ಬಿಜೆಪಿ ಶಾಸಕ ಸೇಂಗರ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ ಸಿಬಿಐ

Update: 2018-05-20 07:31 GMT

ಲಕ್ನೋ, ಮೇ 20: ಉನ್ನಾವೊದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಜೈಲಿನಲ್ಲಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ವಿರುದ್ಧ ಶನಿವಾರ ಸಿಬಿಐ ಮತ್ತೊಂದು ಪ್ರಕರಣ ದಾಖಲಿಸಿದೆ. ಅತ್ಯಾಚಾರ ಸಂತಸ್ತೆಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿಹಾಕುವ ಪಿತೂರಿ ರೂಪಿಸಿದ ಸಂಬಂಧ ಈ ಪ್ರಕರಣ ದಾಖಲಿಸಲಾಗಿದೆ.

ಹೊಸ ಪ್ರಕರಣದಲ್ಲಿ ವಿಚಾರಣೆ ನಡೆಸಲು ಬಿಜೆಪಿ ಶಾಸಕನನ್ನು ಎರಡು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಬಿಐ ಕೇಳಿದೆ. ಉನ್ನಾವೊದ ಮಖಿ ಪೊಲೀಸ್‍ಠಾಣೆಯ ಇಬ್ಬರು ಪೊಲೀಸರನ್ನು ಬುಧವಾರ ಈ ಪ್ರಕರಣದ ಸಂಬಂಧ ಬಂಧಿಸಲಾಗಿತ್ತು. ಇವರು ಕೂಡಾ ಸಿಬಿಐ ಕಸ್ಟಡಿಯಲ್ಲಿದ್ದಾರೆ.

ಶಾಸಕ ಹಾಗೂ ಆತನ ಮಹಿಳಾ ಸಹವರ್ತಿಯನ್ನು ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಮಧ್ಯೆ ಸಂತ್ರಸ್ತೆಯ ತಂದೆಯನ್ನು ಹೊಡೆದು ಸಾಯಿಸಿದ ಆರೋಪದಲ್ಲಿ ಶಾಸಕನ ಸಹೋದರ ಅತುಲ್ ಸಿಂಗ್ ಸಂಗೇರ್ ಮತ್ತು ಐದು ಮಂದಿ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಂಧಿತ ಪೊಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಶಾಸಕನ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ತಂದೆ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಹೊರಿಸಿ ದೂರು ನೀಡಲಾಗಿತ್ತು. ಠಾಣೆಯಲ್ಲೇ ಶಾಸಕನ ಸಹೋದರ ಹಾಗೂ ಸಹಚರರು ಕೈದಿಯ ಮೇಲೆ ಹಲ್ಲೆ ನಡೆಸಿ ಸಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News