ಇಸ್ಲಾಂ ಧರ್ಮದ ಮೂಲ ತತ್ವ ಶಾಂತಿ ಮತ್ತು ಸಹೋದರತೆ: ನ್ಯಾ.ಜೀನರಾಳ್ಕರ್

Update: 2018-05-19 16:47 GMT

ತುಮಕೂರು,ಮೇ.19: ಇಸ್ಲಾಂ ಧರ್ಮದ ಮೂಲ ತತ್ವ ಶಾಂತಿ ಮತ್ತು ಸೋದರತೆ. ರಂಜಾನ್ ತಿಂಗಳ ಉಪವಾಸ ಅದನ್ನು ಮತ್ತಷ್ಟು ಪರಿಪಕ್ವಗೊಳಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಾಬಾ ಸಾಹೇಬ್ ಜೀನರಾಳ್ಕರ್ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ನಗರದ ಧ್ಹಾನ ಪ್ಯಾಲೇಸ್‍ನಲ್ಲಿ ವೆಲ್‍ಫೇರ್ ಪಾರ್ಟಿ ಅಫ್ ಇಂಡಿಯಾ ವತಿಯಿಂದ ಪ್ರಗತಿಪರರು, ದಲಿತ ಮುಖಂಡರುಗಳಿಗಾಗಿ ಆಯೋಜಿಸಿದ್ದ ಇಫ್ತಾರ್ ಕೂಟದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾರತದ ಸಂವಿಧಾನ ಮತ್ತು ಅಲ್ಪಸಂಖ್ಯಾತರ ರಕ್ಷಣೆ ಕುರಿತು ಮಾತನಾಡುತ್ತಿದ್ದ ಅವರು, ಇಸ್ಲಾಂ ನಲ್ಲಿ ಜಾತಿ ಶ್ರೇಣಿಕರಣ, ವರ್ಣ ಭೇಧಕ್ಕೆ ಅವಕಾಶವೇ ಇಲ್ಲ. ಎಲ್ಲರೂ ಸಮಾನರು ಎಂದರು.

ಇಸ್ಲಾಂ ಶಾಂತಿ ಮತ್ತು ಸೋದರತೆಯನ್ನು ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿಯೇ ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರಮುಖ ಧರ್ಮವಾಗಿ ಗುರುತಿಸಿಕೊಂಡಿದೆ ಎಂದ ಅವರು, ನಮ್ಮ ಸಂವಿಧಾನದಲ್ಲಿ 42 ತಿದ್ದುಪಡಿಯ ಮೂಲಕ ದೇಶದ ಸಂವಿಧಾನಕ್ಕೆ ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಅಂಶಗಳನ್ನು ಸೇರಿಸಲಾಗಿದೆ ಎಂದರು.

ಭಾರತದ ಸಂವಿಧಾನ ದೇಶದ ಪ್ರಜೆಗಳಿಗೆ ಕಲಂ 14 ರಿಂದ 30ರವರಗೆ ವಿವಿಧ ರೀತಿಯ ತಾರತಮ್ಯ ರಹಿತ ಜೀವನ ನಡಸಲು ಬೇಕಾದ ಅಂಶಗಳನ್ನು ನೀಡಿದೆ. ಸಮಾನತೆ, ಲಿಂಗಭೇಧ ರಹಿತ ಗೌರವಯುತ ಜೀವನ ಸೇರಿದಂತೆ ಹಲವಾರು ಹಕ್ಕುಗಳನ್ನು ನೀಡಿದೆ. ಶಿಕ್ಷಣ ಮತ್ತು ಸಂಸ್ಕೃತಿಯ ಹಕ್ಕು ಅಲ್ಲದೆ ಕಲಂ 131-132ರಲ್ಲಿ ಶೋಷಿತ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮೇಲೆ ಬರಲು ಅಗತ್ಯವಿರುವ ಹಕ್ಕುಗಳನ್ನು ನೀಡಿದೆ. ಇದರ ಅನ್ವಯ ಸಮಿತಿಗಳನ್ನು ರಚಿಸಿ, ಅವರ ಸಾಮಾಜಿಕ ಸ್ಥಿತಿಗತಿಯ ಮೇಲೆ ಅವರಿಗೆ ಮೀಸಲಾತಿ ನೀಡುವುದು ರೂಢಿಯಲ್ಲಿದೆ. ಮಂಡಲ ಕಮಿಷನ್, ನ್ಯಾ.ರಾಜೇಂದ್ರ ಸಾಚಾರ್ ಕಮಿಟಿಗಳು ಈ ಕಲಂಗಳ ಅಡಿಯಲ್ಲಿಯೇ ರಚಿತವಾಗಿವೆ ಎಂದು ಬಾಬಾ ಸಾಹೇಬ್ ಜೀನರಾಳ್ಕರ್ ತಿಳಿಸಿದರು.

ಪ್ರವಚಕರಾದ ಅಕ್ಬರ್ ಆಲಿ ಉಡುಪಿ ಮಾತನಾಡಿ, ಯಾರು ಹುಟ್ಟುವಾಗ ನಾನು ಇಂತಹ ಜಾತಿಯಲ್ಲಿ, ಇಂತಹವರ ಮನೆಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕು ಹುಟ್ಟುವುದಿಲ್ಲ. ಹಾಗಾಗಿ ಮನುಷ್ಯರನ್ನು ಮನುಷ್ಯರಂತೆ ಕಾಣುವ ಕಾರ್ಯ ಭಾರತದಲ್ಲಿ ಆಗಬೇಕಿದೆ. ಅನಾಥರು, ಬಡವರು ತಲೆ ಎತ್ತಿ ತಿರುಗುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ರಂಜಾನ್ ಉಪವಾಸವನ್ನು ಆಚರಿಸುವವನಿಗೆ ಹಸಿವಿನ ಪರಿಚಯವನ್ನು ಮಾಡಿಸುತ್ತದೆ. ಸಂಪತ್ತು ಕೂಡಿಡುವುದಕ್ಕಲ್ಲ, ದಾನ ಮಾಡುವುದಕ್ಕೆ ಎಂಬುದನ್ನು ರಂಜಾನ್ ತಿಳಿಸುತ್ತದೆ ಎಂದರು.

ವೇದಿಕೆಯಲ್ಲಿ ಹಿರಿಯ ಚಿಂತಕ ಕೆ.ದೊರೈರಾಜು, ದಲಿತ ಮುಖಂಡರಾದ ಪಿ.ಎನ್.ರಾಮಯ್ಯ, ಕೊಳಗೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಮುಸ್ತಾಕ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News