದೀರ್ಘಕಾಲದ ಬಳಿಕ ಕಾಣಿಸಿಕೊಳ್ಳಬಹುದು.

ಆಮ್ಲಗಳು ದುರ್ಬಲಗೊಳ್ಳುತ್ತವೆ:

ನೀರು ಆಮ್ಲೀಯ ಅಥವಾ ಕ್ಷಾರೀಯ ಸ್ವರೂಪವನ್ನು ಹೊಂದಿಲ್ಲ,ಆದರೆ ಅದು ಶರೀರದಲ್ಲಿಯ ಆಮ್ಲೀಯ ಮಟ್ಟಗಳನ್ನು ದುರ್ಬಲಗೊಳಿಸಲು ನೆರವಾಗುತ್ತದೆ. ಕುಳಿತುಕೊಂಡಾಗ ನಾವು ನೀರನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಶರೀರದಲ್ಲಿ ಆಮ್ಲೀಯತೆ ಮಟ್ಟವು ನೀರಿನ ಸರಿಯಾದ ಪ್ರಮಾಣದೊಂದಿಗೆ ಮಿಶ್ರಗೊಳ್ಳುವುದರಿಂದ ಈ ಭಂಗಿಯು ಆಮ್ಲೀಯತೆ ಮಟ್ಟವನ್ನು ಸೂಕ್ತ ರೀತಿಯಲ್ಲಿ ದುರ್ಬಲಗೊಳಿಸಲು ನೆರವಾಗುತ್ತದೆ. ನಿಂತುಕೊಂಡು ನೀರು ಸೇವಿಸುವುದು ನಾವು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಹಾನಿಯನ್ನುಂಟು ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News