ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿ: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2018-05-22 17:32 GMT

ಚಿಕ್ಕಮಗಳೂರು, ಮೇ 22: ಜಿಲ್ಲೆಯ ಆಯ್ದ 74 ಗ್ರಾಮಗಳಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಮೇ 23 ರಿಂದ 26 ರವರೆಗೆ ತೀವ್ರ ತರ ಮಿಷನ್ ಇಂದ್ರ ಧನುಷ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಇಂದ್ರ ಧನುಷ್ ಹಾಗೂ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದ್ರ ಧನುಷ್ ಅಭಿಯಾನದಡಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವುದರಿಂದ 9 ತರಹದ ರೋಗಗಳಾದ ಕ್ಷಯ, ಪೋಲಿಯೋ, ದಡಾರ, ರುಬೆಲ್ಲಾ, ಗಂಟಲು ಮಾರಿ, ಧನುರ್ವಾಯು ಸೇರಿದಂತೆ ಮತ್ತಿತರ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ, ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ 6 ವರ್ಷದೊಳಗಿನ ಮಕ್ಕಳು ಸೇರಿದಂತೆ ಗರ್ಭಿಣಿಯರಿಗೆ ಲಸಿಕೆ ಹಾಕಿಸುವಂತೆ ಎಚ್ಚರ ವಹಿಸಬೇಕೆಂದು ವೈದ್ಯಾಧಿಕಾರಿಗಳಲ್ಲಿ ತಿಳಿಸಿದರು.

ಚಿಕ್ಕಮಗಳೂರು ತಾಲೂಕಿನಲ್ಲಿ 42, ಕಡೂರು ತಾಲೂಕಿನಲ್ಲಿ 22 ಹಾಗೂ ತರೀಕೆರೆ ತಾಲೂಕಿನಲ್ಲಿ 10 ಗ್ರಾಮಗಳ ಒಟ್ಟು 74 ಗ್ರಾಮದಲ್ಲಿ 26647 ಜನಸಂಖ್ಯೆ ಹೊಂದಿದೆ, ಆಶಾ ಕಾರ್ಯಕರ್ತೆರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಯಾವುದೇ ವ್ಯಕ್ತಿ ಇದರಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

ಸಾಮಾನ್ಯವಾಗಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿ ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗೃತ ಕ್ರಮಗಳನ್ನು ವಹಿಸಬೇಕೆಂದ ಅವರು, ಶಾಲಾ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಿ ಕರ ಪತ್ರಗಳನ್ನು ನೀಡಬೇಕೆಂದು ಸಲಹೆ ನೀಡಿದರು.       

ಅತಿಸಾರ ಬೇಧಿ ನಿಯಂತ್ರಣ ಪಾತ್ಯಕ್ಷಿಕೆ ನೀಡುವುದರೊಂದಿಗೆ ಜಿಲ್ಲೆಯ 0-5 ವರ್ಷದೊಳಗಿನ 1,0936 ಮಕ್ಕಳಿಗೆ ಅತಿಸಾರ ಬೇಧಿ ನಿಯಂತ್ರನ ಯೋಜನೆಯಲ್ಲಿ ಝಿಂಕ್ ಮತ್ತು ಓಆರ್‍ಎಸ್ ದ್ರಾವನ ನೀಡಲು ಇದೇ ಮೇ 28 ರಿಂದ ಜೂನ್ 9 ರವರೆಗೆ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಿಪಾ ವೈರಸ್ ದಾಳಿಯಿಂದಾಗಿ ಪಕ್ಕದ ರಾಜ್ಯವಾದ ಕೇರಳದಲ್ಲಿ 8 ಮಂದಿ ಮರಣ ಹೊಂದಿದ್ದಾರೆಂದು ಕೇಳಿ ಬಂದಿರುವ ಹಿನ್ನಲೆಯಲ್ಲಿ ಜಿಲ್ಲೆಯ ವೈದ್ಯಾಧಿಕಾರಿಗಳು ಜಿಲ್ಲೆಯಲ್ಲಿ ನಿಪಾ ವೈರಸ್‍ಗಳು ಹರಡದಂತೆ ಅಗತ್ಯ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ವೈರಸ್‍ಗಳು ಹರಡಲು ಕಾರಣವೇನು? ಅವುಗಳಿಗೆ ಸೂಕ್ತ ಚಿಕಿತ್ಸೆ ಏನು? ಔಷಧಿಗಳ ಲಭ್ಯತೆ ಇವೆಯೇ? ರೋಗದ ಲಕ್ಷಣಗಳೇನು? ಎಂದು ಪ್ರಶ್ನಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಅವರು ಬಾವಲಿಗಳಿಂದ ಈ ವೈರಸ್‍ಗಳು ಹರಡುವ ಸಾಧ್ಯತೆಗಳು ಇವೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದ ಅವರು ಯಾವುದೇ ರೋಗ ಬಂದು ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುಂಜಾಗೃತೆ ವಹಿಸುವುದು ಮುಖ್ಯ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನಪ್ಪ ಎಸ್, ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪ, ಆರ್.ಸಿ.ಹೆಚ್ ಅಧಿಕಾರಿ ಕಿರಣ್ ಎಸ್.ಜಿ, ಕುಟುಂಬ ಕಲ್ಯಾಣಾಧಿಕಾರಿ ಅಶ್ವತ್ ಬಾಬು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News