×
Ad

ಲಸಿಕೆ ವಂಚಿತರಿಗೆ ಲಸಿಕೆ ಹಾಕಲು ಮಿಷನ್ ಇಂದ್ರಧನುಷ್ ಕಾರ್ಯಕ್ರಮ: ಶಿವಮೊಗ್ಗ ಜಿಲ್ಲಾಧಿಕಾರಿ

Update: 2018-05-20 21:10 IST

ಶಿವಮೊಗ್ಗ, ಮೇ 20 : ಲಸಿಕೆಯಿಂದ ತಡೆಗಟ್ಟಬಹುದಾದ ಒಂಬತ್ತು ರೋಗಗಳ ವಿರುದ್ಧ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಲಸಿಕೆ ವಂಚಿತ ಮಕ್ಕಳ ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಸ್ವರಾಜ್ ಅಭಿಯಾನ ಹಾಗೂ ತೀವ್ರತರಹದ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದ ಕುರಿತ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಈ ಲಸಿಕೆಯನ್ನು ಗ್ರಾಮ ಸ್ವರಾಜ್ ಅಭಿಯಾನ, ಮಿಷನ್ ಇಂದ್ರಧನುಷ್ ಯೋಜನೆಯಡಿಯಲ್ಲಿ 0-2, 5-6ವರ್ಷದೊಳಗಿನ ಲಸಿಕೆ ವಂಚಿತರಾದವರು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಮೂರು ಹಂತದಲ್ಲಿ ಲಸಿಕೆ ನೀಡಲಾಗುವುದು' ಎಂದರು.

ಮೇ.23, 25 ಮತ್ತು 26ರಂದು, ಜೂನ್.20, 22 ಮತ್ತು 23ರಂದು ಹಾಗೂ ಜುಲೈಯ 18, 20 ಮತ್ತು 21ರಂದು ಲಸಿಕೆ ಹಾಕಲಾಗುವುದು. ಜಿಲ್ಲೆಯ ಸೊರಬ, ಭದ್ರಾವತಿ, ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕಿನ ಅತಿ ಹಿಂದುಳಿದ ಗ್ರಾಮಗಳ ಆಯ್ದ 32ಗ್ರಾಮಗಳಲ್ಲಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು. 

ಪಾಕ್ಷಿಕ ಕಾರ್ಯಕ್ರಮ: ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಸದುದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಮೇ 28ರಿಂದ ಜೂನ್ 09ರವರೆಗೆ ತೀವ್ರತರಹದ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕವನ್ನು ಆಚರಿಸಲು ಉದ್ದೇಶಿಸಲಾಗಿದೆ. ದೇಶದಲ್ಲಿ ಅತಿಸಾರ ಭೇದಿಯಿಂದ 5 ವರ್ಷದೊಳಗಿನ ಶೇ.10 ರಷ್ಟು ಮಕ್ಕಳು ಮರಣವನ್ನಪ್ಪುತ್ತಿದ್ದಾರೆ. ಈ ಕಾಯಿಲೆ ಬೇಸಿಗೆ ಹಾಗೂ ಮಳೆಗಾಲದ ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದು, ಬಡ ಕುಟುಂಬಗಳ ಶಿಶುಗಳು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ನುಡಿದರು.

ನೈರ್ಮಲ್ಯ ಹಾಗೂ ಸ್ವಚ್ಚತೆಯ ಕೊರತೆ, ಅಶುದ್ಧ ನೀರು, ಚರಂಡಿ ಮಿಶ್ರಿತ ನೀರಿನ ಬಳಕೆ, ಕೈ ತೊಳೆಯುವ ಸರಿಯಾದ ವಿಧಾನ ಅನುಸರಿಸದೇ ಇರುವುದು, ಇಂತಹ ಅನೇಕ ಕಾರಣಗಳು ಅತಿಸಾರ ಬೇದಿಗೆ ಕಾರಣವಾಗಲಿವೆ. ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಸಕಾಲಿಕ ಚಿಕಿತ್ಸೆ ಕೊಡಿಸುವುದಲ್ಲದೇ ಓ.ಆರ್.ಎಸ್.ನ್ನು ಬಳಸುವಂತೆ ಅವರು ಸೂಚಿಸಿದರು.

ಅತಿಸಾರ ಬೇದಿ ತಡೆಗಟ್ಟುವಲ್ಲಿ 2ವರ್ಷದೊಳಗಿನ ಮಕ್ಕಳಿಗೆ ನಿರಂತರವಾಗಿ ಹಾಲುಣಿಸುವುದು, ಆಹಾರ ಪದಾರ್ಥಗಳು ಕಲುಷಿತವಾಗದಂತೆ ನೋಡಿಕೊಳ್ಳಬೇಕೆಂದವರು ನುಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಆರ್.ಸಿ.ಹೆಚ್.ಅಧಿಕಾರಿ ಡಾ.ನಟರಾಜ್, ಡಾ.ಸತೀಶ್ಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಛಾಡೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News