ಹುಳಿಯಾರು: ಭಾರೀ ಮಳೆಗೆ ನೆಲಕ್ಕುರುಳಿದ ವಿದ್ಯುತ್ ಕಂಬ, ಮರಗಳು
ಹುಳಿಯಾರು,ಮೇ.22: ಸೋಮವಾರ ರಾತ್ರಿ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮ ಅಕ್ಷರಶಃ ತತ್ತರಿಸಿದೆ. ಗುಡುಗು, ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಕಂಬಗಳು, ಮರಗಳು, ಮನೆಯ ಮೇಲ್ಚಾವಣಿ ಶೀಟ್‍ಗಳು ಧರೆಗುರುಳಿದ ಘಟನೆ ನಡೆದಿದೆ.
ಮಳೆಗಾಳಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿನ 9 ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಗ್ರಾಮದ ಅರಳಿ ಮರ ಸೇರಿದಂತೆ ವಿವಿಧ ಜಾತಿಯ 6 ಮರಗಳು ಮನೆ, ಬೈಕ್ ಮೇಲೆ ಬಿದ್ದಿದ್ದು, ತೋಟಗಳಲ್ಲಿ ಸಾವಿರಾರು ತೆಂಗಿನ ಮರಗಳು, ಅಡಕೆ ಮರಗಳು ಧರೆಗುರುಳಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ಅರಳಿ ಮರವೊಂದು ಮೈಲ್ಕೆಬೆ ರಂಗನಾಥ್ ಅವರ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ಸಂಪೂರ್ಣ ಜಖಂ ಗೊಂಡಿದೆ. ಅಲ್ಲದೆ ಹಳೆ ಆಸ್ಪತ್ರೆ ಮುಂಭಾಗದ ಮರವೊಂದು ಬಿಲ್ಡಿಂಗ್ ಮೇಲೆ ಬಿದ್ದು ನಷ್ಟ ಉಂಟುಮಾಡಿದೆ. ಬಿ.ಆರ್.ಗಜೇಂದ್ರ, ಚಂದ್ರಕಲಾ, ಪುರದಯ್ಯ, ಬಿ.ಆರ್.ರಂಗನಾಥ್, ಬಿ.ಕೆ.ಪುರುಷೋತ್ತಮ್, ಟಿ.ಎಚ್.ರಮೇಶ್, ಮೂಡ್ಲಪ್ಪ, ಬಂಡಿಮನೆ ಲೋಕೇಶ್ ಅವರ ತೆಂಗು ಮತ್ತು ಅಡಿಕೆ ಮರಗಳು ಧರೆಗುರುಳಿವೆ.
ಗ್ರಾಮದ ತೊಳಸಮ್ಮ, ನರಸಮ್ಮ, ತಿಮ್ಮಯ್ಯ ಅವರ ಮನೆಗಳ ಮೇಲ್ಚಾವಣಿ ಶೀಟ್ ಗಳು ಹಾರಿ ಹೋಗಿದ್ದು, ಒಟ್ಟಾರೆ ಬಿರುಗಾಳಿ ಮಳೆ ಗ್ರಾಮದಲ್ಲಿ ಇಡೀ ರಾತ್ರಿ ಆತಂಕದ ವಾತಾವಣರ ನಿರ್ಮಿಸಿ ಅಪಾರ ನಷ್ಟ ತಂದಿತ್ತಿದೆ. ಮುಂಜಾನೆ ಬೆಸ್ಕಾಂ ಸಿಬ್ಬಂದಿ ಕಂಬಗಳ ದುರಸ್ಥಿ ಕಾರ್ಯ ಮಾಡಿದರೆ ಅರಣ್ಯ ಮತ್ತು ಗ್ರಾಪಂ ಸಿಬ್ಬಂದಿ ಧರೆಗುರುಳಿದ ಮರಗಳ ತೆರವು ಕಾರ್ಯ ಮಾಡಿದರು. ಕಂದಾಯ ಹಾಗೂ ತೋಟಗಾರಿಗೆ ಇಲಾಖೆ ಸಿಬ್ಬಂಧಿ ಭೇಟಿ ನೀಡಿ ನಷ್ಟದ ಅಂದಾಜು ವಿವರ ಪಡೆದರು.