×
Ad

ಗಂಗಾವತಿ: ವಿಜಯೋತ್ಸವ ಆಚರಿಸುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ

Update: 2018-05-20 18:45 IST

ಗಂಗಾವತಿ,ಮೇ.20: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ, ಸರ್ಕಾರ ರಚಿಸಲು ರಾಜ್ಯಪಾಲರು ಹೆಚ್.ಡಿ. ಕುಮಾರಸ್ವಾಮಿಯವರನ್ನು ಆಹ್ವಾನಿಸುತ್ತಿದ್ದಂತೆಯೇ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ವಿಜಯೋತ್ಸವ ಆಚರಿಸುವ ವೇಳೆ ಬಿಜೆಪಿ ಕಾರ್ಯಕರ್ತರೊಂದಿಗೆ ಘರ್ಷಣೆ ಜರುಗಿದ್ದು, ಈ ವೇಳೆ ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ನಡೆದಿದೆ.

ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಬೈಕ್ ರ್ಯಾಲಿ ನಡೆಸಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ವೇಳೆ ಕೈಯ್ಯಲ್ಲಿ ಎರಡು ಪಕ್ಷಗಳ ಬಾವುಟ ಹಿಡಿದು ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ 12 ನೇ ವಾರ್ಡಿನ ರಾಜಾವಲಿ ಮತ್ತು ಮುಹಮ್ಮದ್ ಯೂಸೂಫ್ ಗಾಯಗೊಂಡಿದ್ದಾರೆ. ಅವರನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಸಿಬಿಎಸ್ ವೃತ್ತ, ಗಾಂಧಿ ವೃತ್ತ, ಶ್ರೀ ಕೃಷ್ಣದೇವರಾಯ ವೃತ್ತ ಮತ್ತು ವಾಲ್ಮೀಕಿ ವೃತ್ತದ ಬಳಿ ಬೈಕ್ ರ್ಯಾಲಿ ನಡೆಸಿದ್ದಲ್ಲದೇ ಘೋಷಣೆ ಕೂಗಿದ್ದು, ಇದರಿಂದ ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆದು ಘರ್ಷಣೆ ಉಂಟಾಗಿದೆ. ಇದೇ ವೇಳೆ ಕೆಲವರು ಬೈಕ್‍ಗೆ ಬೆಂಕಿ ಹಚ್ಚಲು ಹೋಗಿದ್ದರು ಎನ್ನಲಾಗಿದೆ.

ಪರಿಸ್ಥಿತಿ ಕೈಮೀರಿ ಹೋಗುವುದನ್ನು ಅರಿತು ಪೊಲೀಸರು ಹತೋಟಿಗೆ ತಂದಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದರೂ, ಬೂದಿ ಮುಚ್ಚಿದ ಕೆಂಡದಂತಾಗಿದೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ನಗರದಲ್ಲಿ ಇದ್ದಕ್ಕಿದ್ದಂತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದು, 
ಸೂಕ್ಷ್ಮ ಸ್ಥಳಗಳಾದ ಕಿಲ್ಲಾ ಏರಿಯಾ, ಮಹಾವೀರ ಸರ್ಕಲ್, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ, ಬನ್ನಿಗಿಡ ಕ್ಯಾಂಪ್‍ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ನಗರದಲ್ಲಿ ವಿದ್ಯುತ್ ದೀಪಗಳನ್ನು ಹಾಕದಂತೆ ತಾಕೀತು ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಮೊಕ್ಕಾಂ ಹೂಡಿದ್ದಾರೆ.

ಪ್ರಕರಣಕ್ಕೆ ಸಂಬಂದಿಸಿದಂತೆ 40 ಜನರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಜಿ.ಎಸ್. ಹೆಬ್ಬಾಳ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News