ಆಟ ಮುಗಿದಿಲ್ಲ

Update: 2018-05-21 04:22 GMT

55 ಗಂಟೆಯ ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿದ ಯಡಿಯೂರಪ್ಪ, ತಾನೇ ತೋಡಿದ ಬಾವಿಗೆ ಬಿದ್ದರೋ, ಯಾರೋ ತೋಡಿಟ್ಟ ಬಾವಿಗೆ ಬಿದ್ದರೋ ಎನ್ನುವುದೀಗ ಚರ್ಚೆಯ ಮುಖ್ಯ ವಿಷಯವಾಗಿದೆ. ವಿಶ್ವಾಸ ಮತ ಯಾಚನಗೆ ರಾಜ್ಯಪಾಲರು ಎರಡು ವಾರ ಅವಕಾಶ ನೀಡಿದಂತೆ, ಸುಪ್ರೀಂಕೋರ್ಟ್ ಕೂಡ ಬಿಜೆಪಿ ಪರವಾಗಿ ಆದೇಶ ನೀಡಬಹುದು ಎಂದು ಯಡಿಯೂರಪ್ಪ ಕೊನೆಯವರೆಗೂ ಭಾವಿಸಿರುವುದು ನಿಜ. ಸುಪ್ರೀಂಕೋರ್ಟ್ ಬಾಯಿಯಲ್ಲಿ ಕೇಂದ್ರ ಸರಕಾರ ಮಾತನಾಡಬಹುದು ಎನ್ನುವಷ್ಟರ ಮಟ್ಟಿಗೆ ಯಡಿಯೂಪ್ಪ ಅಮಿತ್ ಶಾರನ್ನು ನಂಬಿದ್ದರು. ಅಥವಾ ಆ ನಂಬಿಕೆಯನ್ನು ಅವರ ತಲೆಯಲ್ಲಿ ರೆಡ್ಡಿ ಬಳಗ ಬಿತ್ತಿತ್ತು. ಪ್ರಮಾಣ ವಚನ ಸ್ವೀಕರಿಸಿದ 55 ಗಂಟೆಯೊಳಗೆ ಬಹುಮತ ಸಾಬೀತು ಮಾಡಬೇಕು ಎಂಬ ಸುಪ್ರೀಂಕೋರ್ಟ್‌ನ ಆದೇಶ ಯಡಿಯೂರಪ್ಪನವರಿಗೆ ಅನಿರೀಕ್ಷಿತ. ಇದೇ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳುವ ಹತಾಶೆಯ ಪ್ರಯತ್ನ ‘ಆಡಿಯೋ’ಗಳ ಮೂಲಕ ಬಹಿರಂಗವಾಯಿತು.

ಕೊನೆಯ ಕ್ಷಣದಲ್ಲಿ ಯಾರನ್ನೆಲ್ಲ ಸಂಪರ್ಕಿಸಲು ಪ್ರಯತ್ನಿಸಲಾಯಿತೋ, ಅವರೇ ಸ್ವತಃ ಆಡಿಯೋ ಬಿಡುಗಡೆ ಮಾಡಿದರು. ‘ಕಾಂಗ್ರೆಸ್ ಜೆಡಿಎಸ್‌ನವರು ತಮ್ಮ ಶಾಸಕರನ್ನೆಲ್ಲ ಕೂಡಿಟ್ಟರು. ಆದುದರಿಂದ ನಮಗೆ ಬಹುಮತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ’ ಎಂದು ಸದನದಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿರುವುದು ಅವರ ಹತಾಶೆಯ ಪರಾಕಾಷ್ಠೆಯಾಗಿದೆ. ಎಲ್ಲ ಪಕ್ಷದ ಶಾಸಕರು ಸದನಕ್ಕೆ ಆಗಮಿಸಿರುವಾಗ, ಬಹುಮತ ಯಾಚನೆ ಮಾಡಲು ಯಡಿಯೂರಪ್ಪ ಅವರಿಗಿದ್ದ ಅಡ್ಡಿ ಯಾವುದು? ಪ್ರಜಾಸತ್ತಾತ್ಮಕವಾಗಿ ಬಹುಮತ ಯಾಚನೆ ಮಾಡಲು ಅವಕಾಶವೂ ಇತ್ತು. ಒಂದು ವೇಳೆ, ಸದನದಲ್ಲಿ ಯಡಿಯೂರಪ್ಪ ಪರವಾಗಿ ಶಾಸಕರು ಮತ ಚಲಾಯಿಸಿದರೆ ಅದನ್ನು ತಡೆಯುವವರು ಯಾರೂ ಇದ್ದಿರಲಿಲ್ಲ. ಅಂದರೆ, ‘ಕುದುರೆ ವ್ಯಾಪಾರ’ಕ್ಕೆ ಅವಕಾಶ ಸಿಗಲಿಲ್ಲ ಎನ್ನುವುದನ್ನು ಯಡಿಯೂರಪ್ಪ ಪರೋಕ್ಷವಾಗಿ ಹೇಳಿಕೊಂಡಂತಾಯಿತು.

ತನ್ನನ್ನು ತಾನು ‘ಇನ್ನೊಂದು ವಾಜಪೇಯಿ’ ಎಂದು ಬಿಂಬಿಸಲು ವ್ಯರ್ಥ ಪ್ರಯತ್ನವನ್ನು ನಡೆಸಿದರು ಯಡಿಯೂರಪ್ಪ. ತನ್ನ ವೈಪಲ್ಯವನ್ನು ಜನರು ಅನುಕಂಪದಿಂದ ನೋಡಬೇಕು ಎಂದು ಬಯಸಿದರು. ಆದರೆ ಸ್ವತಃ ಬಿಜೆಪಿಯೊಳಗಿನ ನಾಯಕರೇ ಯಡಿಯೂರಪ್ಪ ಅವರ ಸ್ಥಿತಿಯನ್ನು ಒಳಗೊಳಗೆ ಸಂಭ್ರಮಿಸುತ್ತಿದ್ದರು. ರೆಡ್ಡಿ ಬಳಗ, ಆರೆಸ್ಸೆಸ್ ಜೊತೆ ಸೇರಿ ಅಗೆದ ಬಾವಿಗೆ ಯಡಿಯೂರಪ್ಪ ಬಿದ್ದರು. ಯಡಿಯೂರಪ್ಪ ತಮ್ಮ ರಾಜಕೀಯ ಅಧ್ಯಾಯದ ಕೊನೆಯ ಪುಟಕ್ಕೆ ಬಂದು ನಿಂತಿದ್ದಾರೆ.

ಬಿಜೆಪಿಗೆ ಯಡಿಯೂರಪ್ಪ ಇನ್ನು ಎಷ್ಟರಮಟ್ಟಿಗೆ ಬಿಜೆಪಿಗೆ ಅವಶ್ಯ ಬೀಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಬಿಜೆಪಿ ಇಂದು ಯಡಿಯೂರಪ್ಪರನ್ನು ಸಂಪೂರ್ಣವಾಗಿ ಹೊರಗಿಡುವಂತೆ ಇಲ್ಲ. ಯಾಕೆಂದರೆ, ದೊಡ್ಡ ಪಕ್ಷವಾಗಿ ಬಿಜೆಪಿ ಹೊರಬಂದಿದೆ. ತೀರಾ ಕಳಪೆ ಪ್ರದರ್ಶನ ಮಾಡಿದ್ದಿದ್ದರೆ ಅದರ ಹೆಸರಿನಲ್ಲಿ ಯಡಿಯೂರಪ್ಪರನ್ನು ಕೇಂದ್ರ ವರಿಷ್ಠರು ಕಿತ್ತು ಎಸೆಯುತ್ತಿದ್ದರೇನೋ. ಇದೀಗ ಯಡಿಯೂರಪ್ಪ ಎನ್ನುವ ಮುಳ್ಳು ಮತ್ತೆ ಬಿಜೆಪಿಯ ಗಂಟಲೊಳಗೆ ಸಿಲುಕಿಕೊಂಡಿದೆ. ಬಿಜೆಪಿ ರಾಜ್ಯದಲ್ಲಿ ತನ್ನನ್ನು ತಾನು ಪುನರ್ನವೀಕರಿಸುವ ಆತುರದಲ್ಲಿದೆ. ಯಡಿಯೂರಪ್ಪರಿಂದ ಅಧಿಕಾರವನ್ನು ಕಿತ್ತು, ಆರೆಸ್ಸೆಸ್ ಪ್ರಮುಖ ಸಂತೋಷ್ ಕೈಗೆ ಒಪ್ಪಿಸಲು ಅದು ಸಂದರ್ಭಕ್ಕಾಗಿ ಹೊಂಚಿ ಕೂತಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅದನ್ನೇ ನೆಪ ಮಾಡಿಕೊಂಡು ಅವರನ್ನು ವೃದ್ಧಾಶ್ರಮಕ್ಕೆ ದಾಟಿಸುವ ದಿನ ದೂರವಿಲ್ಲ. ಹಾಗಾದಲ್ಲಿ ಖಟ್ಟರ್ ಹಿಂದುತ್ವವಾದಿಗಳ ಕೈಗೆ ಬಿಜೆಪಿ ಜಾರಲಿದೆ. ಅದು ಎಷ್ಟರಮಟ್ಟಿಗೆ ಕರ್ನಾಟಕದಲ್ಲಿ ಬಿಜೆಪಿಗೆ ಪ್ರಯೋಜನವಾಗಬಹುದು ಎನ್ನುವುದನ್ನು ಕಾಲವೇ ಹೇಳಬೇಕು.

ಇದೇ ಸಂದರ್ಭದಲ್ಲಿ ಯಡಿಯೂರಪ್ಪ ರಾಜೀನಾಮೆಯೊಂದಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ದಾರಿ ಸಂಪೂರ್ಣ ಸುಗಮವಾಯಿತು ಎಂದು ಹೇಳುವಂತಿಲ್ಲ. ಬಿಜೆಪಿಯ ಕುದುರೆ ವ್ಯಾಪಾರ ವಿಫಲವಾಯಿತೇನೋ ನಿಜ, ಆದರೆ ಅದರರ್ಥ ಮುಂದಿನ ದಿನಗಳಲ್ಲಿ ಅದು ಮರುಕಳಿಸುವುದಿಲ್ಲ ಎಂದಲ್ಲ. ‘ಸರಕಾರವನ್ನು ಒಡೆಯುವ’ ಬೆದರಿಕೆಯನ್ನು ಈಗಾಗಲೇ ಬಿಜೆಪಿಯ ನಾಯಕರು ಪರೋಕ್ಷವಾಗಿ ನೀಡಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಅನಿವಾರ್ಯ ಮೈತ್ರಿ. ತನ್ನ ಸೋಲನ್ನು ಗೆಲುವಾಗಿ ಮಾರ್ಪಡಿಸಿಕೊಳ್ಳಲು ಜೆಡಿಎಸ್ ಜೊತೆಗೆ ಕೈ ಜೋಡಿಸಬೇಕಾಗಿತ್ತು. ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ತಕ್ಷಣ ಜೆಡಿಎಸ್‌ನ್ನು ಸಂಪರ್ಕಿಸಿತು ಮಾತ್ರವಲ್ಲ, ನಿಶ್ಶರ್ಥವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಒಪ್ಪಿಕೊಂಡಿತು. ಸದ್ಯದ ಅತಂತ್ರ ಫಲಿತಾಂಶ ಕಾಂಗ್ರೆಸ್‌ನಲ್ಲಿರುವ ಹಲವು ನಾಯಕರಿಗೆ ಖುಷಿಕೊಟ್ಟಿದೆ. ಒಂದು ವೇಳೆ ಕಾಂಗ್ರೆಸ್‌ಗೆ ಬಹುಮತ ಬಂದಿದ್ದರೆ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದರು.

ಸಿದ್ದರಾಮಯ್ಯ ಜನಪ್ರಿಯತೆ, ಕಾಂಗ್ರೆಸ್‌ನಲ್ಲಿರುವ ಇತರ ಮುಖಂಡರಿಗೆ ನುಂಗಲಾರದ ತುತ್ತಾಗಿತ್ತು. ಅತಂತ್ರ ಫಲಿತಾಂಶದಿಂದಾಗಿ ಅವರಿಗೆ ಅಡ್ಡವಾಗಿ ನಿಂತಿದ್ದ ಸಿದ್ದರಾಮಯ್ಯ ಬದಿಗೆ ಸರಿದಂತಾಗಿದೆ. ಪರಮೇಶ್ವರ್ ಅವರಿಗೆ ಅನಾಯಾಸವಾಗಿ ಉಪಮುಖ್ಯಮಂತ್ರಿ ಸ್ಥಾನ ದೊರಕಬಹುದು. ಸಿದ್ದರಾಮಯ್ಯ ಅವರ ಹಿಡಿತದಲ್ಲಿದ್ದ ರಾಜ್ಯ ಕಾಂಗ್ರೆಸ್‌ನ ನಿಯಂತ್ರಣ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರವಾಗಿದೆ. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆದ್ದ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವಲ್ಲಿ ಫಲಿತಾಂಶ ಸಂಪೂರ್ಣ ಯಶಸ್ವಿಯಾಗಿದೆ. ಇದು ರಾಜ್ಯದ ಮೂಲ ಕಾಂಗ್ರೆಸ್ ಮುಖಂಡರಿಗೆ ಅಗತ್ಯವಿರುವ ಫಲಿತಾಂಶವಾಗಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯರನ್ನು ನೋಡುವುದಕ್ಕಿಂತ ಕುಮಾರಸ್ವಾಮಿಯನ್ನು ನೋಡುವುದೇ ಹೆಚ್ಚು ಸಹ್ಯ ಎಂಬಂತಹ ಸ್ಥಿತಿಯಲ್ಲಿ ನಿಂತಿದ್ದಾರೆ ಅವರು. ಪರಿಣಾಮವಾಗಿ, ಸದ್ಯಕ್ಕೆ ಯಾವ ಚೌಕಾಶಿಯೂ ಇಲ್ಲದೆ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಸಿದ್ದಾರೆ. ಆದರೆ, ಬರೇ 38 ಸ್ಥಾನಗಳನ್ನು ಹೊಂದಿರುವ ಕುಮಾರಸ್ವಾಮಿ ಐದು ವರ್ಷಗಳ ಕಾಲ ಪೂರ್ತಿಯಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಕಾಂಗ್ರೆಸ್‌ನ ನಾಯಕರು ಎಷ್ಟು ಸಮಯ ಸಹಿಸಬಲ್ಲರು? ಈಗಾಗಲೇ ತಾವು ಕೋಟಿಗಟ್ಟಲೆ ಬಾಳುತ್ತಿದ್ದೇವೆ ಎಂದು ಅರಿತಿರುವ ಶಾಸಕರು, ಸರಕಾರದಲ್ಲಿ ಸೂಕ್ತ ಸ್ಥಾನ ಸಿಗದೇ ಇದ್ದರೆ ಮತ್ತೆ ಬಿಜೆಪಿಯ ಆಮಿಷಕ್ಕೆ ಬಲಿಯಾಗದೇ ಇರುವರೇ?

 ಇವೆಲ್ಲ ಸವಾಲುಗಳನ್ನು ಮೀರಿ, ಮೈತ್ರಿ ಸರಕಾರ ಕನಿಷ್ಠ ಒಂದೆರಡು ವರ್ಷ ಬಾಳಿದರೂ ಅದು ಮುಂದಿನ ಲೋಕಸಭಾ ಚುನಾವಣೆಯ ಮೇಲೆ ತನ್ನ ಪರಿಣಾಮವನ್ನು ಬೀರಲಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇನ್ನಷ್ಟು ಗಟ್ಟಿಯಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ ಜೊತೆಯಾಗಿ ನಿಂತಲ್ಲಿ ಬಿಜೆಪಿ ಇನ್ನಷ್ಟು ಮುಖಭಂಗವನ್ನು ಅನುಭವಿಸಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೂ ಹೊಣೆಗಾರಿಕೆಗಳಿವೆ. ಮುಖ್ಯವಾಗಿ ಕಾಂಗ್ರೆಸ್‌ನ ಅನಿವಾರ್ಯತೆಯನ್ನು ಜೆಡಿಎಸ್ ದುರುಪಯೋಗಪಡಿಸಬಾರದು. ಮೈತ್ರಿ ಯಶಸ್ವಿಯಾಗಬೇಕಾದರೆ ಕೊಡುಕೊಳ್ಳುವಿಕೆ ಅತ್ಯಗತ್ಯ. 78 ಸ್ಥಾನಗಳಿರುವ ಕಾಂಗ್ರೆಸ್ ಈಗಾಗಲೇ 38 ಸ್ಥಾನಗಳಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟು ಕೊಟ್ಟು, ತಾನು ಕಳೆದುಕೊಳ್ಳುವುದಕ್ಕೂ ಸಿದ್ಧ ಎನ್ನುವುದನ್ನು ತೋರಿಸಿಕೊಟ್ಟಿದೆ. ಇದೀಗ ಸರದಿ ಜೆಡಿಎಸ್ ನಾಯಕರದು. ಕಾಂಗ್ರೆಸ್ ಇಲ್ಲದಿದ್ದರೆ ಬಿಜೆಪಿ ಎಂದು ಗಾಳಿ ಬಂದಲ್ಲಿ ತೂರಿಕೊಳ್ಳುವ ರಾಜಕಾರಣಕ್ಕೆ ಮತ್ತೆ ಇಳಿದರೆ, ಅದರ ಲಾಭವನ್ನು ಕೋಮುಶಕ್ತಿಗಳು ಸಂಪೂರ್ಣ ತನ್ನದಾಗಿಸಿಕೊಂಡು ಜೆಡಿಎಸ್ ಪಕ್ಷವನ್ನೇ ಆಪೋಷನ ತೆಗೆದುಕೊಳ್ಳಬಹುದು. ರಾಜ್ಯವನ್ನ್ನು ಪೂರ್ಣವಾಗಿ ಕೋಮುವಾದಿಗಳ ತೆಕ್ಕೆಗೆ ತಳ್ಳಿದ ಕಳಂಕವನ್ನು ತಂದೆ ಮಕ್ಕಳು ಹೊತ್ತುಕೊಳ್ಳಬೇಕಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News