"ಕೋಮುವಾದಿಗಳಿಂದ ರಾಜ್ಯದ ಸಾಮರಸ್ಯ ಕಾಪಾಡಲು ಮೈತ್ರಿ ಸರಕಾರ ರಚನೆ"

Update: 2018-05-22 17:04 GMT

ಚಿಕ್ಕಮಗಳೂರು, ಮೇ 22: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ರಾಜ್ಯದಲ್ಲಿ ಪೂರ್ಣಾವಧಿ ಆಡಳಿತ ನಡೆಸುತ್ತದೆ, ಈ ಬಗ್ಗೆ ಬಿಜೆಪಿ ಮುಖಂಡರು ಹಗಲುಗನಸು ಕಾಣುವ ಅಗತ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಹೇಳಿದ್ದಾರೆ.

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರ ಹೆಚ್ಚು ದಿನ ಬಾಳುವುದು ಕಷ್ಟ ಎಂಬ ಶಾಸಕ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿರುವ ಅವರು ಮೈತ್ರಿ ಸರಕಾರ ಪತನದ ಬಗ್ಗೆ ಬಿಜೆಪಿ ಮುಖಂಡರು ಹಗಲುಗನಸು ಕಾಣತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವೈಚಾರಿಕವಾದ ಭಿನ್ನಾಭಿಪ್ರಾಯವಿತ್ತೇ ಹೊರತು ಸೈದ್ಧಾಂತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇರಲಿಲ್ಲ. ಅದನ್ನು ಎರಡೂ ಪಕ್ಷಗಳ ಮುಖಂಡರು ಈಗಾಗಲೇ ಪರಿಹರಿಸಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನುಕೂಲ ಸಿಂಧು ರಾಜಕಾರಣಕ್ಕೆ ಮುಂದಾಗಿಲ್ಲ. ಹಣ ಅಥವಾ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಅದಕ್ಕೆ ಬದಲಾಗಿ ಕೋಮುವಾದಿಗಳಿಂದ ನಾಡಿನ ಸಾಮರಸ್ಯತೆಯನ್ನು ಕಾಪಾಡಲು ಒಗ್ಗೂಡಿವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬದ್ಧತೆ ಇದೆ. ಬಡವರು, ರೈತರು, ಕೂಲಿ ಕಾರ್ಮಿಕರ ಬಗ್ಗೆ ಕಾಳಜಿ ಇದೆ. ಅವರ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಯಾಗುತ್ತದೆ ಎಂದಿರುವ ದೇವರಾಜ್, ಈ ಹಿಂದೆ ಇದೇ ಜೆಡಿಎಸ್‍ನೊಂದಿಗೆ ಬಿ.ಎಸ್.ಯಡಿಯೂರಪ್ಪನವರು ಮೈತ್ರಿ ಮಾಡಿಕೊಂಡು ಸರಕಾರ ನಡೆಸಿದ್ದು, ಬಿಜೆಪಿಯ ಅನುಕೂಲ ಸಿಂಧು ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮುಖಂಡರುಗಳಿಗೆ ಬದ್ದತೆ ಇರುವುದರಿಂದ ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ಪತನವಾಗುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News