ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ: ಹಾಸನ ಜಿಲ್ಲಾಧಿಕಾರಿ ಜಾಫರ್

Update: 2018-05-22 16:36 GMT

ಹಾಸನ,ಮೇ.22: ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಜೊತೆಗೆ ಸೊಳ್ಳೆ ಉತ್ಪತ್ತಿ ನಿಯಂತ್ರಣ ತಡೆಗಟ್ಟಲು ಯಾವ ಕಡೆಯೂ ನೀರು ನಿಲ್ಲದಂತೆ ನೋಡಿಕೊಳ್ಳಲು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಜಾಫರ್ ತಿಳಿಸಿದರು.

ನಗರದ ಗಂಧದ ಕೋಟೆ ಆವರಣದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ವಿಭಜಿತ) ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯ ಅಂಗವಾಗಿ ಅರಿವು ಮೂಡಿಸುವ ಜಾಗೃತಿ ಜಾಥವನ್ನು ಹಸಿರು ಭಾವುಟ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನತೆ ಮುಂಜಾಗೃತೆ ವಹಿಸಿ ನಿಯಮ ಪಾಲಿಸಿದರೆ ಇಂತಹ ಜ್ವರದಿಂದ ದೂರ ಇರಬಹುದು. ಮಲಗುವಾಗ ಸೊಳ್ಳೆ ಪರದೆ, ಯಾವ ಸ್ಥಳದಲ್ಲೂ ನೀರು ನಿಲ್ಲದಂತೆ ಜಾಗೃತೆ ಮಾಡಿದರೆ ಡೆಂಗ್ಯೂನಿಂದ ದೂರ ಇರಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಈಗಾಗಲೇ ಮಳೆ ಆರಂಭವಾಗಿದೆ. ಅಲ್ಲಲ್ಲಿ ನೀರು ನಿಲ್ಲದ ಹಾಗೆ ಗಮನ ಕೊಡಬೇಕು. ನೀರು ನಿಲ್ಲುವ ತೊಟ್ಟಿ, ಡ್ರಮ್, ಬ್ಯಾರೆಲ್, ಏರ್ ಕೂಲರ್ ಮೊದಲಾದ ಸ್ಥಳಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿದ ಬಳಿಕ ಮತ್ತೆ ನೀರು ತುಂಬಬೇಕು. ಡೆಂಗ್ಯೂ ಜ್ಚರದ ನಿಯಂತ್ರಣಕ್ಕೆ ಸರಿಯಾದ ಕ್ರಮ ಅನುಸರಿಸಿದರೆ ಸಾಕು ಎಂದು ಸಲಹೆ ನೀಡಿದರು. 

ಡೆಂಗ್ಯು ನಿಯಂತ್ರಣಕ್ಕಾಗಿ ನಗರಸಭೆ ಮತ್ತು ಗ್ರಾಮ ಪಂಚಾಯತ್ ಮೂಲಕ ಅಲ್ಲಿನ ಜನರಿಗೆ ಜಾಗೃತಿ ಮೂಡಿಸಬೇಕು. ಹಾಗೆಯೇ ಆರೋಗ್ಯ ಇಲಾಖೆ ಮೂಲಕ ಸಾಕಷ್ಟು ಪ್ರಚಾರವನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಹಾಸನದಲ್ಲಿ ಡೆಂಗ್ಯೂ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸಿರುವುದರಿಂದ ರೋಗಗಳು ಕಾಣಿಸಿಕೊಂಡಿರುವುದಿಲ್ಲ ಎಂದರು. ಡೆಂಗ್ಯೂ ಜ್ವರ ನಿಯಂತ್ರಣ ಆರೋಗ್ಯ ಇಲಾಖೆ ಒಂದರಿಂದಲೇ ಸಾಧ್ಯವಿಲ್ಲ. ಜೊತೆಗೆ ಇತರೆ ಇಲಾಖೆ ಮತ್ತು ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು.

ಜಾಥವು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ವಿಭಜಿತ) ಬಳಿಯಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳು, ನಾಮ ಫಲಕಗಳು ಗಮನ ಸೆಳೆದವು.

ಇದೆ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್, ಮಲೇರಿಯಾ ನಿಯಂತ್ರಣಾಧಿಕಾರಿ ರಾಜಗೋಪಾಲ್, ನಾಗೇಶ್ ಆರಾಧ್ಯ, ವಾರ್ತಾಧಿಕಾರಿ ವಿನೋದ್ ಚಂದ್ರ ಇತರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News