ಚಿಕ್ಕಮಗಳೂರು: ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ವಿಜಯೋತ್ಸವ

Update: 2018-05-19 14:03 GMT

ಚಿಕ್ಕಮಗಳೂರು,ಮೇ.19: ಕಳೆದ ಮೂರು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶನಿವಾರ ಸದನದಲ್ಲಿ ಬಹುಮತ ಸಾಬೀತುಪಡಿಸಲು ವಿಫಲರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಆಜಾದ್ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್ ವಿಜಯ್‍ಕುಮಾರ್ ಮಾತನಾಡಿ, ವಾಮಮಾರ್ಗದಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಷಡ್ಯಂತರ ನಡೆಸಿದ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂದ ಜಯ ಎಂದರು.
ವಾಮಮಾರ್ಗ ಅನುಸರಿಸಿ ಅಧಿಕಾರ ಹಿಡಿಯಲು ಹವಣಿಸುವವರಿಗೆ ಜನತೆ ಸೂಕ್ತ ಎಚ್ಚರಿಕೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಮಹಮದ್ ಮಾತನಾಡಿ, ಬಿಜೆಪಿ ಎಜೆಂಟರಂತೆ ವರ್ತಿಸಿದ ರಾಜ್ಯಪಾಲರು ಬಿಜೆಪಿಗೆ ಬಹುಮತವಿಲ್ಲದಿದ್ದರು ಸರ್ಕಾರ ರಚನೆಗೆ ಅವಕಾಶ ನೀಡಿರುವುದು ಮತ್ತು ಬಹುಮತ ಸಾಬೀತು ಪಡಿಸಲು ಹದಿನೈದು ದಿನಗಳ ಅವಕಾಶ ನೀಡುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಲು ಯತ್ನಿಸಿದ್ದರು. ಆದರೆ ನ್ಯಾಯಾಲಯ ಅವರ ಯತ್ನವನ್ನು ವಿಫಲಗೊಳಿಸಿದೆ ಎಂದರು.

ಬಹುಮತ ಸಾಬೀತಿಗೆ ಅಗತ್ಯವರಿರುವ ಶಾಸಕರ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿಯವರು ಶಾಸಕರಿಗೆ ನೂರು ಕೋಟಿ, ನೂರೈವತ್ತು ಕೋಟಿ ಹಣದ ಆಮಿಷ ಒಡ್ಡಿ ಅದರೊಂದಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಅವರ ಆಮಿಷವನ್ನು ತಿರಸ್ಕರಿಸುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಸೋಮವಾರ ನಡೆಯಲಿರುವ ಸದನ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸರ್ಕಾರ ರಚನೆಯಾಗುವುದು ಶತಸಿದ್ದ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಪ್ರಚಾರ ಸಮಿತಿಯ ಹಿರೇಮಗಳೂರು ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀಧರ್ ಉರಾಳ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News