ಪ್ಲಾಸ್ಟಿಕ್ ಅಂಶವುಳ್ಳ ಸ್ಯಾನಿಟರಿ ನ್ಯಾಪ್‍ಕಿನ್ ಬಳಕೆ ಅಪಾಯಕಾರಿ: ಡಾ.ಶೋಭ ಎನ್.ಗುಡಿ

Update: 2018-05-19 17:38 GMT

ಮಂಡ್ಯ, ಮೇ 19: ಇತ್ತೀಚಿನ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಬಳಸುವ ಸ್ಯಾನಿಟರಿ ನ್ಯಾಪ್‍ಕಿನ್‍ಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಅಂಶ ಹೆಚ್ಚಾಗಿರುವ ಕಾರಣ ತೊಂದರೆಯನ್ನು ಉಂಟುಮಾಡುತ್ತವೆ. ಕಾಲಾನಂತರದಲ್ಲಿ ಕ್ಯಾನ್ಸರ್ ರೋಗವು ಬರುವಂತಹ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ಬೆಂಗಳೂರು ನಗರ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘದ ಅಧ್ಯಕ್ಷೆ ಡಾ.ಶೋಭ ಎನ್.ಗುಡಿ ಹೇಳಿದ್ದಾರೆ.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಹಾಗೂ ಗರ್ಭಿಣಿ ಮತ್ತು ಸ್ತ್ರೀರೋಗ ವೈದ್ಯರ ಸಂಘದ ವತಿಯಿಂದ ಶನಿವಾರ ನಗರದ ಮಿಮ್ಸ್ ಸಭಾಂಗಣದಲ್ಲಿ ನಡೆದ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಪ್ರಸೂತಿ ಆರೋಗ್ಯದ ತುರ್ತು ಸಮಸ್ಯೆಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ನ್ಯಾಪ್‍ಕಿನ್‍ಗೆ ಬದಲಾಗಿ ಶುಭ್ರ ಬಟ್ಟೆಗಳನ್ನು ಬಳಸುವುದರಿಂದ ರೋಗವನ್ನು ಕಡಿಮೆ ಮಾಡಬಹುದು. ಬಳಕೆ ಮಾಡಿದ ಸ್ಯಾನಿಟರ್ ನ್ಯಾಪ್‍ಕಿನ್‍ಗಳನ್ನು ಹೊರಗೆ ಬಿಸಾಡುವುದರಿಂದ ಅದೂ ಸಹ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. 

ಹದಿಹರೆಯದ ಹೆಣ್ಣು ಮಕ್ಕಳು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಖಿನ್ನತೆಗೆ ಒಳಗಾಗುತ್ತಾರೆ. ಋತುಚಕ್ರದ ಸಮಸ್ಯೆಗಳಿಂದಲೂ ಬಳಲುತ್ತಾರೆ. ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಎಂದು ಅವರು ಸಲಹೆ ನೀಡಿದರು. 14 ರಿಂದ 18 ವರ್ಷದ ಒಳಪಟ್ಟ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಬರುವ ದೈಹಿಕ, ಮಾನಸಿಕ ಹಾಗೂ ಋತುಚಕ್ರಗಳಲ್ಲಿ ಆಗುವ ತೊಂದರೆಗಳು ಅದಕ್ಕೆ ಇರುವ ಪರಿಹಾರಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಕಾರ್ಯಾಗಾರ ಉದ್ಘಾಟಿಸಿದ ಮಿಮ್ಸ್ ವೈದ್ಯಕೀಯ ಅಧೀಕ್ಷ ಡಾ.ಹನುಮಂತಪ್ರಸಾದ್ ಮಾತನಾಡಿ, ಸ್ತ್ರೀರೋಗ ವಿಭಾಗವು ಕಾರ್ಯಾಗಾರವನ್ನು ಆಯೋಜಿಸಿರುವುದು ಅತ್ಯಂತ ಅವಶ್ಯಕ. ಇಂದಿನ ಆಧುನಿಕ ಯುಗದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಬರುವ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಈ ಕಾರ್ಯಾಗಾರ ಹೆಚ್ಚು ಉಪಯುಕ್ತವಾಗಿದೆ ಎಂದರು. 

ಸ್ತ್ರೀರೋಗ ಮತ್ತು ಪ್ರಸ್ತೂತಿ ವಿಭಾಗದ ಮುಖ್ಯಸ್ಥೆ ಡಾ.ಎಸ್.ಸಿ.ಸವಿತಾ, ಮಂಡ್ಯ ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಸಂಘದ ಅಧ್ಯಕ್ಷೆ ಡಾ.ಬಿ.ಎನ್.ಪ್ರಭಾವತಿ, ತಜ್ಞ ವೈದ್ಯರಾದ ಡಾ.ಬಿ.ಕೆ.ಸುರೇಶ್, ಡಾ.ವಸುಮತಿ ಎಸ್.ರಾವ್, ಡಾ.ಮನೋಹರ್, ಡಾ.ಸಂಜಯ್‍ಕುಮಾರ್ ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News