"ರೈತರ ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ನಿಲುವು ಬದಲಾಯಿಸಬಾರದು"
ಶಿವಮೊಗ್ಗ, ಮೇ 22: 'ರೈತರ ಸಾಲ ಮನ್ನಾ ವಿಚಾರದಲ್ಲಿ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿಕುಮಾರಸ್ವಾಮಿಯವರು ನೀಡುತ್ತಿರುವ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸುತ್ತಿವೆ. ಈ ಕಾರಣದಿಂದ ಚುನಾವಣಾ ಪೂರ್ವದಲ್ಲಿ ಅವರು ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನಹರಿಸಬೇಕು' ಎಂದು ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ಲಕ್ಷ್ಮೀಕಾಂತ ಚಿಮಣೂರು ಆಗ್ರಹಿಸಿದ್ದಾರೆ.
ಜೆಡಿಎಸ್ ಪಕ್ಷವು ರೈತರ ಸಾಲ ಮನ್ನಾ ಸೇರಿದಂತೆ ಹಲವು ಪ್ರಮುಖ ಘೋಷಣೆಗಳನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಇದೆಲ್ಲವನ್ನು ಗಮನಿಸಿ ಹಾಗೂ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಉದ್ದೇಶದಿಂದ, ಕಾಂಗ್ರೆಸ್ ಪಕ್ಷವು ಜೆಡಿಎಸ್‍ಗೆ ಬೆಂಬಲ ವ್ಯಕ್ತಪಡಿಸಿದೆ. ಆದರೆ ಇತ್ತೀಚೆಗೆ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳಿಗೆ ನೀಡುತ್ತಿರುವ ಸಂದರ್ಶನದಲ್ಲಿ ರೈತರ ಪೂರ್ಣ ಪ್ರಮಾಣದ ಸಾಲ ಮನ್ನಾ ಮಾಡುವುದು ಅಸಾಧ್ಯ ಎಂಬರ್ಥದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇದು ರೈತ ಸಮುದಾಯದಲ್ಲಿ ಗೊಂದಲ ಮೂಡಿಸುವುದರ ಜೊತೆಗೆ, ನಾನಾ ರೀತಿಯ ಚರ್ಚೆಗೂ ಆಸ್ಪದವಾಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
ಈ ಕಾರಣದಿಂದ ರೈತರ ಎಲ್ಲ ರೀತಿಯ ಸಾಲ ಮನ್ನಾಗೆ ಹೆಚ್.ಡಿ.ಕುಮಾರಸ್ವಾಮಿ ಕ್ರಮಕೈಗೊಳ್ಳಬೇಕು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಘೋಷಣೆ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಖಭಂಗ: ಬಹುಮತವಿಲ್ಲದ ಹೊರತಾಗಿಯೂ ಬಿಜೆಪಿ ಪಕ್ಷ ಸರ್ಕಾರ ರಚನೆಗೆ ಮುಂದಾಗಿ ಪ್ರಜಾಪ್ರಭುತ್ವದ ಎಲ್ಲ ತತ್ವಗಳನ್ನು ಗಾಳಿಗೆ ತೂರಿ, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿ ಮುಖಭಂಗಕ್ಕೀಡಾದ ಕ್ರಮ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬಿಜೆಪಿಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್‍ಗೆ ಸೂಕ್ತ ಬಹುಮತವಿದ್ದ ಹೊರತಾಗಿಯೂ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡದೆ, ಬಿ.ಎಸ್.ಯಡಿಯೂರಪ್ಪಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದು ಹಾಗೂ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ ಕ್ರಮ ಸರಿಯಾದುದಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅತ್ಯಂತ ಸ್ವಾಗತಾರ್ಹವಾದುದಾಗಿದೆ ಎಂದು ಇದೇ ಸಂದರ್ಭದಲ್ಲಿ ಲಕ್ಷ್ಮೀಕಾಂತ ಚಿಮಣೂರು ತಿಳಿಸಿದ್ದಾರೆ.