ಜಿಲ್ಲೆಯಲ್ಲಿ 'ನಿಫ್ಹಾ ವೈರಸ್' ಹರಡದಂತೆ ಅಗತ್ಯ ಕ್ರಮ: ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
ಮೈಸೂರು,ಮೇ.22: ಜಿಲ್ಲೆಯಲ್ಲಿ 'ನಿಫ್ಹಾ ವೈರಸ್' ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಕದ ರಾಜ್ಯ ಕೇರಳದಲ್ಲಿ ನಿಫ್ಹಾ ವೈರಸ್ ಭೀತಿ ಕಂಡುಬಂದಿದ್ದು, ಕೇಂದ್ರ ಆರೋಗ್ಯ ಸುರಕ್ಷಿತ ಇಲಾಖೆ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ನಿಫ್ಹಾ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಕಾಯಿಲೆ ಬಂದರೆ ತಕ್ಷಣ ಚಿಕಿತ್ಸೆ ನೀಡಲು ಜಿಲ್ಲಾ ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳುಳ್ಳ ವಿಶೇಷ ಚಿಕಿತ್ಸಾ ಘಟಕವನ್ನು ಸ್ಥಾಪಿಸಲಾಗಿದ್ದು, ಅಗತ್ಯ ಔಷಧಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧಮಾಡಲಾಗಿದೆ ಎಂದು ಹೇಳಿದರು.
ಪ್ರವಾಸಿಗಳು ಹೆಚ್ಚು ಕೇರಳದಿಂದ ಬರುವ ಕಾರಣ ಮೈಸೂರಿನ ಅರಮನೆ, ಮೃಗಾಲಯ, ಕೆ.ಆರ್.ಎಸ್, ಚಾಮುಂಡಿಬೆಟ್ಟ ಮತ್ತು ಕೇರಳ ಗಡಿ ಭಾಗಗಳಾದ ಚಾಮರಾಜನಗರ, ಎಚ್.ಡಿ.ಕೋಟೆ, ಮಡಿಕೇರಿ, ಗುಂಡ್ಲುಪೇಟೆ ಗಳಲ್ಲಿ ಕನ್ನಡ, ಇಂಗ್ಲೀಷ್, ಜೊತೆಗೆ ಮಲೆಯಾಳಂ ಭಾಷೆಯಲ್ಲಿ ಬ್ಯಾನರ್ ಗಳನ್ನು ಕಟ್ಟುವ ಮೂಲಕ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಎಲ್ಲಾ ತಾಲೂಕು ವೈದ್ಯಾಧಿಕಾರಿಗಳಿಗೆ ತಾಲೂಕುಗಳಲ್ಲಿ ಜಾಗೃತಿಮೂಡಿಸಲು ಸೂಚಿಸಲಾಗಿದೆ. ಗ್ರಾಮಾಂತರ ಭಾಗಗಳಲ್ಲಿ ಕೆಲಸ ನಿರ್ವಹಿಸುವ ಎ.ಎನ್.ಎಮ್‍ಗಳಿಗೆ ಕಾಯಿಲೆಗಳ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಾವಲಿ ಹಕ್ಕಿ ತಿಂದ ಹಣ್ಣಿನಿಂದ ಈ ಕಾಯಿಲೆ ಹರಡುವ ಭೀತಿ ಇದೆ. ಆ ಹಣ್ಣುಗಳನ್ನು ಹೆಚ್ಚು ಹಂದಿಗಳು ತಿನ್ನುತ್ತವೆ. ಹಂದಿ ಮಾಂಸ ಸೇವನೆಯಿಂದ ಕಾಯಿಲೆ ಬರುವ ಸಾಧ್ಯತೆ ಇದ್ದು, ಹಂದಿ ಸಾಕುವವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಶುಪತಿ, ಜ್ವರ, ತಲೆ ನೋವು, ವಾಂತಿ, ಬೇದಿ ಈ ಕಾಯಿಲೆಯ ಲಕ್ಷಣಗಳು, ಇದರಿಂದ ಶ್ವಾಸಕೋಶ ತೊಂದರೆ ಹಾಗು ಬ್ರೈನ್ ಫಿವರ್ ಬರುತ್ತದೆ. ಜೊತೆಗೆ ಫೀಡ್ಸ್ ಬರುತ್ತದೆ. ಆದರೆ ಜ್ವರ ಬಂದಾಕ್ಷಣ ಈ ಕಾಯಿಲೆ ಇದೆ ಎಂದರ್ಥವಲ್ಲ. ಜ್ವರ ಬಂದ ತಕ್ಷಣ ವೈದ್ಯರ ಬಳಿ ತೆರಳಿ ಅಗತ್ಯ ಚಿಕಿತ್ಸೆ ಪಡೆದರೆ ಒಳ್ಳೆಯದು ಎಂದರು.
ಮತ್ತೊಬ್ಬ ವೈದ್ಯ ಡಾ.ಚಿದಬಂರ ಮಾತನಾಡಿದ ಈ ರೋಗ 1998ರಲ್ಲಿ ಪಶ್ಚಿಮ ಬಂಗಾಳದಲ್ಲಿ, ಕಾಣಿಸಿಕೊಂಡಿತ್ತು. ಮತ್ತೆ 2001 ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಈಗ ಮತ್ತೆ ಈ ಕಾಯಿಲೆಯ ಭೀತಿ ಉಂಟಾಗಿದೆ. ಇದರಿಂದ ಸಾರ್ವಜನಿಕರು ಹೆದರುವ ಅಗತ್ಯವಿಲ್ಲ, ನಾವು ತಿನ್ನುವ ಪದಾರ್ಥಗಳನ್ನು ತೊಳೆದು ತಿನ್ನಬೇಕು. ಈ ಕಾಯಿಲೆಗೆ ಚಿಕಿತ್ಸೆ ಎನ್ನುವುದಿಲ್ಲ. ನಮ್ಮ ದೇಹದ ರೆಸಿಸ್ಟನೆನ್ಸ್ ಪವರ್ ಮೇಲೆ ಈ ಕಾಯಿಲೆ ಗುಣಪಡುತ್ತದೆ ಎಂದು ಹೇಳಿದರು.