ಶಿಕಾರಿಪುರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2018-05-23 11:38 GMT

ಶಿಕಾರಿಪುರ,ಮೇ.23: ಚುನಾವಣಾ ಪೂರ್ವದಲ್ಲಿ ಪರಸ್ಪರ ನಿಂದಿಸಿ ಇದೀಗ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಅನೈತಿಕ ಮೈತ್ರಿ ಮೂಲಕ ಕೇವಲ ಅಧಿಕಾರಕ್ಕಾಗಿ ಮಾತ್ರ ಸರ್ಕಾರ ರಚನೆಗೆ ಸಿದ್ಧವಾಗಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನತೆ ಭವಿಷ್ಯದಲ್ಲಿ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಗುರುಮೂರ್ತಿ ಎಚ್ಚರಿಸಿದರು.

ಬುಧವಾರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ದ ತಾ.ಬಿಜೆಪಿ ವತಿಯಿಂದ ಕರಾಳ ದಿನಾಚರಣೆ ಅಂಗವಾಗಿ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಟೀಕಿಸಿದ್ದ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡರನ್ನು ಹೀನಾಯವಾಗಿ ನಿಂದಿಸಿ, ಕುಮಾರಸ್ವಾಮಿಗೆ ನಿಮ್ಮಪ್ಪನಾಣೆಗೂ ರಾಜ್ಯದ ಮುಖ್ಯಮಂತ್ರಿಯಾಗಲು ಸಾದ್ಯವಿಲ್ಲ ಎಂದಿದ್ದರು. ಇದೀಗ ಚುನಾವಣಾ ಫಲಿತಾಂಶದ ಪೂರ್ವದಲ್ಲಿಯೇ ದೇವೇಗೌಡರ ಮನೆಗೆ ತೆರಳಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಚರ್ಚಿಸಿ, ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳಿಸಿದ ಬಿಜೆಪಿಗೆ ಅಧಿಕಾರ ದೊರೆಯದಂತೆ ಅನೈತಿಕ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿದ ಅವರು, ದೇವೇಗೌಡರು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಎಂಬ ಕನಿಷ್ಠ ಪ್ರಜ್ಞೆಯಿಲ್ಲದೆ ಪರಮನೀಚ ಎಂದು ನಿಂದಿಸಿ ಇದೀಗ ಪುತ್ರನಿಗೆ ಮುಖ್ಯಮಂತ್ರಿ ಹುದ್ದೆಯ ಅಸೆಯಲ್ಲಿ ಎಲ್ಲಾ ನಿಂದನೆಗಳನ್ನು ಮರೆತು ಒಂದಾಗಿದ್ದಾರೆ. ಅತ್ಯಧಿಕ ಸ್ಥಾನಗಳಿಸಿದ ಬಿಜೆಪಿಯನ್ನು ದೂರವಿಟ್ಟ ಜೆಡಿಎಸ್ ಕಾಂಗ್ರೆಸ್ ಪಕ್ಷದ ಬಗ್ಗೆ ರಾಜ್ಯದ ಜನತೆ ಆಕ್ರೋಶಭರಿತರಾಗಿದ್ದು, ಮುಂಬರುವ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ದೇಶದ 21 ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ರಾಜ್ಯದಲ್ಲಿ ಹಣಬಲ, ತೋಳ್ಬಲ ಅಧಿಕಾರ ದುರುಪಯೋಗಪಡಿಸಿಕೊಂಡು ಕೇವಲ 78 ಸ್ಥಾನಗಳಿಸಿದ್ದು, ದೋಸ್ತಿ ಸರ್ಕಾರದ ನೆಪದಲ್ಲಿ ನಿಮ್ಮಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ದ ಗುಡುಗಿ ಇದೀಗ ಅವರನ್ನು ಮುಖ್ಯಮಂತ್ರಿಯಾಗಿಸಲು ಅಪವಿತ್ರ ಮೈತ್ರಿಗೆ ಸಿದ್ದವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.

ರೈಲ್ವೆ, ಸ್ಮಾರ್ಟ್ ಸಿಟಿ, ಕೇಂದ್ರೀಯ ಶಾಲೆ ಮತ್ತಿತರ ಹಲವು ಅಭಿವೃದ್ದಿ ಕಾಮಗಾರಿಗಳ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲಿಯೇ ಗುರುತಿಸಿಕೊಳ್ಳುವಂತೆ ಶ್ರಮಿಸಿದ ಸಂಸದ ಯಡಿಯೂರಪ್ಪನವರ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನಾ ಶ್ರೀನಿವಾಸ್ ಅತ್ಯಂತ ಕೇವಲವಾಗಿ ಟೀಕಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ ಅವರು, ಜಿಲ್ಲಾಧ್ಯಕ್ಷರಾದ ನಂತರ ಪಕ್ಷವನ್ನು ಸಂಪೂರ್ಣ ನೆಲಕಚ್ಚುವಂತೆ ಮಾಡಿದ ಹೆಗ್ಗಳಿಕೆಯ ಜತೆಗೆ ಹಿರಿಯ ರಾಜಕಾರಣಿ ಕಾಗೋಡುರವರನ್ನು ಸೋಲಿಸಿದ ಕೀರ್ತಿ ಅವರಿಗೆ ಸಲ್ಲಬೇಕಾಗಿದೆ. ಈ ಕೂಡಲೇ ನೈತಿಕತೆ ಇದ್ದಲ್ಲಿ ರಾಜೀನಾಮೆ ಸಲ್ಲಿಸಿ ವಾಪಾಸು ಮನೆಗೆ ಹೋಗುವಂತೆ ಲೇವಡಿ ಮಾಡಿದರು.

ಆರಂಭದಲ್ಲಿ ಜೆಡಿಎಸ್ ಕಾಂಗ್ರೆಸ್ ಅನೈತಿಕ ಮೈತ್ರಿಯನ್ನು ಖಂಡಿಸಿ ಬಸ್‌ ನಿಲ್ದಾಣದ ಮೂಲಕ ನಡೆದ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ ಧಿಕ್ಕಾರದ ಘೋಷಣೆ ಹಾಕಿದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ಸುಬ್ರಹ್ಮಣ್ಯ ಕವಲಿ, ಪುರಸಭಾ ಸದಸ್ಯ ವಸಂತಗೌಡ, ಎಂ.ಎಚ್.ರವೀಂದ್ರ, ಪಾಲಾಕ್ಷಪ್ಪ, ಸೈಯದ್‌ಪೀರ್, ಮುಖಂಡ ಸಣ್ಣ ಹನುಮಂತಪ್ಪ, ಸುಕೇಂದ್ರಪ್ಪ,ಕೆ.ಪಿ ಮಂಜುನಾಥ, ಸಿದ್ದಲಿಂಗಪ್ಪ,ಶಿವನಗೌಡ ಪಾಟೀಲ್, ಶ್ರೀಧರ ನಾಡಿಗ್, ಉಮಾಶಂಕರ, ಪ್ರವೀಣಶೆಟ್ಟಿ, ರೇಣುಕಸ್ವಾಮಿ, ಕೃಷ್ಣಮೂರ್ತಿ, ಕರಿಬಸಪ್ಪ, ತಿಮ್ಮಾರೆಡ್ಡಿ, ಪ್ರವೀಣಬೆಣ್ಣೆ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News