ಮೋದಿ-ಅಮಿತ್‍ ಶಾ ರ ಹಿಟ್ಲರ್ ಮನಸ್ಥಿತಿ, ಸರ್ವಾಧಿಕಾರಿ ಧೋರಣೆಗೆ ಸೋಲಾಗಿದೆ: ಮಂಜುನಾಥ ಭಂಡಾರಿ

Update: 2018-05-19 16:32 GMT

ಶಿವಮೊಗ್ಗ, ಮೇ 19: ರಾಜ್ಯ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವಿಲ್ಲದ ಹೊರತಾಗಿಯೂ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸಿ ಮುಖಭಂಗಕ್ಕೀಡಾಗಿರುವ ಬಿಜೆಪಿಯ ಕುತಂತ್ರ ರಾಜಕೀಯ ಅಜೆಂಡಾ ಏನೆಂಬುವುದು ರಾಜ್ಯದ ಜನತೆಗೆ ಸ್ಪಷ್ಟವಾಗಿ ಗೊತ್ತಾಗುವಂತಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರು ಹೇಳಿದ್ದಾರೆ. 

ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಶತಾಯಗತಾಯ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ನಾನಾ ಷಡ್ಯಂತ್ರ ನಡೆಸಿದರು. ಅಧಿಕಾರ ದುರ್ಬಳಕೆ ಮಾಡಿಕೊಂಡರು. ರಾಜ್ಯಪಾಲರ ಕಚೇರಿಯ ಮೇಲೆ ಪ್ರಭಾವ ಬೀರಿದರು. ಮತ್ತೊಂದೆಡೆ ರಾಜ್ಯ ಬಿಜೆಪಿ ನಾಯಕರು ಹಣ, ಅಧಿಕಾರದ ಆಮಿಷವೊಡ್ಡಿ ಶಾಸಕರ ಖರೀದಿಗೆ ಯತ್ನಿಸಿದರು. ನಾನಾ ಹೀನ ರಾಜಕೀಯ ತಂತ್ರಗಾರಿಕೆಗಳನ್ನೆಲ್ಲ ನಡೆಸಿದರು. ಆದರೆ ಇವರ ಯಾವುದೇ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿಸಲು ಇವರಿಗೆ ಸಾಧ್ಯವಿಲ್ಲ. ಅಧಿಕಾರ ಉಳಿಸಿಕೊಳ್ಳುವ ಕುತಂತ್ರ ಫಲ ನೀಡಿಲ್ಲ. ಮೋದಿ ಹಾಗೂ ಅಮಿತ್ ಶಾರವರ ಹಿಟ್ಲರ್ ಮನಸ್ಥಿತಿ ಹಾಗೂ ಸರ್ವಾಧಿಕಾರಿ ಧೋರಣೆಗೆ ಸೋಲಾಗಿದೆ ಎಂದು ತಿಳಿಸಿದರು. 

ರಾಜ್ಯದ ರಾಜ್ಯಪಾಲ ವಜುಭಾಯಿವಾಲಾರವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಸ್ಪಷ್ಟ ಬಹುಮತವಿಲ್ಲದ ಹೊರತಾಗಿಯೂ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡಿದ ಕ್ರಮ ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೋಮುವಾದಿ ಮನಸ್ಥಿತಿಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಉತ್ತಮ ಆಡಳಿತ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೇಳಹೆಸರಿಲ್ಲದಂತೆ ಧೂಳೀಪಟವಾಗಲಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News