ಢಾಕಾ: ರೋಹಿಂಗ್ಯನ್ ನಿರಾಶ್ರಿತ ಶಿಬಿರಕ್ಕೆ ಪ್ರಿಯಾಂಕಾ ಛೋಪ್ರಾ ಭೇಟಿ

Update: 2018-05-22 08:27 GMT

ಢಾಕಾ, ಮೇ 22: ಕಳೆದ ವರ್ಷ ಜೋರ್ಡಾನ್ ನ ಸಿರಿಯನ್ ಮಕ್ಕಳನ್ನು ಭೇಟಿಯಾಗಿದ್ದ ಯುನಿಸೆಫ್ ಗುಡ್‍ವಿಲ್ ರಾಯಭಾರಿ ಹಾಗೂ ನಟಿ ಪ್ರಿಯಾಂಕ ಛೋಪ್ರಾ ಈ ಬಾರಿ  ಬಾಂಗ್ಲಾದೇಶದ ಕಾಕ್ಸ್ ಬಜಾರಿನಲ್ಲಿರುವ ರೋಹಿಂಗ್ಯ ನಿರಾಶ್ರಿತರ  ಶಿಬಿರಕ್ಕೆ ಭೇಟಿ ನೀಡಿದ್ದಾರೆ. ರೋಹಿಂಗ್ಯನ್ನರಿಗಾಗಿರುವ  ನಿರಾಶ್ರಿತ ಶಿಬಿರಗಳಲ್ಲಿಯೇ ಅತ್ಯಂತ ದೊಡ್ಡ ಶಿಬಿರವಾಗಿರುವ ಕಾಕ್ಸ್ ಬಜಾರದ ಶಿಬಿರಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಅಲ್ಲಿನ ಮಕ್ಕಳೊಂದಿಗೆ ಸ್ನೇಹದಿಂದ ಬೆರೆತು ಅವರ ಕಷ್ಟಗಳನ್ನು ಅರಿಯುವ ಪ್ರಯತ್ನ ನಡೆಸಿದ್ದಾರೆ.

ತನ್ನ ಭೇಟಿಯ ಫೋಟೋಗಳನ್ನು ಪ್ರಿಯಾಂಕ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಅಲ್ಲಿನ ಮಕ್ಕಳು ವಾಸಿಸುತ್ತಿರುವ ದಯನೀಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ರೋಹಿಂಗ್ಯನ್ನರ ಕಲ್ಯಾಣಕ್ಕಾಗಿ ಯುನಿಸೆಫ್ ಮಾಡುತ್ತಿರುವ ಕೆಲಸವನ್ನು ಬೆಂಬಲಿಸುವಂತೆಯೂ ಪ್ರಿಯಾಂಕಾ ತಮ್ಮ ಫಾಲೋವರ್ಸನ್ನು ವಿನಂತಿಸಿದ್ದಾರೆ.

"ನಾನು ಇಂದು ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಲ್ಲಿದ್ದೇನೆ. ವಿಶ್ವದ ಅತ್ಯಂತ ದೊಡ್ಡ ನಿರಾಶ್ರಿತರ ಶಿಬಿರ ಇದಾಗಿದೆ. ಮ್ಯಾನ್ಮಾರ್ ನ ರಖೈನ್ ನಲ್ಲಿ ನಡೆದ ಹಿಂಸಾಚಾರದಿಂದಾಗಿ ಸುಮಾರು ಏಳು ಲಕ್ಷ ರೋಹಿಂಗ್ಯನ್ನರು ಬಾಂಗ್ಲಾದೇಶದ ಗಡಿಯೊಳಕ್ಕೆ ನುಸುಳಿದ್ದಾರೆ. ಅವರಲ್ಲಿ ಶೇ.60ರಷ್ಟು ಮಂದಿ ಮಕ್ಕಳು. ಹಲವಾರು ತಿಂಗಳುಗಳ ನಂತರವೂ ಅವರ ಸಂಕಷ್ಟ ಮುಂದುವರಿದಿದೆ. ತುಂಬಿ ತುಳುಕುತ್ತಿರುವ ಶಿಬಿರಗಳಲ್ಲಿ ಅವರಿಗೆ ತಾವೆಲ್ಲಿ ಸೇರಿದ್ದೇವೆಂಬುದೂ ತಿಳಿದಿಲ್ಲ. ತಮ್ಮ ಮುಂದಿನ ಊಟ ಯಾವಾಗ ದೊರೆಯುತ್ತದೆ ಎಂಬುದೂ ಅವರಿಗೆ ತಿಳಿದಿಲ್ಲ. ಇಲ್ಲಿನ ಮಕ್ಕಳಿಗೆ ತಮ್ಮ ಭವಿಷ್ಯವೇನಾಗಬಹುದೆಂದೇ ತಿಳಿದಿಲ್ಲ. ಅವರು ನಗುತ್ತಿದ್ದರೂ ಅವರ ಕಣ್ಣುಗಳಲ್ಲಿನ ಖಾಲಿತನ ನನಗೆ ಕಾಣಿಸುತ್ತಿದೆ. ಈ ಮಕ್ಕಳಿಗೆ ಸಹಾಯ ಬೇಕಿದೆ. ಈ ಮಕ್ಕಳು ನಮ್ಮ ಭವಿಷ್ಯ. ನಿಮ್ಮ ಬೆಂಬಲ ನೀಡಿ'' ಎಂದು ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ಪ್ರಿಯಾಂಕ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News