×
Ad

ಮಡಿಕೇರಿ: ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿ ಸಮಾರೋಪ

Update: 2018-05-20 22:31 IST

ಮಡಿಕೇರಿ,ಮೇ.20: ಕೊಡಗು ಜಿಲ್ಲೆ ಹಾಕಿಯ ತವರೂರಾಗಿದ್ದು, ಇಲ್ಲಿನ ಹಾಕಿ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಅಗತ್ಯ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಾಪೋಕ್ಲುವಿನಲ್ಲಿ ‘ಆಸ್ಟ್ರೋ ಟರ್ಫ್’ ಮೈದಾನದ ಅಗತ್ಯವಿದೆ ಎಂದು ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಮನೆಯಪಂಡ ಎ. ಪೊನ್ನಪ್ಪ ತಿಳಿಸಿದ್ದಾರೆ.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತ 22ನೇ ವರ್ಷದ ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ವಿಭಾಗದಲ್ಲಿ ಆಸ್ಟ್ರೋ ಟರ್ಫ್ ಮೈದಾನ ನಿರ್ಮಾಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬಳಿ ಅಗತ್ಯ ಪ್ರಯತ್ನವನ್ನು ನಡೆಸುವುದಾಗಿ ತಿಳಿಸಿದರು.

ಅಂತಿಮ ಪಂದ್ಯದ ಉದ್ಘಾಟಕರಾಗಿ ಪಾಲ್ಗೊಂಡಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕರಾದ ಒಲಂಪಿಯನ್ ಮನೆಯಪಂಡ ಸೋಮಯ್ಯ ಅವರು ಮಾತನಾಡಿ, ಪಾಂಡಂಡ ಕುಟ್ಟಪ್ಪ ಅವರಿಂದ ಆರಂಭಗೊಂಡ ಕೊಡವ ಕುಟುಂಬಗಳ ನಡುವಣ ಹಾಕಿ ಉತ್ಸವ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕಳೆದ 2016ರ ರಿಯೋ ಒಲಂಪಿಕ್ಸ್ ನಲ್ಲಿ ಬಾರತ ಹಾಕಿ ತಂಡದಲ್ಲಿ ಕೊಡಗಿನ ನಿಖಿನ್ ತಿಮ್ಮಯ್ಯ, ಸುನಿಲ್, ಎಸ್.ಕೆ. ಉತ್ತಪ್ಪ, ರಘುನಾಥ್ ಅವರು ಪಾಲ್ಗೊಂಡಿದ್ದರು. ಇಂತಹ ಕ್ರೀಡಾಕೂಟದ ಮೂಲಕ ಮತ್ತಷ್ಟು ಹಾಕಿ ಪ್ರತಿಭೆಗಳು ಹೊರಹೊಮ್ಮಿ ಭಾರತವನ್ನು ಪ್ರತಿನಿಧಿಸುವಂತಾಗಬೇಕೆಂದು ಆಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತ ಉತ್ತಮವಾಗಿ ನಡೆಯುತ್ತಿರುವ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ಬೆಂಗಳೂರು ರೇವಾ ವಿಶ್ವ ವಿದ್ಯಾನಿಲಯದ ಉಪ ಕುಲಪತಿಗಳಾದ ಡಾ.ಎಸ್.ವೈ. ಕುಲಕರ್ಣಿ ಮಾತನಾಡಿ, ಕೊಡಗಿನಲ್ಲಿ ಮತ್ತಷ್ಟು ಹಾಕಿ ಆಸ್ಟ್ರೋ ಟರ್ಫ್ ಮೈದಾನಗಳು ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಹಾಕಿ ಕ್ರೀಡಾಪಟುಗಳಿಗೆ ದೊರಕುವಂತಾಗಬೇಕೆಂದು ಆಶಿಸಿ, ಕ್ರೀಡಾಕೂಟ ಮುಂಬರುವ ವರ್ಷಗಳಲ್ಲಿಯೂ ಯಶಸ್ವಿಯಾಗಿ ನಡೆಯಲೆಂದು ಹಾರೈಸಿದರು.

ಕೊಟ್ಟಿಯಂಡ ಜೀವನ್ ಚಿಣ್ಣಪ್ಪರಿಗೆ ಸನ್ಮಾನ: ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಹಾಕಿ ಪಂದ್ಯಾವಳಿ ವೀಕ್ಷಣೆ ವಿವರಣೆಕಾರರಾಗಿ ಕಾರ್ಯನಿರ್ವಹಿಸಿರುವ ಹಿರಿಯ ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಕುಲ್ಲೇಟಿರ ಹಾಕಿ ಉತ್ಸವದ ಸಮಾರೋಪದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡದ ಕತ್ತಿಯಾಟ್ ಮತ್ತು ಪರೆಯಕಳಿ ಗಮನ ಸೆಳೆಯಿತು. ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ಕೊಡಗಿನ ಪುಚ್ಚಿಮಾಡ ದೀಪಕ್ ಕಾವೇರಪ್ಪ ಅವರು ಕ್ರೀಡಾಂಗಣದ ಸುತ್ತಲೂ ಸಾಗುತ್ತಾ ತಮ್ಮ ದೇಹ ದಾರ್ಡ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು.

ಸಮಾರಂಭದಲ್ಲಿ ಕುಲ್ಲೇಟಿರ ಕುಟುಂಬದ ಪಟ್ಟೆದಾರರಾದ ಕುಲ್ಲೇಟಿರ ಮಾದಪ್ಪ, ಕುಲ್ಲೇಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ಶಂಭು ಮಂದಪ್ಪ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಚೇರಂಡ ಕಿಶನ್, ಕೊಡವ ಹಾಕಿ ಅಕಾಡೆಮಿ ಹಿರಿಯ ಉಪಾಧ್ಯಕ್ಷರಾದ ಕಲಿಯಂಡ ನಾಣಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಡ ರವಿ ಉತ್ತಪ್ಪ ಸೇರಿದಂತೆ ಹಲ ಗಣ್ಯರು ಉಪಸ್ಥಿತರಿದ್ದರು. 

2019 ರಲ್ಲಿ ಬಾಳುಗೋಡಿನಲ್ಲಿ ಮುಕ್ಕಾಟಿರ ಕಪ್ ಹಾಕಿ
ಕುಲ್ಲೇಟಿರ ಹಪ್ ಹಾಕಿ ಉತ್ಸವಕ್ಕೆ ವೈಭವದ ತೆರೆ ಬೀಳುತ್ತಿದ್ದಂತೆಯೇ ಮುಂದಿನ 2019ನೇ ಸಾಲಿನ ಪಂದ್ಯಾವಳಿಯ ಆಯೋಜಕರಾದ ಮುಕ್ಕಾಟಿರ (ಬೆಳ್ಳೂರು ಹರಿಹರ) ಕುಟುಂಬಸ್ಥರಿಗೆ ಪಂದ್ಯಾವಳಿಯ ಧ್ವಜವನ್ನು ಹಸ್ತಾಂತರಿಸಲಾಯಿತು.

ಕೊಡವ ಹಾಕಿ ಅಕಾಡೆಮಿ ಹಿರಿಯ ಉಪಾಧ್ಯಕ್ಷ ಕಲಿಯಂಡ ನಾಣಯ್ಯ, ಕುಲ್ಲೇಟಿರ ಕುಟುಂಬದ ಪಟ್ಟೆದಾರರಾದ ಕುಲ್ಲೇಟಿರ ಮಾದಪ್ಪ, ಉತ್ಸವದ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ಅವರು ಹಾಕಿ ಉತ್ಸವದ ಧ್ವಜವನ್ನು ಮುಕ್ಕಾಟಿರ ಕಟುಂಬದ ಪ್ರಮುಖರಿಗೆ ನೀಡಿದರು. ಮುಂದಿನ ಸಾಲಿನಲ್ಲಿ ಮುಕ್ಕಾಟಿರ ಹರಿಹರ ಕಪ್ ಹಾಕಿ ಉತ್ಸವ ವೀರಾಜಪೇಟೆಯ ಬಾಳುಗೋಡಿನಲ್ಲಿ ನಡೆಯಲಿದೆ. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News